ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫ್ಗಾನಿಸ್ತಾನ ತಂಡದ ಮೆಂಟರ್ ಆಗಿ ಕೆಲಸ: ಸಂಭಾವನೆ ಪಡೆಯಲು ನಿರಾಕರಿಸಿದ್ದ ಜಡೇಜ

Published 14 ಜೂನ್ 2024, 16:48 IST
Last Updated 14 ಜೂನ್ 2024, 16:48 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ಮೆಂಟರ್ ಆಗಿ ಕೆಲಸ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜ ತಮ್ಮ ಕೆಲಸಕ್ಕಾಗಿ ಯಾವುದೇ ಸಂಭಾವನೆ ಪಡೆಯಲು ನಿರಾಕರಿಸಿದ್ದರು ಎಂದು ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯ(ಎಸಿಬಿ) ಸಿಇಒ ನಸೀಬ್ ಖಾನ್ ಹೇಳಿದ್ದಾರೆ.

ಹಲವು ಬಾರಿ ನಾವು ಮನವಿ ಮಾಡಿದರೂ ಜಡೇಜ ಸಂಭಾವನೆ ಪಡೆಯಲು ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ.

‘2023ರ ಏಕದಿನ ವಿಶ್ವಕಪ್ ವೇಳೆ ತಮ್ಮ ಕೆಲಸಕ್ಕೆ ಸಂಭಾವನೆ ಪಡೆಯಲು ಹಲವು ಬಾರಿ ನಾವು ಕೇಳಿಕೊಂಡರೂ ಜಡೇಜ ನಿರಾಕರಿಸಿದರು. ತಂಡ ಉತ್ತಮವಾಗಿ ಆಡಿದರೆ, ಅದೇ ನನಗೆ ಸಂಭಾವನೆ ಮತ್ತು ಬಹುಮಾನ’ಎಂದು ಹೇಳಿದರು ಎಂಬುದಾಗಿ ನಸೀಬ್, ಅರಿಯಾನಾ ನ್ಯೂಸ್‌ಗೆ ಹೇಳಿದ್ದಾರೆ.

ಟೂರ್ನಿ ಆರಂಭಕ್ಕೂ ಸ್ವಲ್ಪ ಮುನ್ನ ಅಫ್ಗಾನಿಸ್ತಾನ ತಂಡದ ಮೆಂಟರ್ ಆಗಿ ಜಡೇಜ ನೇಮಕಗೊಂಡಿದ್ದರು. ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ತಂಡಗಳಿಗೆ ಸೋಲುಣಿಸಿದ್ದ ಆಫ್ಗನ್ನರು, ಆಸ್ಟ್ರೇಲಿಯಾಗೂ ಸೋಲಿನ ಭಯ ಹುಟ್ಟಿಸಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿಶತಕ ಸಿಡಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ ಬಳಿಕ ಅಫ್ಗಾನಿಸ್ತಾನದ ಸೆಮಿಫೈನಲ್ ಕನಸು ಕಮರಿತ್ತು.

ಆ ಸಮಯದಲ್ಲಿ ಅಫ್ಗಾನಿಸ್ತಾನದ ಮುಖ್ಯ ತರಬೇತುದಾರರಾಗಿದ್ದ ಜೊನಾಥನ್ ಟ್ರಾಟ್, ಜಡೇಜ ನೆರವನ್ನು ಶ್ಲಾಘಿಸಿದ್ದರು. ಮೆಂಟರ್ ಆಗಿ ಜಡೇಜ ಅವರನ್ನು ನೇಮಕ ಮಾಡಿಕೊಂಡಿದ್ದರಿಂದ ತಂಡ ಸೆಮಿಫೈನಲ್ ಸಮೀಪಕ್ಕೆ ಬರುವಂತಹ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಹೇಳಿದ್ದರು.

53 ವರ್ಷದ ಜಡೇಜ ಭಾರತದ ಪರ 196 ಏಕದಿನ ಪಂದ್ಯಗಳನ್ನು ಆಡಿ, 37.47ರ ಸರಾಸರಿಯಲ್ಲಿ 5359 ರನ್ ಸಿಡಿಸಿದ್ದಾರೆ. ಅದರಲ್ಲಿ 6 ಶತಕ ಮತ್ತು 30 ಅರ್ಧಶತಕಗಳಿವೆ.

1992 ಮತ್ತು 2000ರ ನಡುವೆ ಭಾರತದ ಪರ 15 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, 26.18ರ ಸರಾಸರಿಯಲ್ಲಿ 576 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT