ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಚೆನ್ನೈ ಗೆಲುವಿನ ಓಟಕ್ಕೆ ತಡೆಯೊಡ್ಡುವುದೇ ಮುಂಬೈ

ಮಹೇಂದ್ರಸಿಂಗ್ ಧೋನಿ–ರೋಹಿತ್ ಶರ್ಮಾ ಬಳಗಗಳ ಹಣಾಹಣಿ; ಸತತ ಐದು ಪಂದ್ಯಗಳಲ್ಲಿ ಗೆದ್ದಿರುವ ಸೂಪರ್ ಕಿಂಗ್ಸ್
Last Updated 30 ಏಪ್ರಿಲ್ 2021, 13:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯುವ ಆಟಗಾರ ಋತುರಾಜ್ ಗಾಯಕವಾಡ್ ಮತ್ತು ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಫ್ ಡುಪ್ಲೆಸಿ ಜೊತೆಯಾಟವನ್ನು ಮುರಿಯುವುದು ಹೇಗೆ?

ಹೌದು; ಶನಿವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಈ ಸವಾಲಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

ಏಕೆಂದರೆ, ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸತತ ಐದು ಪಂದ್ಯಗಳ ಗೆಲುವಿನ ಓಟದಲ್ಲಿ ಈ ಆರಂಭಿಕ ಜೋಡಿಯು ಮಹತ್ವದ ಕಾಣಿಕೆ ನೀಡಿದೆ. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜ ಮತ್ತು ಸ್ಯಾಮ್ ಕರನ್ ಅವರು ರನ್‌ಗಳ ಕಾಣಿಕೆ ನೀಡುತ್ತಿದ್ದಾರೆ. ಮಹೇಂದ್ರಸಿಂಗ್ ಧೋನಿ ಲಯ ಕಂಡುಕೊಂಡರೆ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲವರ್ಧನೆಯಾಗುವುದು ಖಚಿತ.

ಬೌಲಿಂಗ್‌ನಲ್ಲಿ ದೀಪಕ್ ಚಾಹರ್, ಲುಂಗಿ ಗಿಡಿ, ಜಡೇಜ ಮತ್ತು ಕರನ್ ಅಮೋಘ ಲಯದಲ್ಲಿದ್ದಾರೆ. ಎದುರಾಳಿ ತಂಡಗಳಿಗೆ ಜೊತೆಯಾಟಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ರೋಹಿತ್ ಶರ್ಮಾ ಬಳಗವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡಿದರೆ ಮಾತ್ರ ದಿಟ್ಟ ಸವಾಲು ಒಡ್ಡಬಹುದು. ಇಲ್ಲದಿದ್ದರೆ ಧೋನಿಯ ತಂತ್ರಗಾರಿಕೆಯೇ ಮೇಲುಗೈ ಸಾಧಿಸುವುದು ಖಚಿತ.

ಮುಂಬೈ ತಂಡವು ಮೂರು ಪಂದ್ಯಗಳಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಹೋದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಿಂಟನ್ ಡಿ ಕಾಕ್ ಲಯಕ್ಕೆ ಮರಳಿದ್ದರಿಂದ ಜಯ ಸಾಧ್ಯವಾಯಿತು. ರೋಹಿತ್ ಇನ್ನೂ ಸಂಪೂರ್ಣವಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಬ್ಯಾಟಿಂಗ್ ಮಾಡುತ್ತಿಲ್ಲ. ಸೂರ್ಯಕುಮಾರ್ ಯಾದವ್ ಕೂಡ ತಮ್ಮ ನೈಜ ಪ್ರತಿಭೆಯನ್ನು ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಕೃಣಾಲ್ ಪಾಂಡ್ಯ, ಕೀರನ್ ಪೊಲಾರ್ಡ್‌ ಕೊನೆಯ ಹಂತದ ಓವರ್‌ಗಳಲ್ಲಿ ಸ್ಥಿರವಾದ ಆಟವಾಡುತ್ತಿರುವುದು ಸಮಾಧಾನಕರ. ಟ್ರೆಂಟ್ ಬೌಲ್ಟ್‌, ಜಸ್‌ಪ್ರೀತ್ ಬೂಮ್ರಾ ಅವರಿಂದ ಇನ್ನೂ ಮ್ಯಾಚ್‌ ವಿನ್ನಿಂಗ್ ಬೌಲಿಂಗ್ ಹೊರಹೊಮ್ಮಿಲ್ಲ. ಅವರು ಚೆನ್ನೈ ಎದುರು ತಮ್ಮ ಪರಿಣಾಮಕಾರಿ ಯಾರ್ಕರ್‌ಗಳ ಆಟ ತೋರಿದರೆ, ಚಾಂಪಿಯನ್ ತಂಡದ ಜಯದ ಆಸೆ ಈಡೇರಬಹುದು.

ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ನಾಯಕರೆಂಬ ಹೆಗ್ಗಳಿಕೆಯಿರುವ ರೋಹಿತ್ ಮತ್ತು ಧೋನಿ ಅವರಿಬ್ಬರಿಗೂ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಅದರಿಂದಾಗಿ ರೋಚಕ ಹಣಾಹಣಿ ಕಾಣುವ ಸಾಧ್ಯತೆಯೂ ಇದೆ.

ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ–ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ್, ಫಫ್ ಡುಪ್ಲೆಸಿ, ಸುರೇಶ್ ರೈನಾ, ಅಂಬಟಿ ರಾಯುಡು, ಸ್ಯಾಮ್ ಕರನ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಮೋಯಿನ್ ಅಲಿ, ಲುಂಗಿ ಗಿಡಿ, ದೀಪಕ್ ಚಾಹರ್. ಕೆ. ಗೌತಮ್, ರಾಬಿನ್ ಉತ್ತಪ್ಪ, ಇಮ್ರಾನ್ ತಾಹೀರ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿಕಾಕ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃಣಾಲ್ ಪಾಂಡ್ಯ, ನೇಥನ್ ಕೌಲ್ಟರ್‌ನೈಲ್, ಜಯಂತ್ ಯಾದವ್, ರಾಹುಲ್ ಚಾಹರ್, ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್‌, ಇಶಾನ್ ಕಿಶನ್, ಪಿಯೂಷ್ ಚಾವ್ಲಾ, ಧವಳ್ ಕುಲಕರ್ಣಿ

ಪಂದ್ಯ ಅರಂಭ: ರಾತ್ರಿ 7.30ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT