ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದಾಯ ಹೇಳಲು ನಿರ್ಧರಿಸಿದ್ದವನಿಗೆ ವಿಶ್ವಕಪ್‌ ತಂಡದಲ್ಲಿ ಸ್ಥಾನ!

Last Updated 4 ಏಪ್ರಿಲ್ 2019, 19:41 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಹದಿನೆಂಟು ತಿಂಗಳ ಹಿಂದಿನ ಮಾತು. ಸತತ ವೈಫಲ್ಯದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆ ಆಟಗಾರ ಕ್ರಿಕೆಟ್‌ ಬದುಕಿಗೆ ನಿವೃತ್ತಿ ಹೇಳಲು ಮುಂದಾಗಿದ್ದ. ಹಿತೈಶಿಯೊಬ್ಬರ ಸಲಹೆಯ ನಂತರ ನಿರ್ಧಾರ ಬದಲಿಸಿದ್ದ ಆತ ಈಗ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾನೆ.

ಆ ಕ್ರಿಕೆಟಿಗ ಯಾರಿರಬಹುದು ಎಂಬ ಕುತೂಹಲವೇ. ಆತ ನ್ಯೂಜಿಲೆಂಡ್‌ನ ಆಲ್‌ರೌಂಡರ್‌ ಜೇಮ್ಸ್‌ ನೀಶಮ್‌. 28 ವರ್ಷದ ನೀಶಮ್‌, ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಬುಧವಾರ ಪ್ರಕಟವಾದ 15 ಸದಸ್ಯರ ಕಿವೀಸ್‌ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ.

2017ರಲ್ಲಿ ನಡೆದ ಕೆಲ ಸರಣಿಗಳಲ್ಲಿ ನೀಶಮ್‌, ಮಿಂಚಲು ವಿಫಲರಾಗಿದ್ದರು. ಹೀಗಾಗಿ ಅವರನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿತ್ತು. ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದಲೂ ತೆಗೆದುಹಾಕಲಾಗಿತ್ತು.

‘ಅವತ್ತು ತುಂಬಾ ಬೇಸರದಲ್ಲಿದ್ದೆ. ನ್ಯೂಜಿಲೆಂಡ್‌ ಕ್ರಿಕೆಟಿಗರ ಸಂಘದ ಅಧ್ಯಕ್ಷ ಹೀಥ್‌ ಮಿಲ್ಸ್‌ ಅವರಿಗೆ ಕರೆ ಮಾಡಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಲು ತೀರ್ಮಾನಿಸಿರುವ ವಿಷಯ ತಿಳಿಸಿದೆ. ನನ್ನ ನಿರ್ಧಾರದಿಂದ ಅವರಿಗೆ ಅಚ್ಚರಿಯಾಗಿತ್ತು. ಆತುರದಲ್ಲಿ ಯಾವ ನಿರ್ಧಾರವನ್ನೂ ಕೈಗೊಳ್ಳಬೇಡ, ಐದು ವಾರ ಎಲ್ಲಾದರೂ ದೂರ ಹೋಗು. ಆ ಅವಧಿಯಲ್ಲಿ ಕ್ರಿಕೆಟ್‌ ಬಗ್ಗೆ ಯೋಚಿಸದೆ ಸ್ವಚ್ಛಂದವಾಗಿ ಕಾಲ ಕಳೆದು ಬಾ ಎಂದು ಮನವೊಲಿಸಿದರು. ಅವರ ಸಲಹೆ ನನ್ನ ಕ್ರೀಡಾ ಬದುಕಿಗೆ ಹೊಸ ತಿರುವು ನೀಡಿತು’ ಎಂದು ನೀಶಮ್‌ ನುಡಿದಿದ್ದಾರೆ.

‘ದೀರ್ಘ ವಿರಾಮದಿಂದ ಮನಸು ಹಗುರಾಯಿತು. ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಕಾಲಿಟ್ಟೆ. ದೇಶಿ ಟೂರ್ನಿಗಳಲ್ಲಿ ಮಿಂಚಿದೆ. ಈ ವರ್ಷದ ಜನವರಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನವೂ ಸಿಕ್ಕಿತು. ನಂತರ ಲಭಿಸಿದ ಅವಕಾಶಗಳನ್ನೂ ಸದುಪಯೋಗಪಡಿಸಿಕೊಂಡೆ. ಈಗ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದೇನೆ’ ಎಂದು ಖುಷಿ ವ್ಯಕ್ತಪಡಿಸಿದರು.

ನೀಶಮ್‌ ಅವರು ರಾಷ್ಟ್ರೀಯ ತಂಡಕ್ಕೆ ಮರಳುವ ಮುನ್ನ ಫೋರ್ಡ್‌ ಟ್ರೋಫಿ ಏಕದಿನ ಕ್ರಿಕೆಟ್‌ ಲೀಗ್‌ನಲ್ಲಿ ಆಡಿದ್ದರು. ಅವರ ಮುಂದಾಳತ್ವದ ವೆಲ್ಲಿಂಗ್ಟನ್‌ ಫೈರ್‌ಬರ್ಡ್ಸ್‌ ತಂಡ ಲೀಗ್‌ನಲ್ಲಿ ಚಾಂಪಿಯನ್‌ ಆಗಿತ್ತು. ಎರಡು ಶತಕ ಸಿಡಿಸಿದ್ದ ನೀಶಮ್‌, ಬೌಲಿಂಗ್‌ ಮೂಲಕವೂ ಗಮನ ಸೆಳೆದಿದ್ದರು.

‘ಆಡಿದ ಪ್ರತಿ ಪಂದ್ಯದಲ್ಲೂ ಶತಕ ಗಳಿಸಬೇಕೆಂಬ ಮಹತ್ವಾಕಾಂಕ್ಷೆ ನನ್ನದಾಗಿತ್ತು. ಆರಂಭದಲ್ಲಿ ಇದು ಸಾಕಾರಗೊಂಡಾಗ ಅತೀವ ಖುಷಿ ಆಗಿತ್ತು. ವೈಫಲ್ಯದ ಹಾದಿಯಲ್ಲಿ ಸಾಗಿದಾಗ ಮಾನಸಿಕ ಒತ್ತಡ ಹೆಚ್ಚಾಗುತ್ತಾ ಹೋಯಿತು. ಅದರಿಂದ ಹೊರ ಬರಲು ಮನಶಾಸ್ತ್ರಜ್ಞರ ಮೊರೆ ಹೋಗಿದ್ದೆ’ ಎಂದು ಸಂಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT