ಮಂಗಳವಾರ, ಆಗಸ್ಟ್ 20, 2019
22 °C
ವಿಶ್ವಕಪ್‌ ಕ್ರಿಕೆಟ್‌

’ಮಕ್ಕಳೇ, ಕ್ರೀಡೆ ಆಯ್ಕೆ ಮಾಡಿಕೊಳ್ಳಬೇಡಿ’ – ನ್ಯೂಜಿಲೆಂಡ್‌ ತಂಡದ ನೀಶಮ್‌ ಸಲಹೆ!

Published:
Updated:

ಬೆಂಗಳೂರು: ರೋಚಕ ತಿರುವಿನೊಂದಿಗೆ ಕ್ರಿಕೆಟ್ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ ವಿಶ್ವಕಪ್‌ ಕ್ರಿಕೆಟ್‌  ಫೈನಲ್‌ ಪಂದ್ಯದಲ್ಲಿ ಅಂತಿಮವಾಗಿ ಇಂಗ್ಲೆಂಡ್‌ ಗೆಲುವು ಪಡೆಯಿತು. ದಿಟ್ಟ ಹೋರಾಟ ನಡೆಸಿದರೂ ನ್ಯೂಜಿಲೆಂಡ್‌ ಪಾಲಿಗೆ ಮೊದಲ ವಿಶ್ವಕಪ್ ಚಾಂಪಿಯನ್‌ ಪಟ್ಟ ಒಲಿಯಲಿಲ್ಲ. ಸೋಲಿನ ಬೇಸರದಲ್ಲಿರುವ ಕಿವೀಸ್‌ ಪಡೆಯ ಜಿಮ್ಮಿ ನೀಶಮ್‌ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳದಂತೆ ಸಲಹೆ ನೀಡಿದ್ದಾರೆ. 

ಭಾನುವಾರ ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸಮಬಲದ ಹೋರಾಟದೊಂದಿಗೆ ಸೂಪರ್‌ ಓವರ್‌ ಹಂತ ತಲುಪಿ, ಅದರಲ್ಲೂ ಸಮಾನ ರನ್‌ ಗಳಿಸಿದರೂ ನಿಯಮಗಳ ಪ್ರಕಾರ ಕಡಿಮೆ ಬೌಂಡರಿ ದಾಖಲಿಸಿದ್ದ ‍ನ್ಯೂಜಿಲೆಂಡ್‌ ಸೋಲು ಅನುಭವಿಸಿತು. ಇದರಿಂದ ನೊಂದು ಟ್ವಿಟರ್‌ನಲ್ಲಿ ಅಭಿಪ್ರಾಯ ಹೊರ ಹಾಕಿರುವ ನ್ಯೂಜಿಲೆಂಡ್‌ ತಂಡದ ಆಲ್‌ರೌಂಡರ್‌, ವೃತ್ತಿಯಾಗಿ ಕ್ರೀಡೆಯ ಆಯ್ಕೆ ಮಾಡಿಕೊಳ್ಳುವವರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸೂಪರ್‌ ಓವರ್‌ ಟೈ ಆದರೂ ಇಂಗ್ಲೆಂಡ್‌ ಗೆದ್ದಿದ್ದು ಹೇಗೆ?

‘ಮಕ್ಕಳೇ, ಕ್ರೀಡೆಯನ್ನು ನಿಮ್ಮ ಆಯ್ಕೆಯಾಗಿ ಮಾಡಿಕೊಳ್ಳಬೇಡಿ. ಬೇಕಿಂಗ್‌(ತಿಂಡಿಗಳ ತಯಾರಿ) ಅಥವಾ ಇನ್ನಾವುದನ್ನಾದರು ಆರಿಸಿಕೊಳ್ಳಿ. ಖುಷಿಯಾಗಿ ಮತ್ತು ಪುಷ್ಠಿಯುತವಾಗಿ 60 ವರ್ಷ ಬದುಕಿ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಸೂಪರ್‌ ಓವರ್‌ನಲ್ಲಿ ಬ್ಯಾಟಿಂಗ್‌ ನಡೆಸಿದ ನೀಶಮ್‌, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಮೊದಲಿಗೆ ಇಂಗ್ಲೆಂಡ್‌ಗೆ ಶುಭಕೋರಿರುವ ಅವರು, ’ಮುಂದಿನ ಹತ್ತು ವರ್ಷಗಳ ವರೆಗೂ ವಿಶ್ವಕಪ್‌ ಫೈನಲ್‌ ಪಂದ್ಯದ ಕೊನೆಯ ಅರ್ಧ ತಾಸನ್ನು ನೆನಪಿಸಿಕೊಳ್ಳದಂತೆ ಇರುವೆ’ ಎಂದಿದ್ದಾರೆ. 

ಇದನ್ನೂ ಓದಿ: ವಿಶ್ವಕಪ್‌ಗೆ ಇಂಗ್ಲೆಂಡ್ ಹೊಸ ರಾಜ

‘ನೀವು ನಿರೀಕ್ಷಿಸಿದ್ದನ್ನು ಸಾಧಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು..’ ಎಂದು ಟ್ವೀಟಿಸಿದ್ದಾರೆ. ಫೈನಲ್‌ ಪಂದ್ಯ ವೀಕ್ಷಣೆಗೆ ನ್ಯೂಜಿಲೆಂಡ್‌ ಅಭಿಮಾನಿಗಳಿಗೆ ಟಿಕೆಟ್‌ ದೊರೆಯದಿದ್ದಾಗ, ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದರು. 

Post Comments (+)