ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಕೆ.ನಾಯ್ಡು ಟ್ರೋಫಿ ಫೈನಲ್: ಕರ್ನಾಟಕ ತಂಡದ ಬಿಗಿ ಹಿಡಿತ

Published 11 ಮಾರ್ಚ್ 2024, 15:27 IST
Last Updated 11 ಮಾರ್ಚ್ 2024, 15:27 IST
ಅಕ್ಷರ ಗಾತ್ರ

ಬೆಂಗಳೂರು: ಎಡಗೈ ಸ್ಪಿನ್ನರ್‌ ಪಾರಸ್‌ ಗುರುಬಕ್ಷ್ ಆರ್ಯ (35ಕ್ಕೆ5) ನೇತೃತ್ವದಲ್ಲಿ ಸ್ಪಿನ್ನರ್‌ಗಳ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದ ಎರಡನೇ ದಿನವಾದ ಸೋಮವಾರ ಉತ್ತರ ಪ್ರದೇಶ ತಂಡದ ಮೇಲೆ ಬಿಗಿಹಿಡಿತ ಸಾಧಿಸಿತು. 219 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದ ಕರ್ನಾಟಕ ದಿನ ಕೊನೆಗೆ ಆ ಮುನ್ನಡೆಯನ್ನು 310 ರನ್‌ಗಳಿಗೆ ಏರಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ತಂಡ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 91 ರನ್ ಗಳಿಸಿದೆ. ಮೆಕ್ನೀಲ್‌ ಎಚ್‌.ಎನ್‌. (ಔಟಾಗದೇ 33, 99 ಎಸೆತ) ಮತ್ತು ಪ್ರಖರ್‌ ಚತುರ್ವೇದಿ (ಔಟಾಗದೇ 55, 88 ಎಸೆತ, 4x7, 6x2) ಆಟವನ್ನು ಮೂರನೇ ದಿನಕ್ಕೆ ಕಾಯ್ದಿಟ್ಟರು. ಇನ್ನೂ ಎರಡು ದಿನಗಳ ಆಟ ಉಳಿದಿದ್ದು, ಉತ್ತರ ಪ್ರದೇಶ ಒತ್ತಡಕ್ಕೆ ಸಿಲುಕಿದೆ.

ಇದಕ್ಕೆ ಮೊದಲು ಕರ್ನಾಟಕ (ಭಾನುವಾರ: 5 ವಿಕೆಟ್‌ಗೆ 325) ಮೊದಲ ದಿನದ ಮೊತ್ತಕ್ಕೆ 33 ರನ್ ಸೇರಿಸಲಷ್ಟೇ ಶಕ್ತವಾಯಿತು. ಅಷ್ಟರೊಳಗೆ ಯಶೋವರ್ಧನ್ ಪರಂತಾಪ್ (ಭಾನುವಾರ ಔಟಾಗದೇ 84) ಶತಕವನ್ನು ಪೂರೈಸಿದರು. ಅವರ 105 ರನ್‌ಗಳು 129 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಬಂತು. ವಿಕೆಟ್‌ ಕೀಪರ್‌ ಕೃತಿಕ್ ಕೃಷ್ಣ (ನಿನ್ನೆಯ ಮೊತ್ತಕ್ಕೆ ಎಂಟು ರನ್ ಸೇರಿಸಲಷ್ಟೇ ಶಕ್ತರಾದರು. ಎರಡನೇ ದಿನ ಬಿದ್ದ ಕರ್ನಾಟಕದ ಐದು ವಿಕೆಟ್‌ಗಳಲ್ಲಿ ಲೆಗ್‌ ಸ್ಪಿನ್ನರ್ ವಿಪ್ರಾಜ್ ನಾಲ್ಕನ್ನು ಪಡೆದರು

ಉತ್ತರ ಪ್ರದೇಶದ ಈ ಸಂತಸ ಕೆಲವೇ ಕ್ಷಣಗಳಲ್ಲಿ ಕರಗಿಹೋಯಿತು. ಮಧ್ಯಮ ವೇಗಿ ಪರಂತಾಪ್‌ ಮೊದಲ ಓವರ್‌ನಲ್ಲೇ ಆರಂಭ ಆಟಗಾರ 0) ಸ್ವಸ್ತಿಕ್ (0) ವಿಕೆಟ್‌ ಪಡೆದರು. ರಿತುರಾಜ್‌ ಶರ್ಮ (26) ಜೊತೆಗೂಡಿದ ಕೃತಗ್ಯ ಸಿಂಗ್ (21) ಪರಿಸ್ಥಿತಿ ಸುಧಾರಿಸಿ ಎರಡನೇ ವಿಕೆಟ್‌ಗೆ 43 ರನ್ ಸೇರಿಸಿದರು. ಆದರೆ ನಂತರ ಸ್ಪಿನ್ನರ್‌ಗಳಾದ ಪರಾಸ್‌, ಮೊಹ್ಸಿನ್ ಖಾನ್ ಮತ್ತು ಮೆಕ್ನೀಲ್ ದಾಳಿಗೆ ಸಿಲುಕಿ ನಿಯಮಿತವಾಗಿ ವಿಕೆಟ್‌ಗಳು ಉರುಳಿದವು. ತಂಡ 139 ರನ್‌ಗಳಿಗೆ ಕುಸಿಯಿತು. ವಿಕೆಟ್‌ ಕೀಪರ್ ಆರಾಧ್ಯ ಯಾದವ್‌ ಮಾತ್ರ ಪ್ರತಿರೋಧ ತೋರಿ 66 ರನ್‌ (94 ಎಸೆತ, 4x6, 6x1) ಹೊಡೆದರು. ಆರಾಧ್ಯ ಮತ್ತು ವಿಪ್ರಾಜ್ ಏಳನೇ ವಿಕೆಟ್‌ಗೆ 48 ರನ್ ಸೇರಿಸಿದ್ದರಿಂದ ತಂಡ ನೂರರ ಗಡಿ ದಾಟಿತು.

ಕರ್ನಾಟಕ ತಂಡ ಫಾಲೊಆನ್‌ ಹೇರಲು ಹೋಗಲಿಲ್ಲ. ಮೆಕ್ನೀಲ್ ಮತ್ತು ಚತುರ್ವೇದಿ ದಿನದ ಉಳಿದ ಅವಧಿಯನ್ನು ಆರಾಮವಾಗಿ ಕಳೆದರು. ಸ್ಪಿನ್ನರ್‌ಗಳ ಪ್ರಭಾವ ಏನೂ ಕಾಡಲಿಲ್ಲ.

ಸ್ಕೋರುಗಳು: ಮೊದಲ ಇನಿಂಗ್ಸ್‌: ಕರ್ನಾಟಕ: 99.5 ಓವರುಗಳಲ್ಲಿ 358 (ಯಶೋವರ್ಧನ್ ಪರಂತಾಪ್ 105, ಕೃತಿಕ್ ಕೃಷ್ಣ 66; ವಿಪ್ರಾಜ್ ನಿಗಮ್ 51ಕ್ಕೆ4); ಉತ್ತರ ಪ್ರದೇಶ: 46.2 ಓವರುಗಳಲ್ಲಿ 139 (ರಿತುರಾಜ್‌ ಶರ್ಮಾ 26, ಕೃತಗ್ಯ ಕೆ.ಕೆ.ಸಿಂಗ್‌ 21, ಆರಾಧ್ಯ ಯಾದವ್‌ 66; ಮೊಹ್ಸಿನ್ ಖಾನ್‌ 40ಕ್ಕೆ2, ಪಾರಸ್‌ ಗುರುಬಕ್ಷ ಆರ್ಯ 35ಕ್ಕೆ5, ಮೆಕ್ನೀಲ್‌ ಎಚ್‌.ಎನ್‌. 18ಕ್ಕೆ2); ಎರಡನೇ ಇನಿಂಗ್ಸ್‌: ಕರ್ನಾಟಕ: 31 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 91 (ಮೆಕ್ನೀಲ್ ಎಚ್‌.ಎನ್‌.ಬ್ಯಾಟಿಂಗ್‌ 33,  ಪ್ರಖರ್‌ ಚತುರ್ವೇದಿ ಬ್ಯಾಟಿಂಗ್ 55).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT