ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup 2023: ಸಚಿನ್ ತೆಂಡೂಲ್ಕರ್‌ಗೆ ‘ಗೋಲ್ಡನ್ ಟಿಕೆಟ್’ ನೀಡಿದ ಜಯ್ ಶಾ

Published 8 ಸೆಪ್ಟೆಂಬರ್ 2023, 11:18 IST
Last Updated 8 ಸೆಪ್ಟೆಂಬರ್ 2023, 11:18 IST
ಅಕ್ಷರ ಗಾತ್ರ

ನವದೆಹಲಿ: ಅಕ್ಟೋಬರ್ 5ರಂದು ಭಾರತದಲ್ಲಿ ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಅಂಗವಾಗಿ ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್ ನೀಡುವ ಮೂಲಕ ಆಹ್ವಾನ ನೀಡಿದ್ದಾರೆ.

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ 10 ಸ್ಥಳಗಳಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ವಿಶ್ವದ 10 ತಂಡಗಳು ಭಾಗವಹಿಸಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸರಣಿಯ ಆರಂಭಿಕ ಮತ್ತು ಫೈನಲ್ ಪಂದ್ಯ ನಡೆಯಲಿದೆ. 46 ದಿನಗಳ ಕಾಲ ಒಟ್ಟು 48 ಪಂದ್ಯಗಳು ನಡೆಯಲಿವೆ.

ಸಚಿನ್ ತೆಂಡೂಲ್ಕರ್ ಅವರಿಗೆ ಜಯ್ ಶಾ ಅವರು ಗೋಲ್ಡನ್ ಟಿಕೆಟ್ ನೀಡುತ್ತಿರುವ ಚಿತ್ರವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ, ಬಿಸಿಸಿಐನ ‘ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್’ ಕಾರ್ಯಕ್ರಮದ ಭಾಗವಾಗಿ ಸಚಿನ್ ಅವರಿಗೆ ‘ಗೋಲ್ಡನ್ ಟಿಕೆಟ್’ ನೀಡಲಾಗಿದೆ.

‘ಇದು ಕ್ರಿಕೆಟ್ ಮತ್ತು ದೇಶಕ್ಕೆ ಒಂದು ಅವಿಸ್ಮರಣೀಯ ಕ್ಷಣ! ನಮ್ಮ ‘ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್’ ಕಾರ್ಯಕ್ರಮದ ಭಾಗವಾಗಿ, ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಅವರು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಿದರು. ಕ್ರಿಕೆಟ್ ಶ್ರೇಷ್ಠತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತ ಸಚಿನ್ ತೆಂಡೂಲ್ಕರ್. ಅವರ ಈ ಪ್ರಯಾಣವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಿದೆ. ಈಗ ಅವರು ಐಸಿಸಿ ಕ್ರಿಕೆಟ್ ವಿಶ್ವಕಪ್‌ 2023ರ ಭಾಗವಾಗಲಿದ್ದಾರೆ. ಆಟವನ್ನು ಮೈದಾನದಲ್ಲಿ ಲೈವ್ ಆಗಿ ವೀಕ್ಷಿಸುತ್ತಾರೆ’ ಎಂದು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

2011ರ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಸಚಿನ್ ತೆಂಡೂಲ್ಕರ್ ಅವರು, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರಾಗಿದ್ದಾರೆ. 463 ಪಂದ್ಯಗಳಿಂದ ಅವರು 18,426 ರನ್ ಕಲೆ ಹಾಕಿದ್ದಾರೆ. ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ. 45 ಪಂದ್ಯಗಳನ್ನು ಆಡಿರುವ ಅವರು 2,278 ರನ್ ಕೂಡಿ ಹಾಕಿದ್ದಾರೆ. 6 ವಿಶ್ವಕಪ್‌ಗಳಲ್ಲಿ ಆಡಿರುವ ಅವರು 56.95 ಸರಾಸರಿಯಲ್ಲಿ 6 ಶತಕ ಮತ್ತು 15 ಅರ್ಧಶತಕ ಸಿಡಿಸಿದ್ದಾರೆ. 152 ರನ್ ವಿಶ್ವಕಪ್‌ನಲ್ಲಿ ಅವರು ಗರಿಷ್ಠ ಮೊತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT