ಪಿಚ್‌ ಬಗ್ಗೆ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಕಿಡಿ

ಬುಧವಾರ, ಏಪ್ರಿಲ್ 24, 2019
29 °C

ಪಿಚ್‌ ಬಗ್ಗೆ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಕಿಡಿ

Published:
Updated:

ನವದೆಹಲಿ: ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್‌ ರಿಕಿ ಪಾಂಟಿಂಗ್ ಅವರು ಫಿರೋಜ್ ಷಾ ಕೋಟ್ಲಾ ಅಂಗಣದ ಪಿಚ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯರನ್ನು 129 ರನ್‌ಗಳಿಗೆ ನಿಯಂತ್ರಿಸಿದ್ದ ಸನ್‌ರೈಸರ್ಸ್‌ ನಂತರ ಐದು ವಿಕೆಟ್‌ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಹೊರತುಪಡಿಸಿದರೆ ಉಳಿದವರು ಯಾರೂ ಮಿಂಚಲಿಲ್ಲ.

ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ತಂಡ ಜಾನಿ ಬೇಸ್ಟೊ (48; 28 ಎಸೆತ, 1 ಸಿಕ್ಸರ್‌, 9 ಬೌಂಡರಿ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗೆದ್ದಿತ್ತು. ಸಂದೀಪ್ ಲಚಿಮಾನೆ, ಅಕ್ಷರ್ ಪಟೇಲ್‌, ಕಗಿಸೊ ರಬಾಡ, ರಾಹುಲ್ ತೇವಾತಿಯಾ ಮತ್ತು ಇಶಾಂತ್ ಶರ್ಮಾ ತಲಾ ಒಂದೊಂದು ವಿಕೆಟ್ ಕಬಳಿಸಿದ್ದರು.

ಪಂದ್ಯದ ನಂತರ ಮಾತನಾಡಿದ ಪಾಂಟಿಂಗ್‌ ಕ್ರೀಡಾಂಗಣದ ಸಿಬ್ಬಂದಿ ಮೇಲೆ ಕಿಡಿ ಕಾರಿದ್ದರು. ಅತ್ಯಂತ ಕೆಟ್ಟ ಪಿಚ್‌ ಸಿದ್ಧಪಡಿಸಿದ್ದಾರೆ ಎಂದು ದೂರಿದ್ದರು. 

‘ಪಂದ್ಯಕ್ಕೂ ಮೊದಲು ಕ್ರೀಡಾಂಗಣದ ಸಿಬ್ಬಂದಿ ಜೊತೆ ಮಾತನಾಡಿದ್ದೆವು. ಅವರ ಅಭಿಪ್ರಾಯದ ಪ್ರಕಾರ ಇದು ಅತ್ಯುತ್ತಮ ಪಿಚ್ ಆಗಬೇಕಿತ್ತು. ಆದರೆ ಪಂದ್ಯ ಆರಂಭವಾದ ನಂತರ ನಮ್ಮ ತಂಡಕ್ಕೆ ಅಚ್ಚರಿ ಕಾದಿತ್ತು. ಇಲ್ಲಿ ಚೆಂಡು ನಿಧಾನಗತಿಯಲ್ಲಿ ಸಾಗುತ್ತಿತ್ತು ಮತ್ತು ಹೆಚ್ಚು ಬೌನ್ಸ್ ಪಡೆಯುತ್ತಿರಲಿಲ್ಲ’ ಎಂದು ಪಾಂಟಿಂಗ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು, ಅಂಗಣದ ಸಿಬ್ಬಂದಿ ಜೊತೆ ಪಾಂಟಿಂಗ್ ಮಾತುಕತೆ ನಡೆಸಲೇ ಇಲ್ಲ ಎಂದಿದ್ದಾರೆ.

‘ಪಾಂಟಿಂಗ್ ತಂಡದ ಪಿಚ್ ಸಂಯೋಜಕರ ಜೊತೆಯಷ್ಟೇ ಚರ್ಚಿಸಿದ್ದಾರೆ. ಪಾಂಟಿಂಗ್‌ಗೆ ಅವರು ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !