ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಮಿಮಾ ಆಟಕ್ಕೆ ಮಳೆ ಕಾಟ: ಭಾರತ– ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ ರದ್ದು

Last Updated 7 ಅಕ್ಟೋಬರ್ 2021, 13:06 IST
ಅಕ್ಷರ ಗಾತ್ರ

ಗೋಲ್ಡ್‌ಕೋಸ್ಟ್‌ (ಪಿಟಿಐ): ಭಾರತದ ಜೆಮಿಮಾ ರಾಡ್ರಿಗಸ್‌ (ಔಟಾಗದೆ 49, 36 ಎ, 7 ಬೌಂಡರಿ) ಅವರ ಮಿಂಚಿನ ಆಟ ಮುಂದುವರಿಸಲು ಮಳೆ ಅವಕಾಶ ಮಾಡಿಕೊಡಲಿಲ್ಲ. ಆಸ್ಟ್ರೇಲಿಯಾ ಎದುರಿನ ಮಹಿಳಾ ಟಿ20 ಸರಣಿಯ ಮೊದಲ ಟಿ20 ಪಂದ್ಯವು ಗುರುವಾರ ಒಂದು ಇನಿಂಗ್ಸ್ ಕೂಡ ಪೂರ್ಣಗೊಳ್ಳದೆ ರದ್ದಾಯಿತು.

ಟಾಸ್‌ ಗೆದ್ದ ಆತಿಥೇಯ ಆಸ್ಟ್ರೇಲಿಯಾ, ಹರ್ಮನ್‌ಪ್ರೀತ್ ಕೌರ್‌ ನಾಯಕತ್ವದ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. 15.2 ಓವರ್‌ಗಳಲ್ಲಿ ಭಾರತ ನಾಲ್ಕು ವಿಕೆಟ್‌ಗೆ 131 ರನ್‌ ಗಳಿಸಿದ್ದ ವೇಳೆ ಸುರಿದ ಭಾರಿ ಮಳೆ ಆಟಕ್ಕೆ ತಡೆಯೊಡ್ಡಿತು.

ಮೊದಲ ವಿಕೆಟ್ ಜೊತೆಯಾಟದಲ್ಲಿ ಸ್ಮೃತಿ ಮಂದಾನ (17, 10 ಎ) ಹಾಗೂ ಶಫಾಲಿ ವರ್ಮಾ (18, 14ಎ) ಅವರು 31 ಪೇರಿಸಿ ಉತ್ತಮ ಆರಂಭವನ್ನೇ ನೀಡಿದರು. ಆದರೆ ವೈಯಕ್ತಿಕ ದೊಡ್ಡ ಮೊತ್ತ ಗಳಿಸುವಲ್ಲಿ ಅವರಿಗೆ ಸಾಧ್ಯವಾಗಲಿಲ್ಲ. ಶಫಾಲಿ ಇನಿಂಗ್ಸ್‌ನಲ್ಲಿ ಆಕರ್ಷಕ ಮೂರು ಸಿಕ್ಸರ್‌ಗಳಿದ್ದವು. ಆ್ಯಶ್ಲಿ ಗಾರ್ಡನರ್‌ ಇವರಿಬ್ಬರ ವಿಕೆಟ್‌ ಉರುಳಿಸಿದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಜೆಮಿಮಾ ಆತಿಥೇಯ ಬೌಲರ್‌ಗಳನ್ನು ದಂಡಿಸಿದರು. ಆಟ ನಿಂತಾಗ ರಿಚಾ ಘೋಷ್‌ (ಔಟಾಗದೆ 17, 13 ಎ, 3 ಬೌ) ಜೊತೆ ಅವರು ಕ್ರೀಸ್‌ನಲ್ಲಿದ್ದರು.

ನಾಯಕಿ ಹರ್ಮನ್‌ಪ್ರೀತ್ ಕೌರ್‌ ಹಾಗೂ ಯಷ್ಟಿಕಾ ಭಾಟಿಯಾ ಮಿಂಚಲಿಲ್ಲ.

ಆಸ್ಟ್ರೇಲಿಯಾ ಪ‍ರ ಆ್ಯಶ್ಲಿ ಗಾರ್ಡನರ್‌ (28ಕ್ಕೆ 2) ಹಾಗೂ ಜಾರ್ಜಿಯಾ ವಾರೆಹಮ್‌ (3ಕ್ಕೆ 1) ಅವರ ಬೌಲಿಂಗ್ ಉತ್ತಮವಾಗಿತ್ತು.

ಉಭಯ ತಂಡಗಳ ನಡುವಣ ಎರಡನೇ ಪಂದ್ಯವು ಶನಿವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ: 15.2 ಓವರ್‌ಗಳಲ್ಲಿ 4ಕ್ಕೆ 131 (ಜೆಮಿಮಾ ರಾಡ್ರಿಗಸ್‌ ಔಟಾಗದೆ 49, ಶಫಾಲಿ ವರ್ಮಾ 18, ಸ್ಮೃತಿ ಮಂದಾನ 17, ರಿಚಾ ಘೋಷ್‌ ಔಟಾಗದೆ 17, ಯಷ್ಟಿಕಾ ಭಾಟಿಯಾ 15, ಹರ್ಮನ್‌ಪ್ರೀತ್ ಕೌರ್ 12; ಆ್ಯಶ್ಲಿ ಗಾರ್ಡನರ್‌ 28ಕ್ಕೆ 2, ಜಾರ್ಜಿಯಾ ವಾರೆಹಮ್‌ 3ಕ್ಕೆ 1, ಸೋಫಿಯಾ ಮೊಲಿನೆಕ್ಸ್ 23ಕ್ಕೆ 1). ಫಲಿತಾಂಶ: ಮಳೆಯಿಂದಾಗಿ ಪಂದ್ಯ ರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT