‘ಸೂಪರ್’ ಬೌಲಿಂಗ್‌: ರಬಾಡ ದಾಖಲೆ

ಶುಕ್ರವಾರ, ಏಪ್ರಿಲ್ 26, 2019
21 °C

‘ಸೂಪರ್’ ಬೌಲಿಂಗ್‌: ರಬಾಡ ದಾಖಲೆ

Published:
Updated:
Prajavani

ನವದೆಹಲಿ: ಕೇವಲ 11 ರನ್‌ಗಳ ಗೆಲುವಿನ ಗುರಿ ದಾಟಲು ಬಿಡದ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಐಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತವನ್ನು ‘ಡಿಫೆಂಡ್‌’ ಮಾಡಿಕೊಂಡ ಬೌಲರ್ ಎನಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವಿನ ಪಂದ್ಯ ಟೈ ಆಗಿತ್ತು. 186 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕ್ಯಾಪಿಟಲ್ಸ್‌ ಆರು ವಿಕೆಟ್‌ಗಳಿಗೆ 185 ರನ್ ಗಳಿಸಿತ್ತು. ಹೀಗಾಗಿ ಫಲಿತಾಂಶಕ್ಕೆ ಸೂಪರ್ ಓವರ್ ಮೊರೆ ಹೋಗಲಾಯಿತು. ಇದು ಈ ಬಾರಿಯ ಐಪಿಎಲ್‌ ಟೂರ್ನಿಯ ಮೊದಲ ಸೂಪರ್ ಓವರ್ ಪಂದ್ಯವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ಒಂದು ಓವರ್‌ನಲ್ಲಿ 10 ರನ್‌ ಗಳಿಸಿತ್ತು. ಸುಲಭ ಗುರಿ ಬೆನ್ನತ್ತಲು ಕ್ರೀಸ್‌ಗೆ ಇಳಿದ ನೈಟ್‌ ರೈಡರ್ಸ್ ಬ್ಯಾಟ್ಸ್‌ಮನ್‌ಗಳು ರಬಾಡ ಅವರ ಯಾರ್ಕರ್‌ಗೆ ನಲುಗಿದರು.

ರಬಾಡ ಅವರ ಮೊದಲ ಎಸೆತ ಎದುರಿಸಲು ಸಜ್ಜಾಗಿದ್ದವರು ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್‌. ನೈಟ್ ರೈಡರ್ಸ್ ಪರ 28 ಎಸೆತಗಳಲ್ಲಿ 62 ರನ್‌ ಗಳಿಸಿದ್ದ ರಸೆಲ್‌ ಸೂಪರ್ ಓವರ್‌ನಲ್ಲಿ ಪರದಾಡಿದರು. ಮೂರನೇ ಎಸೆತದಲ್ಲಿ ಅವರ ವಿಕೆಟ್ ಉರುಳಿತು. ಆರು ಎಸೆತಗಳಲ್ಲಿ ಏಳು ರನ್‌ ಮಾತ್ರ ಬಿಟ್ಟುಕೊಟ್ಟ ರಬಾಡ ಪಂದ್ಯದ ಹೀರೊ ಆದರು.

ಆಗ ಯಾರ್ಕರ್‌ ಎಸೆತವೇ ಸೂಕ್ತವಾಗಿತ್ತು: ರಬಾಡ
ನಿಧಾನಗತಿಯ ಎಸೆತ ಮತ್ತು ಬೌನ್ಸರ್ ಹಾಕಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಪ್ರಯತ್ನಿಸಬಹುದಿತ್ತು. ಆದರೆ ಆ ಸಂದರ್ಭದಲ್ಲಿ ಯಾರ್ಕರ್‌ ಅಸ್ತ್ರವೇ ಸೂಕ್ತ ಎಂದು ಎನಿಸಿತು. ಆದ್ದರಿಂದ ಅದನ್ನೇ ಬಳಸಲು ನಿರ್ಧರಿಸಿದೆ ಎಂದು ಪಂದ್ಯದ ನಂತರ ರಬಾಡ ಹೇಳಿದರು.

‘ರನ್‌ ಅಪ್‌ ಆರಂಭಿಸುವಾಗ ಲೆಂಗ್ತ್ ಬಾಲ್ ಎಸೆಯುವುದು ನನ್ನ ಉದ್ದೇಶವಾಗಿತ್ತು. ಆದರೆ ರಸೆಲ್‌ ಮುಂದೆ ಆ ಎಸೆತ ದುಬಾರಿಯಾಗಬಹುದು ಎಂದೆನಿಸಿ ಯಾರ್ಕರ್ ಹಾಕಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ ನನ್ನನ್ನು ದ್ವಂದ್ವ ಕಾಡಿತು. ಕೊನೆಗೆ ಯಾರ್ಕರ್ ಎಸೆಯುವುದೇ ಸೂಕ್ತ ಎನಿಸಿತು’ ಎಂದು ಅವರು ಹೇಳಿದರು.

ಶ್ರೇಷ್ಠ ಎಸೆತ: ಗಂಗೂಲಿ
ರಬಾಡ ಅವರ ಸೂಪರ್ ಓವರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ಐಪಿಎಲ್ ಟೂರ್ನಿಯ ಶ್ರೇಷ್ಠ ಎಸೆತ ಎಂದು ಹಿರಿಯ ಆಟಗಾರ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

’ಆ್ಯಂಡ್ರೆ ರಸೆಲ್ ಅವರಂಥ ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಅಂಥ ಎಸೆತ ಹಾಕಲು ನಿರ್ಧರಿಸಿದ್ದೇ ವಿಶೇಷ. ಅದರಲ್ಲಿ ಯಶಸ್ಸು ಗಳಿಸಿದ್ದು ಮತ್ತೊಂದು ಅಚ್ಚರಿ’ ಎಂದು ಗಂಗೂಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !