ಸೋಮವಾರ, ಅಕ್ಟೋಬರ್ 25, 2021
25 °C

ಟಿ20 ನಾಯಕತ್ವ ತೊರೆಯಲು ಸಜ್ಜಾದ ಕೊಹ್ಲಿ ನಿರ್ಧಾರದ ಬಗ್ಗೆ ಕಪಿಲ್‌ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ವಿಶ್ವಕಪ್‌ ಟೂರ್ನಿಯ ಬಳಿಕ ಟಿ20 ತಂಡದ ನಾಯಕತ್ವ ತೊರೆಯುವುದಾಗಿ ಪ್ರಕಟಿಸಿದ್ದಾರೆ. ಈ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದರೆ, ಇನ್ನೂ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅದೇರೀತಿ ಕೊಹ್ಲಿ ನಿರ್ಧಾರದ ಬಗ್ಗೆ ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಹುಬ್ಬೇರಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ದೇವ್‌, ʼನಾನು ಈ ರೀತಿ ಯೋಚಿಸಿರಲಿಲ್ಲ. ಆದರೆ, ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ನಿರ್ಧಾರಗಳನ್ನು ಇತ್ತೀಚಿನ ದಿನಗಳಲ್ಲಿ ಆಟಗಾರರೇ ತೆಗೆದುಕೊಳ್ಳುತ್ತಿರುವುದು ವಿಚಿತ್ರವೆನಿಸುತ್ತದೆ. ಈ ವಿಚಾರದಲ್ಲಿ ಆಯ್ಕೆಗಾರರೂ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ಆಟಗಾರರು ಇಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಆಯ್ಕೆಗಾರರು ಮತ್ತು ಮಂಡಳಿಯೊಂದಿಗೆ ಚರ್ಚಿಸಬೇಕು. ಅದು ಬಹಳ ಮುಖ್ಯವಾಗುತ್ತದೆ. ಇಷ್ಟು ಬೇಗ ನಿರ್ಧಾರ ಘೋಷಿಸುವ ಅಗತ್ಯವಿರಲಿಲ್ಲ. ಅವರು (ಕೊಹ್ಲಿ) ಅದ್ಭುತ ಆಟಗಾರ. ಒಂದು ಸರಣಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದ ಮಾತ್ರಕ್ಕೆ ಆತ ಶ್ರೇಷ್ಠ ಆಟಗಾರ ಮತ್ತು ಶ್ರೇಷ್ಠ ನಾಯಕ ಎಂಬುದು ಬದಲಾಗುವುದಿಲ್ಲʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚುಟುಕು ಕ್ರಿಕೆಟ್‌ ತಂಡದ ನಾಯಕತ್ವ ತೊರೆಯುವ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ವಿರಾಟ್‌, ಮುಖ್ಯಕೋಚ್‌ ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು. ಹಾಗಾಗಿ ಕೊಹ್ಲಿಯವರದ್ದು ವೈಯಕ್ತಿಕ ನಿರ್ಧಾರವೆಂದು ಪರಿಗಣಿಸಿರುವ ಕಪಿಲ್, ಶುಭ ಹಾರೈಸಿದ್ದಾರೆ.

ʼಕೊಹ್ಲಿ, ಆಯ್ಕೆಗಾರರೊಂದಿಗೆ ಮಾತನಾಡಿ ಈ ನಿರ್ಧಾರ ಕೈಗೊಂಡಿದ್ದರೆ ಒಳ್ಳೆಯದು. ಅದು ಅವರ ವೈಯಕ್ತಿಕ ನಿರ್ಧಾರ. ಆ ಬಗ್ಗೆ ನಾನು ಏನೂ ಹೇಳಲಾರೆ. ಕ್ರಿಕೆಟಿಗರು ಇತ್ತೀಚಿನ ದಿನಗಳಲ್ಲಿ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ, ʼಚೆನ್ನಾಗಿ ಆಡಿದ್ದೀರಿ. ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ್ದೀರಿ. ಉಳಿದಿರುವ ನಿಮ್ಮ ವೃತ್ತಿಬದುಕಿನಲ್ಲಿ ಒಳ್ಳೆಯದಾಗಲಿʼ ಎಂದಷ್ಟೇ ಹಾರೈಸಬಲ್ಲೆʼ ಎಂದಿದ್ದಾರೆ.

45 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿರುವ ಕೊಹ್ಲಿ, 65.11ರ ಸರಾಸರಿಯಲ್ಲಿ 27 ಗೆಲುವು ತಂದುಕೊಟ್ಟಿದ್ದಾರೆ.

ಇವನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು