ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಪದೇ ಪದೇ ಕ್ಯಾಚ್ ಬಿಟ್ಟ ಜೈಸ್ವಾಲ್: ಅನುಭವಿ ಬೂಮ್ರಾ ಮಾತಿಗೆ ನೆಟ್ಟಿಗರ ಮೆಚ್ಚುಗೆ

Published : 23 ಜೂನ್ 2025, 9:39 IST
Last Updated : 23 ಜೂನ್ 2025, 9:39 IST
ಫಾಲೋ ಮಾಡಿ
0
ಪದೇ ಪದೇ ಕ್ಯಾಚ್ ಬಿಟ್ಟ ಜೈಸ್ವಾಲ್: ಅನುಭವಿ ಬೂಮ್ರಾ ಮಾತಿಗೆ ನೆಟ್ಟಿಗರ ಮೆಚ್ಚುಗೆ

ಜಸ್‌ಪ್ರೀತ್‌ ಬೂಮ್ರಾ

ರಾಯಿಟರ್ಸ್ ಚಿತ್ರ

ಲೀಡ್ಸ್‌: ಇಂಗ್ಲೆಂಡ್ ವಿರುದ್ಧದ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಐದು ವಿಕೆಟ್‌ ಗೊಂಚಲು ಸಾಧನೆ ಮಾಡಿದ್ದಾರೆ. ಅವರ ಆಟದ ಬಲದಿಂದ ಶುಭಮನ್‌ ಗಿಲ್‌ ಪಡೆ, ಮೊಲದ ಇನಿಂಗ್ಸ್‌ನಲ್ಲಿ 6 ರನ್‌ಗಳ ಅಲ್ಪ ಅಂತರದ ಮುನ್ನಡೆ ಸಾಧಿಸಿದೆ.

ADVERTISEMENT
ADVERTISEMENT

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವು ಲೀಡ್ಸ್‌ನಲ್ಲಿ ನಡೆಯುತ್ತಿದೆ. ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, 471 ರನ್‌ ಗಳಿಸಿ ಆಲೌಟ್‌ ಆಯಿತು. ಇದಕ್ಕುತ್ತರವಾಗಿ ಉತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್‌, 465 ರನ್ ಗಳಿಸಿ ಅಲ್ಪ ಅಂತರ ಹಿನ್ನಡೆ ಅನುಭವಿಸಿತು.

ಆತಿಥೇಯ ತಂಡವನ್ನು ಕಾಡಿದ ಬೂಮ್ರಾ, 83 ರನ್‌ ನೀಡಿ ಪ್ರಮುಖ ಐದು ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ, ವಿದೇಶಿ ಪಿಚ್‌ಗಳಲ್ಲಿ ಅತಿಹೆಚ್ಚು (12) ಬಾರಿ ಐದು ವಿಕೆಟ್‌ ಗೊಂಚಲು ಸಾಧಿಸಿದ ಬೌಲರ್‌ ಎನಿಸಿಕೊಂಡ ಅವರು, SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ) ದೇಶಗಳಲ್ಲಿ 150 ವಿಕೆಟ್‌ಗಳನ್ನು ಪಡೆದ ಏಷ್ಯಾದ ಏಕೈಕ ಆಟಗಾರ ಎಂಬ ದಾಖಲೆಯನ್ನೂ ಬರೆದರು.

ಕ್ಯಾಚ್‌ ಬಿಟ್ಟ ಜೈಸ್ವಾಲ್‌; ಮನ ಗೆದ್ದ ಬೂಮ್ರಾ
ಇಂಗ್ಲೆಂಡ್‌ ತಂಡ 84 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 367 ರನ್‌ ಗಳಿಸಿತ್ತು. 81 ರನ್‌ ಗಳಿಸಿದ್ದ ಹ್ಯಾರಿ ಬ್ರೂಕ್‌ ಮತ್ತು ಆಗಷ್ಟೇ ಕ್ರೀಸ್‌ಗಿಳಿದಿದ್ದ ಕ್ರಿಸ್‌ ವೋಕ್ಸ್‌ (1 ರನ್‌) ಆಡುತ್ತಿದ್ದರು. 85ನೇ ಓವರ್‌ನಲ್ಲಿ ದಾಳಿಗಿಳಿದ ಬೂಮ್ರಾ ಮೊದಲ ಐದು ಎಸೆತಗಳಲ್ಲಿ ಕೇವಲ 2 ರನ್ ನೀಡಿದ್ದರು. ಕೊನೇ ಎಸೆತದಲ್ಲಿ ಹ್ಯಾರಿ ಬ್ರೂಕ್‌ ನೀಡಿದ ಕ್ಯಾಚ್‌ ಅನ್ನು ಗಲ್ಲಿಯಲ್ಲಿದ್ದ ಯಶಸ್ವಿ ಜೈಸ್ವಾಲ್‌ ಕೈಚೆಲ್ಲಿದರು.

ADVERTISEMENT

ಔಟ್‌ ಸೈಡ್‌ ಆಫ್‌ನತ್ತ ನುಗ್ಗುತ್ತಿದ್ದ ಶಾರ್ಟ್‌ ಲೆಂತ್‌ ಎಸೆತವನ್ನು ಕೆಣಕಿದ ಬ್ರೂಕ್‌, ಬೌಂಡರಿ ಗಿಟ್ಟಿಸಿಕೊಳ್ಳಲು ಯತ್ನಿಸಿದರು. ಆದರೆ ನೇರವಾಗಿ ತಮ್ಮತ್ತಲೇ ಬಂದ ಚೆಂಡನ್ನು ಹಿಡಿಯುವಲ್ಲಿ ಜೈಸ್ವಾಲ್‌ ವಿಫಲವಾದರು.

ಇದಷ್ಟೇ ಅಲ್ಲ. ಬೂಮ್ರಾ ಬೌಲಿಂಗ್‌ನಲ್ಲಿ ಇನ್ನೂ ಎರಡು ಕ್ಯಾಚ್‌ಗಳನ್ನು ಜೈಸ್ವಾಲ್‌ ಕೈ ಚೆಲ್ಲಿದರು. ರವೀಂದ್ರ ಜಡೇಜ ಕೂಡ ಒಂದು ಕ್ಯಾಚ್‌ ಬಿಟ್ಟರು.

ಈ ಕುರಿತು ದಿನದಾಟ ಮುಕ್ತಾಯದ ಬಳಿಕ ಮಾತನಾಡಿರುವ ಬೂಮ್ರಾ, 'ಕ್ಯಾಚ್‌ ಬಿಟ್ಟಾಗ ಬೇಸರವಾಯಿತು. ಆದರೆ, ಅವೆಲ್ಲ ಆಟದ ಭಾಗ. ಹೊಸ ಹುಡುಗರು. ಕಷ್ಟಪಟ್ಟು ಆಡುತ್ತಿದ್ದಾರೆ. ಹಾಗಾಗಿ, ಅದನ್ನೇ ದೊಡ್ಡದು ಮಾಡಿ, ಅವರ ಮೇಲೆ ಇನ್ನಷ್ಟು ಒತ್ತಡ ಹೇರುವುದು ನನಗಿಷ್ಟವಿಲ್ಲ. ಬೇಕಂತಲೇ ಯಾರೂ ಕ್ಯಾಚ್‌ಗಳನ್ನು ಬಿಡುವುದಿಲ್ಲ. ಅವರೆಲ್ಲ ಅನುಭವದಿಂದ ಕಲಿಯುತ್ತಾರೆ' ಎಂದಿದ್ದಾರೆ.

ಹೆಡಿಂಗ್ಲಿಯಲ್ಲಿನ ಕಠಿಣ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿರುವ ಬೂಮ್ರಾ, 'ಕೆಲವೊಮ್ಮೆ ಚಳಿಯಿಂದಾಗಿ ಚೆಂಡನ್ನು ಹಿಡಿಯುವುದು ಕಷ್ಟವಾಗುತ್ತದೆ' ಎಂದೂ ಹೇಳಿದ್ದಾರೆ.

ಬೂಮ್ರಾ ಅವರ ಅನುಭವದೆ ಮಾತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0