ಸೋಮವಾರ, ಜುಲೈ 26, 2021
26 °C

ಐಪಿಎಲ್ v/s ಟಿ20 ವಿಶ್ವಕಪ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

prajavani

ಒಂದು ಕಾಲದಲ್ಲಿ ಚುಟುಕು ಕ್ರಿಕೆಟ್‌ ಎಂದರೆ ಮೂಗು ಮುರಿಯುವವರೂ ಈ ವರ್ಷ ಈ ಮಾದರಿಯತ್ತ ಚಿತ್ತ ಹೊರಳಿಸಿದ್ದಾರೆ. ಏಕೆಂದರೆ ಕೊರೊನಾದಿಂದ ಆದ ನಷ್ಟವನ್ನು ತುಂಬಿಕೊಳ್ಳಲು ಐಸಿಸಿ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಬಿಸಿಸಿಐ ಟಿ20 ಟೂರ್ನಿಗಳನ್ನೇ ಅವಲಂಬಿಸುತ್ತಿವೆ. ಇದರಿಂದಾಗಿ ಈಗ ಟಿ20 ವಿಶ್ವಕಪ್ ಮತ್ತು ಐಪಿಎಲ್‌ ನಲ್ಲಿ ಯಾವುದನ್ನು ನಡೆಸಬೇಕೆಂಬ ಪೈಪೋಟಿ ತಾರಕಕ್ಕೇರಿದೆ

2007ರಲ್ಲಿ ಭಾರತ ಕ್ರಿಕೆಟ್ ತಂಡವು  ಟಿ20 ವಿಶ್ವಕಪ್ ಗೆದ್ದ ಸಂದರ್ಭ ಅದು. ಆಗ ಕೆಲವು ಕ್ರಿಕೆಟ್ ಚಿಂತಕರು ಚುಟುಕು ಕ್ರಿಕೆಟ್ ಜನಪ್ರಿಯತೆಯಿಂದ ಆತಂಕಕ್ಕೊಳಗಾಗಿದ್ದರು. ಈ ಮಾದರಿಯಿಂದ ಕ್ರಿಕೆಟ್‌ನ ಸೊಬಗು ನಾಶವಾಗಲಿದೆ ಎಂದು ಹೇಳಿದ್ದರು. ಟೆಸ್ಟ್‌ ಮಾದರಿ ಉಳಿಸಬೇಕು ಎಂಬ ಕೂಗು ಕೂಡ ಎದ್ದಿತ್ತು.

ಆದರೆ ಇದೀಗ ಕೊರೊನಾ ವೈರಸ್‌ ಹಾವಳಿಯಿಂದಾಗಿ ಅಪಾರ ಪ್ರಮಾಣದ ಆರ್ಥಿಕ ನಷ್ಟಕ್ಕೆ ಗುರಿಯಾಗಿರುವ ಕ್ರಿಕೆಟ್‌ ಕ್ಷೇತ್ರವು ಮರಳಿ ಅರಳಲು ಇದೇ ಚುಟುಕು ಕ್ರಿಕೆಟ್‌ನ ಮೊರೆ ಹೋಗಿವೆ. ಹೋದ ಮಾರ್ಚ್‌ನಿಂದ ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಆಗಿದ್ದರಿಂದ ಎಲ್ಲ ಕ್ರೀಡಾ ಚಟುವಟಿಕೆಗಳೂ ಸ್ತಬ್ಧವಾಗಿದ್ದವು. ಅದರಲ್ಲಿ ಮಿಲಿಯನ್ ಡಾಲರ್ ಬೇಬಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯೂ ಒಂದು.  ಆದರೆ ಆಗಸ್ಟ್‌ ನಂತರ ಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆಯಲ್ಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು, ಆಗ ಟೂರ್ನಿ ಆಯೋಜಿಸಿ ನಷ್ಟ ತುಂಬಿಕೊಳ್ಳುವ ತವಕದಲ್ಲಿದೆ. ‌

ಆದರೆ ಆ ಹೊತ್ತಿಗೆ ವಿದೇಶಿ ಆಟಗಾರರು ಬರುವ ಸಾಧ್ಯತೆಗಳು ಕಡಿಮೆ ಇವೆ ಎನ್ನಲಾಗುತ್ತಿದೆ. ಅಕ್ಟೋಬರ್‌ ವೇಳೆಗೆ ವಿಮಾನಯಾನ ಆರಂಭವಾದರೆ ಆಗ ಆಯೋಜಿಸಬಹುದು ಎಂಬ ಲೆಕ್ಕಾಚಾರದಲ್ಲಿದೆ. ಆದರೆ,  ಅದೇ ತಿಂಗಳು ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ನಡೆಸಿ ತನ್ನ ಖಾಲಿಯಾಗಿರುವ ಬೊಕ್ಕಸ ತುಂಬಿಸಿಕೊಳ್ಳುವತ್ತ ಕ್ರಿಕೆಟ್ ಆಸ್ಟ್ರೇಲಿಯಾದ ಚಿತ್ತವಿದೆ. ಆದರೆ ಚಿನ್ನದ ಮೊಟ್ಟೆ ಇಡುವ ಕೋಳಿಯೇ ಆಗಿರುವ ಈ ಎರಡೂ ಚುಟುಕು ಮಾದರಿ ಟೂರ್ನಿಗಳನ್ನು ಹೇಗಾದರೂ ಮಾಡಿ ಇದೇ ವರ್ಷ ನಡೆಸುವ ಯೋಚನೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಇದೆ. ಆದರೆ, ಕೊರೊನಾದ ಬಿಸಿಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಐಸಿಸಿಗೂ ಆಗುತ್ತಿಲ್ಲ ಎಂಬುದು ಸ್ಪಷ್ಟ. ಜೂನ್ ಒಂದರಂದು ನಡೆದಿದ್ದ ಐಸಿಸಿ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲದೇ 10ರ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿತು.

ಈ ನಡುವೆ ಹಲವು ದಿಗ್ಗಜ ಕ್ರಿಕೆಟಿಗರ ಹೇಳಿಕೆಗಳೂ ಗಮನ ಸೆಳೆದಿವೆ. ಐಪಿಎಲ್ ಕೇವಲ ಹಣಗಳಿಕೆಯ ಆಡುಂಬೋಲ ಆದ್ದರಿಂದ ಅದನ್ನು ಈ ವರ್ಷ ಕೈಬಿಡಬೇಕು. ಟಿ20 ವಿಶ್ವಕಪ್ ಟೂರ್ನಿಗೆ ಮಣೆ ಹಾಕಬೇಕು ಎಂದು ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ ಅಲನ್ ಬಾರ್ಡರ್ ಈಚೆಗೆ ಹೇಳಿದ್ದರು. ಟೂರ್ನಿಗೆ ಬರುವ ತಂಡಗಳನ್ನು  15ದಿನ ಮೊದಲೇ ಖಾಸಗಿ ವಿಮಾನಗಳಲ್ಲಿ ಕರೆಸಿ ಕ್ವಾರಂಟೈನ್ ಮಾಡಬೇಕು ಎಂಬ ಸಲಹೆಗಳೂ ಬಂದಿವೆ. ಒಂದೊಮ್ಮೆ ವಿಶ್ವಕಪ್ ನಡೆದರೆ ಐಪಿಎಲ್‌ ರದ್ದು ಮಾಡುವುದು ಅನಿವಾರ್ಯವಾಗಲಿದೆ. ಏಕೆಂದರೆ ನವೆಂಬರ್‌ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿಯೇ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಭಾರತವು ಆಡಬೇಕಿದೆ.


ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಆದರೆ ಈ ವಿಶ್ವಕಪ್ ಟೂರ್ನಿಯನ್ನು ಮುಂದಿನ ವರ್ಷದ ಜನವರಿ–ಫೆಬ್ರುವರಿಗೆ ಮುಂದೂಡಬೇಕು ಎಂಬ ಸಲಹೆಯೂ ಐಸಿಸಿಯ ಮುಂದಿದೆ. ಹಾಗೊಮ್ಮೆ ಆದರೆ, ಜನವರಿಯಿಂದ ಜುಲೈವರೆಗೆ ಟಿ20 ಕ್ರಿಕೆಟ್‌ ಸುಗ್ಗಿಯೇ ನಡೆದುಹೋಗುತ್ತದೆ. ಏಕೆಂದರೆ ಆ ವರ್ಷ  ಏಪ್ರಿಲ್‌ನಲ್ಲಿ ಐಪಿಎಲ್ ಮತ್ತು ಅದರ ನಂತರ ಟಿ20 ವಿಶ್ವಕಪ್ ನಡೆಯಬೇಕು. ಅದೂ ಭಾರತದಲ್ಲಿ. ಎಲ್ಲವೂ ಸುಸೂತ್ರವಾದರೆ ಅತ್ತ ಜಪಾನ್‌ನಲ್ಲಿ ಒಲಿಂಪಿಕ್ಸ್‌ ಕೂಡ ಜುಲೈ, ಆಗಸ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಪ್ರಾಯೋಜಕರ ಕೊರತೆಯಾಗುವ ಆತಂಕವಿದೆ.

ಆದ್ದರಿಂದ ಈ ವರ್ಷದ ಅವಧಿಯಲ್ಲಿ ಈ ಎರಡರಲ್ಲಿ ಒಂದು ಟೂರ್ನಿಯನ್ನು ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಗತ್ಯ ಇದೆ. ಅಂತರರಾಷ್ಟ್ರೀಯ ಪ್ರಯಾಣದ ಬಗ್ಗೆ ಬೇರೆ ಬೇರೆ ದೇಶಗಳಲ್ಲಿ ವಿಭಿನ್ನ ನಿಯಮಗಳು ಈಗ ಇರುವುದರಿಂದ ವಿಶ್ವಕಪ್ ಟೂರ್ನಿಯೇ ರದ್ದಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಇದರಿಂದಾಗಿ ಆಸ್ಟ್ರೇಲಿಯಾಕ್ಕೆ ನಷ್ಟವಾಗುವುದು ಖಚಿತ. ಆದರೆ ಅಲ್ಲಿಯ 13 ಆಟಗಾರರು ಐಪಿಎಲ್‌ನ ವಿವಿಧ ತಂಡಗಳಲ್ಲಿದ್ದು, ಅವರಿಗೆ ವೈಯಕ್ತಿಕವಾಗಿ ಲಾಭವಾಗಬಹುದು. 

ಖಾಲಿ ಕ್ರೀಡಾಂಗಣ: ಈ ವರ್ಷ ಎಲ್ಲಿಯೇ, ಯಾವುದೇ ಟೂರ್ನಿ ನಡೆದರೂ ಬಹುತೇಕ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆಯುವುದು ಖಚಿತ. ಆದರೆ ಇದರಿಂದ ಟಿವಿ ವೀಕ್ಷಕರ ಸಂಖ್ಯೆ ಹೆಚ್ಚುವ ನಿರೀಕ್ಷೆಯಲ್ಲಿ ಪ್ರಸಾರಕರಿದ್ದಾರೆ. ಕ್ರೀಡಾಂಗಣದ ಆದಾಯ ಖೋತಾ  ಆದರೂ ಅದಕ್ಕಿಂತ ಹೆಚ್ಚು ಮೊತ್ತವು ಟಿವಿಯಿಂದ ಲಭಿಸುವುದು ಖಚಿತ. ಲಾಕ್‌ಡೌನ್ ಕಾರಣದಿಂದ ಜನರು ಹೆಚ್ಚು ಹೊತ್ತು ಮನೆಯಲ್ಲಿಯೇ ಸಮಯ ಕಳೆಯುತ್ತಿರುವುದರಿಂದ ಹಾಗೂ ಟಿವಿಯಲ್ಲಿ ಹೊಸ ಕಾರ್ಯಕ್ರಮಗಳ ಕೊರತೆಯೂ ಇರುವುದರಿಂದ ಕ್ರಿಕೆಟ್‌  ವೀಕ್ಷಣೆಗೆ ಹೆಚ್ಚು ಒಲವು ತೋರುವ ನಿರೀಕ್ಷೆ ಮೂಡಿದೆ.

ಬಹಳಷ್ಟು ನಷ್ಟ ಅನುಭವಿಸಿರುವ ಉದ್ಯಮ ವಲಯವು ತಮ್ಮ ಬ್ರ್ಯಾಂಡ್‌ ಪ್ರಚಾರಕ್ಕೆ ಕ್ರಿಕೆಟ್‌ನತ್ತ ಚಿತ್ತ ಹರಿಸಿದರೆ ಲಾಭ ದುಪ್ಟಟ್ಟಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.  ಆದ್ದರಿಂದಲೇ ಈಗ ಐಸಿಸಿಯು ತೆಗೆದುಕೊಳ್ಳುವ ನಿರ್ಧಾರವು ಕುತೂಹಲ ಕೆರಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು