ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ‘ಇಂಪ್ಯಾಕ್ಟ್‌ ಪ್ಲೇಯರ್‌’ ನಿಯಮಕ್ಕೆ ಗಾವಸ್ಕರ್, ಹರ್ಭಜನ್ ಮೆಚ್ಚುಗೆ

Last Updated 1 ಏಪ್ರಿಲ್ 2023, 10:55 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಐಪಿಎಲ್‌ನಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ‘ಇಂಪ್ಯಾಕ್ಟ್‌ ಪ್ಲೇಯರ್‌’ ನಿಯಮವು ಎಲ್ಲರ ಗಮನ ಸೆಳೆದಿದೆ.

ಬಿಸಿಸಿಐ ಈ ನಿಯಮವನ್ನು ಘೋಷಿಸಿದಾಗ, ತಂಡಗಳು ಹೇಗೆ ‘ಇಂಪ್ಯಾಕ್ಟ್‌ ಪ್ಲೇಯರ್‌’ ಬಳಕೆ ಮಾಡಲಿವೆ ಎಂಬ ಬಗ್ಗೆ ಕುತೂಹಲ ಮೂಡಿತ್ತು. ಇದೀಗ ಈ ನಿಯಮದ ಬಗ್ಗೆ ಮಾಜಿ ಕ್ರಿಕೆಟಿಗರಾದ ಸುನಿಲ್‌ ಗಾವಸ್ಕರ್‌ ಮತ್ತು ಹರ್ಭಜನ್‌ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಇಂಪ್ಯಾಕ್ಟ್‌ ಪ್ಲೇಯರ್‌’ ನಿಯಮದ ಪ್ರಕಾರ ತಂಡಗಳು ಅಂತಿಮ ಇಲೆವೆನ್‌ ಜತೆಗೆ, ಐವರು ಬದಲಿ ಆಟಗಾರರನ್ನು ಕೂಡಾ ಹೆಸರಿಸಬೇಕು. ಅದರಲ್ಲಿ ಒಬ್ಬ ಆಟಗಾರ (ಇಂಪ್ಯಾಕ್ಟ್ ಪ್ಲೇಯರ್‌) ಪಂದ್ಯದ ಯಾವುದೇ ಹಂತದಲ್ಲಿ ಆರಂಭಿಕ ಇಲೆವೆನ್‌ನ ಆಟಗಾರರನ್ನು ಬದಲಾಯಿಸಿ ಕಣಕ್ಕಿಳಿಯಬಹುದು. ಇನಿಂಗ್ಸ್‌ನ 14ನೇ ಓವರ್‌ನ ಮುಕ್ತಾಯಕ್ಕೆ ಮುನ್ನ ಈ ಬದಲಾವಣೆ ಮಾಡಬೇಕು.

ಬ್ಯಾಟ್‌ ಮಾಡುವ ತಂಡವು ಔಟಾದ ಅಥವಾ ನಿವೃತ್ತಿಗೊಂಡು ಪೆವಿಲಿಯನ್‌ ಮರಳಿದ ಬ್ಯಾಟರ್‌ಗೆ ಬದಲಿಯಾಗಿ ಇಂಪ್ಯಾಕ್ಟ್‌ ಪ್ಲೇಯರ್‌ಅನ್ನು ಕಣಕ್ಕಿಳಿಸಿದರೂ 11 ಆಟಗಾರರಿಗಷ್ಟೇ ಬ್ಯಾಟ್‌ ಮಾಡಲು ಅವಕಾಶವಿದೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಈ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು.

ಈ ನಿಯಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ತಂಡಗಳಿಗೆ ಕೆಲ ಸಮಯ ಬೇಕಾಗಲಿದೆ ಎಂದು ಗಾವಸ್ಕರ್‌ ಹೇಳಿದ್ದಾರೆ.

ಸ್ಟಾರ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿರುವ ಗಾವಸ್ಕರ್‌, 'ಹೊಸ ನಿಯಮವನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಸ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಸಮಯ ಬೇಕಾಗುತ್ತದೆ. ಟಾಟಾ ಐಪಿಎಲ್‌–2023ರಲ್ಲಿ ಆಡುವ ಎಲ್ಲ ತಂಡಗಳಿಗೂ ಇದು ಅನ್ವಯ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಹರ್ಭಜನ್‌ ಅವರು, 'ಇದೊಂದು ವಿನೂತನ ನಡೆ. ಆಟದ ಪರಿಸ್ಥಿತಿಯಲ್ಲಿ ತಂಡಕ್ಕೆ ಸೂಕ್ತವಲ್ಲ ಎನಿಸುವ ಅಥವಾ ಅಗತ್ಯ ಎನಿಸುವ ಯಾವುದೇ ಆಟಗಾರನನ್ನು ಆಡುವ ಹನ್ನೊಂದರ ಬಳಕ್ಕೆ ಸೇರಿಸಿಕೊಳ್ಳಲು ಇದರಿಂದ ಸಾಧ್ಯವಿದೆ. ಇದೊಂದು ಅತ್ಯುತ್ತಮ ನಿಯಮ. ಬಿಸಿಸಿಐಗೆ ಅಭಿನಂದನೆಗಳು' ಎಂದಿದ್ದಾರೆ.

ಮೊದಲ ಪಂದ್ಯದಲ್ಲಿ ‘ಇಂಪ್ಯಾಕ್ಟ್‌ ಪ್ಲೇಯರ್‌’ ಬಳಕೆ
16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಶುಕ್ರವಾರ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಎದುರು ಗೆಲ್ಲುವ ಮೂಲಕ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ಶುಭಾರಂಭ ಮಾಡಿದೆ.

ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಬ್ಬರು ‘ಇಂಪ್ಯಾಕ್ಟ್‌ ಪ್ಲೇಯರ್‌’ಗಳನ್ನು ಕಣಕ್ಕಿಳಿಸಿದವು.

ಗುಜರಾತ್‌ ಪಡೆ, ಫೀಲ್ಡಿಂಗ್‌ ವೇಳೆ ಗಾಯಗೊಂಡ ಕೇನ್‌ ವಿಲಿಯಮ್ಸನ್‌ ಬದಲು ಸಾಯ್‌ ಸುದರ್ಶನ್‌ ಅವರನ್ನು ಹಾಗೂ ಚೆನ್ನೈ ತಂಡ ಅಂಬಟಿ ರಾಯುಡು ಬದಲು ಬೌಲರ್‌ ತುಷಾರ್‌ ದೇಶಪಾಂಡೆ ಅವರನ್ನು ಆಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT