ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಸರಪಳಿ ಕಳಚುವ ಒತ್ತಡದಲ್ಲಿ ದಿನೇಶ್

ಕೋಲ್ಕತ್ತ ನೈಟ್ ರೈಡರ್ಸ್‌ –ರಾಜಸ್ಥಾನ್ ರಾಯಲ್ಸ್ ಹಣಾಹಣಿ ಇಂದು
Last Updated 24 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಸತತ ಐದು ಸೋಲುಗಳಿಂದಾಗಿ ಜರ್ಜರಿತವಾಗಿರುವ ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಪ್ಲೇ ಆಫ್‌ ಹಾದಿ ಕಠಿಣವಾಗಿದೆ. ಜೊತೆಗೆ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರ ಮೇಲೂ ಫ್ರ್ಯಾಂಚೈಸ್‌ ಕೆಂಗಣ್ಣು ಬೀರುತ್ತಿದೆ.

ಗುರುವಾರ ಇಲ್ಲಿ ನಡೆಯಲಿರುವ ರಾಜಸ್ಥಾನ್ ರಾಯಲ್ಸ್‌ ತಂಡದ ಎದುರು ಗೆದ್ದರೆ ದಿನೇಶ್ ಕಾರ್ತಿಕ್ ಮೇಲಿನ ಒತ್ತಡ ತುಸು ಕಡಿಮೆಯಾಗಬಹುದು. ಕೆಕೆಆರ್‌ಗೂ ಮತ್ತೆ ಆತ್ವವಿಶ್ವಾಸ ಮೂಡಬಹುದು.

ಎರಡೂ ತಂಡಗಳು ತಲಾ ಹತ್ತು ಪಂದ್ಯಗಳನ್ನು ಆಡಿವೆ. ಕೆಕೆಆರ್ ನಾಲ್ಕರಲ್ಲಿ ಗೆದ್ದಿದೆ. ಆದರೆ ರಾಜಸ್ಥಾನ್ ತಂಡವು ಮೂರು ಗೆದ್ದು ಏಳು ಸೋತಿದೆ. ಸತತ ಸೋಲನುಭವಿಸುತ್ತಿದ್ದ ರಾಯಲ್ಸ್‌ ತಂಡದ ನಾಯಕತ್ವವನ್ನು ಅಜಿಂಕ್ಯ ರಹಾನೆಯಿಂದ ಸ್ಟೀವನ್ ಸ್ಮಿತ್‌ ವರ್ಗಾಯಿಸಲಾಗಿತ್ತು. ಹೋದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅಜಿಂಕ್ಯ ಶತಕ ಬಾರಿಸಿದ್ದರು. ಆದರೆ, ತಂಡವು ಸೋತಿತ್ತು. ಇದೀಗ ಈಡನ್ ಗಾರ್ಡನ್‌ನಲ್ಲಿ ಮತ್ತೊಮ್ಮೆ ಸ್ಮಿತ್ ನಾಯಕತ್ವದ ಸತ್ವಪರೀಕ್ಷೆಯಾಗಲಿದೆ.

ಆದರೆ, ಕೆಕೆಆರ್‌ ತಂಡಕ್ಕೆ ಪುಟಿದೇಳಲು ಈ ಪಂದ್ಯವು ಉತ್ತಮ ಅವಕಾಶವಾಗಿದೆ. ಎಲ್ಲ ರೀತಿಯಿಂದಲೂ ರಾಯಲ್ಸ್‌ ತಂಡಕ್ಕಿಂತ ಕೆಕೆಆರ್ ಬಲಿಷ್ಠವಾಗಿದೆ. ಬ್ಯಾಟಿಂಗ್‌ನಲ್ಲಿ ಕ್ಸಿಸ್ ಲಿನ್, ಸುನಿಲ್ ನಾರಾಯಣ್, ರಾಬಿನ್ ಉತ್ತಪ್ಪ, ಆ್ಯಂಡ್ರೆ ರಸೆಲ್ ಅವರು ಉತ್ತಮ ಲಯದಲ್ಲಿದ್ದಾರೆ. ರಸೆಲ್ ಅಂತೂ ಆರು ಆಥವಾ ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಪಂದ್ಯದ ಚಿತ್ರಣವನ್ನೇ ಬದಲಿಸಿಬಿಡುತ್ತಾರೆ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಮಾತ್ರ ಅವರು ಹೆಚ್ಚು ಮಿಂಚಿಲ್ಲ. ಆದರೆ ಉಳಿದೆಲ್ಲ ತಂಡಗಳ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅವರು ಇಲ್ಲಿಯವರೆಗೆ 41 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಬೌಲಿಂಗ್‌ನಲ್ಲಿ ಕನ್ನಡಿಗ ಪ್ರಸಿದ್ಧಕೃಷ್ಣ, ಸ್ಪಿನ್ನರ್‌ಗಳಾದ ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್, ಹ್ಯಾರಿ ಗರ್ನಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಮರ್ಥರು. ಆದರೆ, ಅವರು ರಾಯಲ್ಸ್‌ ತಂಡದ ಇನ್‌ಫಾರ್ಮ್‌ ಬ್ಯಾಟ್ಸ್‌ಮನ್ ಸ್ಮಿತ್, ರಹಾನೆ, ನಿತೀಶ್ ರಾಣಾ ಅವ
ರನ್ನು ಕಟ್ಟಿಹಾಕಲು ವಿಶೇಷ ಯೋಜನೆ ರೂಪಿಸುವ ಅನಿವಾರ್ಯತೆ ಇದೆ.

ಎರಡೂ ತಂಡಗಳು ಹೆಚ್ಚು ಸೋಲಿನ ಕಹಿ ಉಂಡಿವೆ. ಗೆಲುವಿಗಾಗಿ ತಹತಹಿಸಿವೆ. ಆದ್ದರಿಂದ ತುರುಸಿನ ಹೋರಾಟ ನಡೆಯುವ ನಿರೀಕ್ಷೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT