ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021| ಮರಳುನಾಡಿನಲ್ಲಿ ಮತ್ತೆ ಐಪಿಎಲ್ ಹಬ್ಬ

Last Updated 18 ಸೆಪ್ಟೆಂಬರ್ 2021, 19:39 IST
ಅಕ್ಷರ ಗಾತ್ರ

ದುಬೈ: ಮರಳುಗಾಡಿನ ನಾಡಿನಲ್ಲಿ ಈಗ ಮತ್ತೆ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಹಬ್ಬದ ಸಂಭ್ರಮ.

ಹೋದ ವರ್ಷ ಇಡೀ ಟೂರ್ನಿಯನ್ನು ಆಯೋಜಿಸಿ ಸೈ ಎನಿಸಿಕೊಂಡಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ ಈ ಬಾರಿ ಐಪಿಎಲ್‌ನ ದ್ವಿತೀಯಾರ್ಧವನ್ನು ನಡೆಸಿಕೊಡಲಿದೆ. ಹೋದ ಏಪ್ರಿಲ್–ಮೇ ನಲ್ಲಿ ಭಾರತದಲ್ಲಿಯೇ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಟೂರ್ನಿಯ ಬಯೋಬಬಲ್‌ ವ್ಯವಸ್ಥೆಯೊಳಗಿದ್ದ ಕೆಲವು ಆಟಗಾರರು, ಸಿಬ್ಬಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಅದರಿಂದಾಗಿ ಅರ್ಧಕ್ಕೆ ನಿಲ್ಲಿಸಲಾಗಿತ್ತು.

ಅದರ ಮುಂದುವರಿದ ಭಾಗ ಭಾನುವಾರದಿಂದ ಗಲ್ಫ್ ನಾಡಿನಲ್ಲಿ ಶುರುವಾಗಲಿದೆ. ಮುಂದಿನ ತಿಂಗಳು ಇಲ್ಲಿಯೇ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಪೂವರ್ಭಾವಿ ಸಿದ್ಧತಾ ವೇದಿಕೆಯಾಗಿಯೂ ಈ ಐಪಿಎಲ್ ಗಮನ ಸೆಳೆಯುತ್ತಿದೆ.

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಹೋದ ವಾರವಷ್ಟೇ ಇಂಗ್ಲೆಂಡ್‌ನಲ್ಲಿದ್ದ ಭಾರತ ತಂಡದಲ್ಲಿ ಕೋಚ್, ನೆರವುಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿತ್ತು. ಅದರಿಂದಾಗಿ ಇಂಗ್ಲೆಂಡ್ ಎದುರಿನ ಕೊನೆಯ ಟೆಸ್ಟ್ ಕೂಡ ನಡೆದಿರಲಿಲ್ಲ. ಆ ಸಂದರ್ಭದಲ್ಲಿ ಐಪಿಎಲ್ ನಡೆಯುವ ಕುರಿತು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ಇಂಗ್ಲೆಂಡ್ ಮತ್ತು ಭಾರತದ ಆಟಗಾರರು ದುಬೈಗೆ ಸುರಕ್ಷಿತವಾಗಿ ಬಂದಿಳಿಯುವ ಮೂಲಕ ಸಮಸ್ಯೆ ಪರಿಹಾರವಾಗಿದೆ.

ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಕೊನೆಯ ಕ್ಷಣದಲ್ಲಿ ಗಾಯ ಮತ್ತಿತರ ಸಮಸ್ಯೆಗಳಿಂದಾಗಿ ಯಾರಾದರೂ ಹಿಂದೆ ಸರಿದರೆ ಅವರ ಬದಲಿಗೆ ಅವಕಾಶ ಆಯ್ಕೆ ಮಾಡಲು ಅಕ್ಟೋಬರ್ 10ರವರೆಗೆ ಸಮಯ ಇದೆ.

ಆದ್ದರಿಂದ ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿ, ಆಯ್ಕೆದಾರರ ಗಮನ ಸೆಳೆಯುವ ಸಣ್ಣ ಅವಕಾಶ ಇನ್ನೂ ಇದೆ.

ಪ್ರೇಕ್ಷಕರಿಗೆ ಅವಕಾಶ

ಈ ಟೂರ್ನಿಯಲ್ಲಿ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ.

ದುಬೈನಲ್ಲಿ ಕೋವಿಡ್ ನಿಯಂತ್ರಣದಲ್ಲಿರುವ ಕಾರಣ ಸ್ಥಳೀಯ ಆಡಳಿತ ಮತ್ತು ಕ್ರಿಕೆಟ್ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗುವುದು.

ತಂಡಗಳು ಈಗಾಗಲೇ ಇಲ್ಲಿಗೆ ಬಂದಿಳಿದಿದ್ದು, ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಪೂರೈಸಿ, ಅಭ್ಯಾಸವನ್ನೂ ನಡೆಸುತ್ತಿವೆ.

ಮೊದಲ ಹಂತದ ಪಾಯಿಂಟ್ ಪಟ್ಟಿಯ ಮುಂಚೂಣಿಯಲ್ಲಿದ್ದ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್, ಮಹೇಂದ್ರಸಿಂಗ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಲ್ಲಿಯೂ ಪೈಪೋಟಿ ನಡೆಸುವ ನಿರೀಕ್ಷೆ ಇದೆ.

ಕನ್ನಡಿಗ ಕೆ.ಎಲ್. ರಾಹುಲ್ ನಾಯಕರಾಗಿರುವ ಪಂಜಾಬ್ ಕಿಂಗ್ಸ್, ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡಗಳೂ ಪುಟಿದೇಳುವ ನಿರೀಕ್ಷೆ ಇದೆ.

ಕೋವಿಡ್ ನಿಯಮಾವಳಿಯ ಕಟ್ಟುನಿಟ್ಟಿನ ಪಾಲನೆಯ ಜೊತೆಗೆ ಪ್ರಶಸ್ತಿ ಜಯದತ್ತಲೂ ಕಣ್ಣು ನೆಟ್ಟಿರುವ ಆಟಗಾರರಿಗೆ ಇಲ್ಲಿಯ ಬಿಸಿ ವಾತಾವರಣವೂ ಸವಾಲೊಡ್ಡಲಿದೆ. ಆಯೋಜಕರು ಮತ್ತು ಆತಿಥೇಯರಿಗೂ ಇದು ಪ್ರತಿಷ್ಠೆಯ ಸವಾಲು ಕೂಡ ಆಗಿದೆ.

ಈ ಟೂರ್ನಿಯ ಯಶಸ್ಸು ಟಿ20 ವಿಶ್ವಕಪ್ ಆಯೋಜನೆಗೂ ಹುರುಪು ತುಂಬುವುದರಲ್ಲಿ ಸಂದೇಹವಿಲ್ಲ ಎನ್ನಲಾಗಿದೆ.

ಮುಯ್ಯಿ ತೀರಿಸಿಕೊಳ್ಳುವತ್ತ ಧೋನಿ ಚಿತ್ತ

ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಅವತ್ತು ಮುಂಬೈ ತಂಡವು ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಚೆನ್ನೈ ನೀಡಿದ್ದ 218 ರನ್‌ಗಳ ಗುರಿಯನ್ನು ಸಾಧಿಸುವಲ್ಲಿ ಮುಂಬೈ ಯಶಸ್ವಿಯಾಗಿತ್ತು. ಅಂಬಟಿ ರಾಯುಡು ಅವರ ಅಮೋಘ ಅರ್ಧಶತಕ ವ್ಯರ್ಥವಾಗಿತ್ತು.

ಆದರೆ, ಕೀರನ್ ಪೊಲಾರ್ಡ್ ಅವರ ಅಬ್ಬರದ 87 ರನ್‌ಗಳ ಆಟಕ್ಕೆ ಜಯ ಒಲಿದಿತ್ತು. ರೋಹಿತ್ ಶರ್ಮಾ ಬಳಗವು ಜಯದ ಸಂಭ್ರಮ ಆಚರಿಸಿತ್ತು.

ಆ ಹಂತದಲ್ಲಿ ಧೋನಿ ಬಳಗವು ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ಮುಂಬೈ ನಾಲ್ಕರಲ್ಲಿ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಎರಡೂ ತಂಡಗಳಲ್ಲಿ ಅಬ್ಬರದ ಬ್ಯಾಟ್ಸ್‌ಮನ್‌ಗಳು ಮತ್ತು ಆಲ್‌ರೌಂಡರ್‌ಗಳು ಇರುವುದರಿಂದ ಮತ್ತೊಮ್ಮೆ ರನ್‌ಗಳ ಹೊಳೆ ಹರಿಯುವ ಸಾಧ್ಯತೆ ಇದೆ.

ಸಮಯ: ರಾತ್ರಿ 7ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT