ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್‌ಪ್ರೀತ್‌ ಬೂಮ್ರಾಗೆ ಸ್ವದೇಶದಲ್ಲಿ ಮೊದಲ ಟೆಸ್ಟ್!

Last Updated 2 ಫೆಬ್ರುವರಿ 2021, 18:45 IST
ಅಕ್ಷರ ಗಾತ್ರ

ಬೆಂಗಳೂರು/ಚೆನ್ನೈ: ಮೂರು ವರ್ಷಗಳು, ಹದಿನೇಳು ಟೆಸ್ಟ್‌ಗಳು ಮತ್ತು ಎಪ್ಪತ್ತೊಂಬತ್ತು ವಿಕೆಟ್‌ಗಳು..

2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ‘ಜಸ್ಸಿ’ ಇವತ್ತು ಇಡೀ ಕ್ರಿಕೆಟ್‌ ಜಗತ್ತನ್ನು ಆವರಿಸಿಕೊಂಡಿರುವ ಬೌಲರ್‌. ತನಗಿಂತಲೂ ಅನುಭವಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಅವರ ಪೈಪೋಟಿಯನ್ನು ಮೀರಿ ಬೆಳೆದಿರುವ 28 ವರ್ಷದ ಬೂಮ್ರಾ ಈಗ ಸ್ವದೇಶದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಆಡುವ ತವಕದಲ್ಲಿದ್ದಾರೆ.

ಬೂಮ್ರಾ ತಮ್ಮ ವಿಶಿಷ್ಟ ಶೈಲಿಯ ಛಾಪು ಮೂಡಿಸಿದ್ದಾರೆ. ಆಡಿರುವ ಕಡಿಮೆ ಪಂದ್ಯಗಳಲ್ಲಿಯೇ ಐದು ಸಲ ಐದು ವಿಕೆಟ್‌ ಗೊಂಚಲುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಎದುರಿನ ಸರಣಿಯಲ್ಲಿ ಹ್ಯಾಟ್ರಿಕ್ ಕೂಡ ಗಳಿಸಿದ್ದರು. ಆದರೆ ಅವರು ಇದುವರೆಗೆ ಭಾರತದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಆಡಿಲ್ಲ. ಮಧ್ಯಮವೇಗಿಗಳಿಗೆ ನೆರವು ನೀಡುವ ಪಿಚ್‌ಗಳು ಅಲ್ಲಿವೆ. ಆದರೆ, ಅ ಪಿಚ್‌ಗಳಿಗೆ ಹೊಂದಿಕೊಂಡು ಬೌಲಿಂಗ್ ಮಾಡುವುದು ಕೂಡ ಕಷ್ಟಸಾಧ್ಯವಾದ ಸಾಧನೆ.

ಭಾರತ ತಂಡದ ಸಾಧನೆಗಳ ಇತಿಹಾಸವನ್ನು ನೋಡಿದಾಗ. ವಿದೇಶಿ ನೆಲದಲ್ಲಿ ಹೆಚ್ಚು ಯಶಸ್ವಿಯಾದ ನಾಯಕರ ಬಳಗದಲ್ಲಿ ಪರಿಣಾಮಕಾರಿ ಮಧ್ಯಮ ವೇಗಿಗಳಿದ್ದರು. ಮೊಹಮ್ಮದ್ ಅಜರುದ್ದೀನ್‌ಗೆ ಜಾವಗಲ್ ಶ್ರೀನಾಥ್, ಸೌರವ್ ಗಂಗೂಲಿಗೆ ಜಹೀರ್ ಖಾನ್, ಇಶಾಂತ್ ಶರ್ಮಾ ಅವರ ಸಾಥ್ ಸಿಕ್ಕಿತ್ತು. ಮಹೇಂದ್ರಸಿಂಗ್ ಧೋನಿ ಸಮಯದಲ್ಲಿ ಜಹೀರ್, ಇರ್ಫಾನ್ ಪಠಾಣ್, ಉಮೇಶ್ ಯಾದವ್, ಇಶಾಂತ್, ಶಮಿ, ಭುವನೇಶ್ವರ್ ಕುಮಾರ್ ಅವರಂತಹ ಬೌಲರ್‌ಗಳು ಮಿಂಚಿದರು.

ಮಧ್ಯಮವೇಗಿಗಳು ಗಾಯಗೊಳ್ಳುವುದು ಹೆಚ್ಚು ಅದರಲ್ಲೂ ಇಂದಿನ ಕ್ರಿಕೆಟ್‌ನಲ್ಲಿ ಆಟಗಾರರು ಬಿಡುವಿಲ್ಲದೇ ಆಡುತ್ತಿದ್ದಾರೆ. ಮೂರು ಮಾದರಿಗಳಲ್ಲಿ ದೇಶಿ–ವಿದೇಶಿ ಟೂರ್ನಿಗಳು, ಪ್ರೊ ಲೀಗ್‌ಗಳು ನಡೆಯುತ್ತಿವೆ ಇದೆಲ್ಲದರಲ್ಲಿಯೂ ಮಿಂಚುವ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಸವಾಲು ಮಧ್ಯಮವೇಗಿಗಳಿಗೆ ಇದೆ. ಬ್ಯಾಟ್ಸ್‌ಮನ್‌ಗಳಿಗೆ ಸಿಕ್ಕಷ್ಟು ತಾರಾಮೌಲ್ಯ ಬೌಲರ್‌ಗಳಿಗೆ ಸಿಗುವುದು ಕಡಿಮೆ. ಕಪಿಲ್, ಶ್ರೀನಾಥ್, ಜಹೀರ್ ಅವರು ಆ ಸಾಧನೆ ಮಾಡಿದ ಪ್ರಮುಖರು. ಜಸ್‌ಪ್ರೀತ್ ಅದೇ ಹಾದಿಯಲ್ಲಿದ್ದಾರೆ. ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌, ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಬಾಂಗ್ಲಾದ ಮುಸ್ತಫಿಜುರ್ ರೆಹಮಾನ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಲುಂಗಿ ಗಿಡಿ ಅವರ ಪೈಪೋಟಿಯೂ ಬೂಮ್ರಾಗೆ ಇದೆ. ಸದ್ಯಕ್ಕಂತೂ ಅವರೆಲ್ಲರನ್ನೂ ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ.

ಹೋದ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಸರಣಿಯ ಮೂರನೇ ಪಂದ್ಯದಲ್ಲಿ ಆಡುವಾಗ ಗಾಯಗೊಂಡಿದ್ದರು. ಅದ್ದರಿಂದ ನಾಲ್ಕನೇ ಟೆಸ್ಟ್‌ನಲ್ಲಿ ಅವರು ಆಡಿರಲಿಲ್ಲ. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಅವರು ಚೆನ್ನೈನಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

ವಿದೇಶಿ ಪಿಚ್‌ಗಳಲ್ಲಿ ವೇಗಿಗೆಳಿಗೆ ಹೆಚ್ಚು ನೆರವು ಇರುತ್ತದೆ. ಆದರೆ ಭಾರತದಲ್ಲಿ ಸ್ಪಿನ್‌ ಬೌಲರ್‌ಗಳಿಗೆ ಹೆಚ್ಚು ಅನುಕೂಲವಿರುತ್ತದೆ. ವಿದೇಶದಲ್ಲಿ ಗಳಿಸಿದಷ್ಟೇ ಯಶಸ್ಸನ್ನು ಭಾರತದ ನೆಲದಲ್ಲಿಯೂ ಈ ವಿಶಿಷ್ಟ ಶೈಲಿಯ ಬೌಲರ್ ಸಾಧಿಸುವರೇ ಎಂಬ ಕುತೂಹಲ ಗರಿಗೆದರಿದೆ.

’ಬೂಮ್ರಾ ಗಾಳಿಯಲ್ಲಿಯೇ ಚೆಂಡನ್ನು ಸ್ವಿಂಗ್ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಹಿಂದೆ ಪಾಕಿಸ್ತಾನದ ಬೌಲರ್‌ಗಳು ಇಂತಹ ಕೌಶಲ ಹೊಂದಿದ್ದರು. ಅದೇ ರೀತಿಯಲ್ಲಿ ಬೂಮ್ರಾ ಕೂಡ ಯಾರ್ಕರ್, ರಿವರ್ಸ್‌ ಸ್ವಿಂಗ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಿದ್ದಾರೆ. ಆದ್ದರಿಂದ ಪಿಚ್‌ ಹೇಗಿದ್ದರೂ ಅವರು ಯಶಸ್ವಿಯಾಗುತ್ತಾರೆ‘ ಎಂದು ಪಾಕಿಸ್ತಾನದ ವೇಗಿ ಶೋಯಬ್‌ ಅಖ್ತರ್‌ ಈಚೆಗೆ ಹೇಳಿದ್ದ ಮಾತು ಇಲ್ಲಿ ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT