ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಾರ್ಪಣೆ ಪಂದ್ಯದಲ್ಲೇ ದ್ವಿಶತಕ, ಶತಕ ಸಾಧನೆ; ವಿಶೇಷ ದಾಖಲೆ ಬರೆದ ಜೈಸ್ವಾಲ್

Last Updated 4 ಮಾರ್ಚ್ 2023, 9:16 IST
ಅಕ್ಷರ ಗಾತ್ರ

ಗ್ವಾಲಿಯರ್‌: ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ತಾವಾಡಿದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅವರು ವಿಶೇಷ ಸಾಧನೆ ಮಾಡಿದ್ದಾರೆ.

ರಣಜಿ ಚಾಂಪಿಯನ್‌ ಮಧ್ಯಪ್ರದೇಶ ಹಾಗೂ ರೆಸ್ಟ್‌ ಆಫ್‌ ಇಂಡಿಯಾ ತಂಡ ಇಲ್ಲಿನ ಕ್ಯಾಪ್ಟನ್‌ ರೂಪ್‌ ಸಿಂಗ್‌ ಕ್ರೀಡಾಂಗಣದಲ್ಲಿ ಇರಾನಿ ಕಪ್‌ ಟೂರ್ನಿಯಲ್ಲಿ ಮುಖಾಮುಖಿಯಾಗಿವೆ. ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೆಸ್ಟ್‌ ಆಫ್‌ ಇಂಡಿಯಾ ಪಡೆ ಯಶಸ್ವಿ ಜೈಸ್ವಾಲ್‌ ಸಿಡಿಸಿದ (213 ರನ್‌) ದ್ವಿಶತಕ ಹಾಗೂ ಅಭಿಮನ್ಯು ಈಶ್ವರನ್‌ ಗಳಿಸಿದ (154 ರನ್‌) ಶತಕದ ಬಲದಿಂದ 484 ಗಳಿಸಿ ಆಲೌಟ್ ಆಗಿತ್ತು.

ಮಧ್ಯ ಪ್ರದೇಶ ಪಡೆ ಇದಕ್ಕುತ್ತರವಾಗಿ 294 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಯಶ್‌ ದುಬೇ (109) ಶತಕ ಗಳಿಸಿದರೂ ತಮ್ಮ ತಂಡಕ್ಕೆ ಇನಿಂಗ್ಸ್‌ ಹಿನ್ನಡೆ ತಪ್ಪಿಸಲು ಸಾಧ್ಯವಾಗಿರಲಿಲ್ಲ.

190 ರನ್‌ ಮುನ್ನಡೆಯೊಂದಿಗೆ ರೆಸ್ಟ್‌ ಆಫ್‌ ಇಂಡಿಯಾ ಆರಂಭಿಸಿದ ಎರಡನೇ ಇನಿಂಗ್ಸ್‌ನಲ್ಲೂ ಯಶಸ್ವಿ ಅಮೋಘವಾಗಿ ಬ್ಯಾಟಿಂಗ್‌ ಮಾಡಿದರು. 157 ಎಸೆತಗಳನ್ನು ಎದುರಿಸಿರುವ ಅವರು 16 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 144 ರನ್‌ ಗಳಿಸಿ ಔಟಾದರು. ಇವರ ಆಟದ ಬಲದಿಂದ 8 ವಿಕೆಟ್‌ ನಷ್ಟಕ್ಕೆ 235 ರನ್‌ ಗಳಿಸಿರುವ ರೆಸ್ಟ್‌ ಆಫ್‌ ಇಂಡಿಯಾ 433 ರನ್‌ಗಳ ಭಾರಿ ಮುನ್ನಡೆ ಕಾಯ್ದುಕೊಂಡಿದೆ.

ಯಶಸ್ವಿ ಸಾಧನೆ
ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ಜೈಸ್ವಾಲ್‌, ಇರಾನಿ ಕಪ್‌ ಟೂರ್ನಿಯ ಒಂದೇ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿದ ಮೊದಲ ಬ್ಯಾಟರ್‌ ಎನಿಸಿಕೊಂಡರು. ಜೊತೆಗೆ ಈ ಟೂರ್ನಿಯ ಒಂದೇ ಪಂದ್ಯದಲ್ಲಿ ಹೆಚ್ಚು (357) ರನ್‌ ಗಳಿಸಿದ ಆಟಗಾರ ಎಂಬ ಶ್ರೇಯವೂ ಅವರದ್ದಾಯಿತು. ಈ ಹಿಂದೆ ಶಿಖರ್‌ ಧವನ್‌ ಅವರಷ್ಟೇ ಪಂದ್ಯವೊಂದರಲ್ಲಿ 300 ಕ್ಕಿಂತ ಹೆಚ್ಚು (332) ರನ್‌ ಗಳಿಸಿದ್ದರು.

ಇಷ್ಟಲ್ಲದೆ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಒಂದೇ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಗಳಿಸಿದ ಭಾರತದ 11ನೇ ಬ್ಯಾಟರ್‌ ಎಂಬ ಖ್ಯಾತಿಗೂ ಭಾಜನರಾದರು.

ಕಳೆದ ವರ್ಷ ದುಲೀಪ್‌ ಕ್ರಿಕೆಟ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಜೈಸ್ವಾಲ್‌, ಮೊದಲ ಪಂದ್ಯದಲ್ಲೇ ದ್ವಿಶತಕ (227 ರನ್‌) ಸಿಡಿಸಿದ್ದರು. 2022ರಲ್ಲಿ 'ಭಾರತ ಎ' ತಂಡದ ಪರ ಬಾಂಗ್ಲಾದೇಶ ವಿರುದ್ಧ ಆಡಿದ ಪದಾರ್ಪಣೆ ಪಂದ್ಯದಲ್ಲಿಯೂ ಶತಕ (146 ರನ್‌) ಬಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT