ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಈ ಸಲ ಕಪ್‌ ನಮ್ದೇನಾ? ಗೆಲ್ಲಿಸಿಕೊಡುವ ಧೀರ ಯಾರು?

Last Updated 3 ನವೆಂಬರ್ 2020, 11:20 IST
ಅಕ್ಷರ ಗಾತ್ರ

ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ಗಳಲ್ಲಿ ಸುಮಾರು ಅರ್ಧಗಂಟೆ ಕಣ್ಣಾಡಿಸಿ. ಅಷ್ಟ್ರರಲ್ಲಿಯೇ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಅಭಿಮಾನಿಗಳ ಒಂದಾದರೂ ವಿಡಿಯೊ, ಸಂದೇಶ ಸಿಕ್ಕೇ ಸಿಗುತ್ತದೆ. ’ಈ ಬಾರಿ ಕಪ್ ನಮ್ದೆ‘ ಎಂದು ತಮಟೆ ಹೊಡೆಯುತ್ತ ಕುಣಿಯುವವರೂ ಸೇರಿದಂತೆ ಹತ್ತಾರು ಚಿತ್ರ–ವಿಚಿತ್ರ ಮೀಮ್‌ಗಳು ಪುಂಖಾನು‍ಪುಂಖವಾಗಿ ಕಾಣುತ್ತವೆ.

ಪ್ರತಿವರ್ಷವೂ ಹೆಚ್ಚುಕಡಿಮೆ ಇಂತಹದ್ದು ಇರುತ್ತವೆ. ಆದರೆ ಈ ಸಲದ್ದು ವಿಶೇಷ. ಕೊರೊನಾ ಕಾಲಘಟ್ಟದಲ್ಲಿ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪ್ಲೇಆಫ್ ಹಂತ ತಲುಪಿದೆ. ಲೀಗ್‌ನ ಕೊನೆಯ ಹಂತದವರೆಗೂ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ತುರುಸಿನ ಪೈಪೋಟಿ ಕಂಡ ಐಪಿಎಲ್ ಇದು. ಸೋಮವಾರ ರಾತ್ರಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಎರಡನೇ ಸ್ಥಾನ ಪಡೆದು ಮೊದಲಿಗರಾಗಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮೊದಲ ಕ್ಲಾಲಿಫೈಯರ್‌ನಲ್ಲಿ ಸೆಡ್ಡು ಹೊಡೆಯಲು ಸಿದ್ಧವಾಗುತ್ತಿದೆ.

ಆದರೆ ಈ ಟೂರ್ನಿಯ ಎರಡನೇ ಸುತ್ತಿನ ಪಂದ್ಯಗಳಲ್ಲಿ ಆರ್‌ಸಿಬಿಯ ಆಟ ನೋಡಿದರೆ ಕಪ್ ಜಯದ ಕನಸು ನನಸಾಗುವ ಹಾದಿಯು ಸುಲಭದ್ದಲ್ಲ ಎಂದು ಅನಿಸದೇ ಇರದು. ಏಕೆಂದರೆ; ತಂಡದಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ‘ಆಲ್‌ರೌಂಡರ್‌’ ಕೊರತೆ ಎದ್ದು ಕಾಣುತ್ತಿದೆ.

ಆರ್‌ಸಿಬಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿರುವಂತೆ ರವೀಂದ್ರ ಜಡೇಜ, ಸ್ಯಾಮ್ ಕರನ್, ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿರುವಂತಹ ಮಾರ್ಕಸ್‌ ಸ್ಟೋಯಿನಿಸ್, ಮುಂಬೈ ಇಂಡಿಯನ್ಸ್‌ನ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಸನ್‌ರೈಸರ್ಸ್‌ನಲ್ಲಿರುವ ಜೇಸನ್ ಹೋಲ್ಡರ್, ರಾಜಸ್ಥಾನ್ ರಾಯಲ್ಸ್‌ನಲ್ಲಿರುವ ರಾಹುಲ್ ತೆವಾಟಿಯಾ, ರಿಯಾನ್ ಪರಾಗ್ ಅವರಂತೆ ’ಡೆತ್‌ ಓವರ್‌‘ ಬ್ಯಾಟ್ಸ್‌ಮನ್‌ಗಳು ಇಲ್ಲ. ಒಂದು ಓವರ್‌ನಲ್ಲಿ ನಾಲ್ಕೈದು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ತಿರುವು ನೀಡಬಲ್ಲ ಬ್ಯಾಟ್ಸ್‌ಮನ್‌ಗಳು ಇಲ್ಲ. ಅದಕ್ಕಾಗಿ ಕೊಹ್ಲಿ ಅಥವಾ ಎಬಿಡಿ ಕೊನೆಯವರೆಗೂ ಕ್ರೀಸ್‌ ಕಾಯ್ದುಕೊಳ್ಳುವ ಒತ್ತಡ ಇದೆ. ಈ ಕೊರತೆಯಿಂದಲೇ ಸೋಮವಾರದ ಪಂದ್ಯದಲ್ಲಿ ತಂಡವು 153 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದ್ದು. ಶಿವಂ ದುಬೆ ಈ ಪಾತ್ರ ನಿಭಾಯಿಸುವರೆಂಬ ನಿರೀಕ್ಷೆ ತಂಡಕ್ಕಿತ್ತು. ಆದರೆ ಅವರು ಇದುವರೆಗೂ ಅಂತಹದೊಂದು ಇನಿಂಗ್ಸ್‌ ಆಡಿಯೇ ಇಲ್ಲ. ಆದರೂ ಅವರನ್ನು ಆಡುವ ಹನ್ನೊಂದರಲ್ಲಿ ಕಣಕ್ಕಿಳಿಸುತ್ತಿರುವುದು ಸೋಜಿಗ. ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ಬೆಂಚ್‌ನಲ್ಲಿ ಕುಳಿತು ಚಪ್ಪಾಳೆ ತಟ್ಟಲು ಮಾತ್ರ ಸೀಮಿತವಾಗಿದ್ದಾರೆ.

ದೇಶಿ ಟೂರ್ನಿಗಳಲ್ಲಿ ಭರವಸೆಯ ಆಟವಾಡಿರುವ ಎಡಗೈ ಆಲ್‌ರೌಂಡರ್‌, ಕನ್ನಡಿಗ ಪವನ್ ದೇಶಪಾಂಡೆ ಅವರಿಗೆ ಅವಕಾಶ ನೀಡಿ ಪರೀಕ್ಷಿಸುವ ಗೋಜಿಗೆ ಆರ್‌ಸಿಬಿ ಹೋಗಿಯೇ ಇಲ್ಲ. ಈ ನಿರ್ಣಾಯಕ ಪಂದ್ಯದಲ್ಲಿ ಅವರನ್ನು ಆಯ್ಕೆ ಮಾಡುವುದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲದ ಮಾತು. ಸತತ ಎರಡು ವರ್ಷ ಬೆಂಚ್ ಕಾದಿದ್ದ ದೇವದತ್ತ ಈ ಬಾರಿ ಅವಕಾಶ ಸಿಕ್ಕಿದ್ದಕ್ಕೆ ಐದು ಅರ್ಧಶತಕ ಸಿಡಿಸಿದ್ದಾರೆ. ಪವನ್‌ಗೂ ಒಂದು ಅವಕಾಶ ನೀಡಬಹುದಿತ್ತಲ್ಲವೇ?

ಅದಿರಲಿ; ತಂಡವು ಪ್ಲೇ ಆಫ್‌ ಪ್ರವೇಶಿಸಲು ಮೊದಲ ಸುತ್ತಿನ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದ್ದು ಕಾರಣ. ಆದರೆ ಎರಡನೇ ಸುತ್ತಿನಲ್ಲಿ ಐದು ಪಂದ್ಯಗಳನ್ನು ಸೋತಿರುವುದು ವಿರಾಟ್ ಬಳಗವು ಆತ್ಮಾವಲೋಕನ ಮಾಡಬೇಕಾದ ಅಗತ್ಯ ಹೇಳುತ್ತಿದೆ. ನವೆಂಬರ್ 6ರಂದು ಎಲಿಮಿನೇಟರ್‌ನಲ್ಲಿ ಆಡಲಿರುವ ಆರ್‌ಸಿಬಿ ಸೋತರೆ ಟೂರ್ನಿಯಿಂದ ಹೊರಬೀಳುವುದು ಖಚಿತ. ಆದ್ದರಿಂದ ಶತಾಯಗತಾಯ ಗೆಲ್ಲಲೇಬೇಕು. ಈ ಹಂತದಲ್ಲಿ ತಂಡಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ಅಥವಾ ಸನ್‌ರೈಸರ್ಸ್‌ ಹೈದರಾಬಾದ್ ಎದುರಾಗಬಹುದು. ಲೀಗ್ ಹಂತದ ಸೋಲು–ಗೆಲುವುಗಳ ಲೆಕ್ಕದಲ್ಲಿ ಆ ತಂಡಗಳೂ ಆರ್‌ಸಿಬಿಗೆ ಸಮವಾಗಿವೆ.

ಆದರೆ ಇಲ್ಲಿ ತಂಡದ ಸಾಮರ್ಥ್ಯವನ್ನು ಒಂದೊಮ್ಮೆ ಒರೆಗೆ ಹಚ್ಚಿ ನೋಡಿದರೆ, ಕೆಲವು ಲೋಪಗಳತ್ತ ವಿರಾಟ್‌ ಕೊಹ್ಲಿ ಗಮನ ಹರಿಸಲೇಬೇಕಾದ ಅನಿವಾರ್ಯತೆ ಇದೆ. ಸೋಮವಾರದ ಪಂದ್ಯವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ. ಆರಂಭಿಕ ದೇವದತ್ತ ಪಡಿಕ್ಕಲ್ ಸುಂದರವಾದ ಅರ್ಧಶತಕ ಹೊಡೆದರು. ಆದರೆ ಜೋಶ್ ಫಿಲಿಪ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆರಂಭಿಕ ಜೊತೆಯಾಟ ಚೆನ್ನಾಗಿರದಿದ್ದರೆ ಮುಂದಿನ ಹಾದಿ ಕಠಿಣ ಎನ್ನುವುದು ಇಲ್ಲಿ ಸಾಬೀತಾಯಿತು. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅಸ್ಥಿರತೆ ಮುಂದುವರಿಯಿತು. ಈ ಪಂದ್ಯದಲ್ಲಿ ಅವರು 29 ರನ್ ಗಳಿಸಿದರಾದರೂ ಆಟದಲ್ಲಿ ಎಂದಿನ ಆತ್ಮವಿಶ್ವಾಸದ ಕೊರತೆ ಇತ್ತು. ಒಂದು ಜೀವದಾನವೂ ದೊರಕಿತ್ತು.

ನಂತರದಲ್ಲಿ ಎಬಿ ಡಿವಿಲಿಯರ್ಸ್ ಅವರೊಬ್ಬರನ್ನು ಬಿಟ್ಟರೆ ಉಳಿದವರು ಪಡಿಕ್ಕಲ್‌ಗೆ ಉತ್ತಮ ಜೊತೆ ನೀಡಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಎಬಿಡಿಯನ್ನು ಬಿಟ್ಟರೆ ಉಳಿದವರಿಂದ ಏನೂ ನಿರೀಕ್ಷಿಸುವಂತೆಯೇ ಇಲ್ಲ. ಹಾಗೆ ನೋಡಿದರೆ ಆರ್‌ಸಿಬಿಯಲ್ಲಿ ಅಳೆದು ಸುರಿದು ಲೆಕ್ಕ ಹಾಕಿದರೆ ನಾಲ್ವರೇ ಬ್ಯಾಟ್ಸ್‌ಮನ್‌ಗಳ ಮೇಲೆ ತಂಡ ಅವಲಂಬಿತವಾಗಿದೆ. ಬೌಲಿಂಗ್‌ನಲ್ಲಿ ಕ್ರಿಸ್ ಮೊರಿಸ್, ಯಜುವೇಂದ್ರ ಚಾಹಲ್, ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ ಮಾತ್ರ ಇದುವರೆಗೆ ತಂಡದ ನಿರೀಕ್ಷೆಯನ್ನು ಉಳಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬಿಬ್ಬರು ವೈಫಲ್ಯ ಅನುಭವಿಸಿದರೂ ಪಂದ್ಯ ಕೈಬಿಟ್ಟಂತೆಯೇ ಎಂಬುದಕ್ಕೆ ಇದೇ ಟೂರ್ನಿಯಲ್ಲಿ ಹಲವು ಬಾರಿ ಸಾಬೀತಾಗಿದೆ.

ಮೊಹಮ್ಮದ್ ಸಿರಾಜ್ ಎರಡು ಮೇಡನ್ ದಾಖಲೆ ಮಾಡಿದ್ದ ಪಂದ್ಯದಲ್ಲಿ ಮಾತ್ರ ಮಿಂಚಿದ್ದರು. ನಂತರದಲ್ಲಿ ಅವರ ಪ್ರದರ್ಶನ ಅಷ್ಟಕ್ಕಷ್ಟೇ. ಈ ಎಲ್ಲ ಅಸ್ಥಿರತೆಗಳ ನಡುವೆಯೂ ನಾಲ್ಕರ ಘಟ್ಟಕ್ಕೆ ತಂಡವು ಬಂದು ನಿಂತಿದೆ. ಟ್ರೋಫಿಯನ್ನು ಎದೆಗವಚಿಕೊಂಡು ಮುತ್ತಿಕ್ಕಲು ಮೂರು ಮಜಲುಗಳನ್ನು ದಾಟಬೇಕಿದೆ. ಮೂರು ಪ್ರಪಾತಗಳೇ. ದಾಟಿದರೆ ’ಈ ಸಲ ಕಪ್ ನಮ್ದೆ‘. ಇಲ್ಲದಿದ್ದರೆ ; ಇನ್ನೈದು ತಿಂಗಳುಗಳ ನಂತರ ಮತ್ತೊಂದು ಐಪಿಎಲ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT