ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಕ್ವಾರ್ಟರ್‌ಗೆ ಕರ್ನಾಟಕ; ಕ್ವಾರ್ಟರ್‌ಗೆ ಬಂಗಾಳ

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ: 16ರಂದು ಪ್ರೀಕ್ವಾರ್ಟರ್‌ ಫೈನಲ್
Last Updated 9 ನವೆಂಬರ್ 2021, 14:38 IST
ಅಕ್ಷರ ಗಾತ್ರ

ಗುವಾಹಟಿ: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪ್ರೀಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿತು.

ಮಂಗಳವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ 7 ವಿಕೆಟ್‌ಗಳಿಂದ ಜಯಿಸಿದ ಬಂಗಾಳ ತಂಡವು ನೇರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು. ಗುಂಪಿನಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಜಯಿಸಿದ್ದ ಕರ್ನಾಟಕ ತಂಡವು ಕೊನೆಯ ಹಣಾಹಣಿಯಲ್ಲಿ ಮುಗ್ಗರಿಸಿತು. ಅದರಿಂದಾಗಿ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

ಗುವಾಹಟಿಯ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬಂಗಾಳ ತಂಡದ ಮುಖೇಶ್ ಕುಮಾರ್ (33ಕ್ಕೆ3) ಮತ್ತು ಪ್ರದಿಪ್ತ ಪ್ರಾಮಾಣಿಕ್ (33ಕ್ಕೆ2) ಅವರ ಶಿಸ್ತಿನ ಬೌಲಿಂಗ್ ಮುಂದೆ ಕರ್ನಾಟಕ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 134 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಅದಕ್ಕುತ್ತರವಾಗಿ ಬಂಗಾಳ ತಂಡವು 18 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 138 ರನ್‌ ಗಳಿಸಿತು.

ಆರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ದೇವದತ್ತ ಪಡಿಕ್ಕಲ್ ಅವರ ವಿಕೆಟ್‌ಗಳನ್ನು ಮೊದಲ ಓವರ್‌ನಲ್ಲಿಯೇ ಗಳಿಸಿದ ಮುಖೇಶ್ ಕುಮಾರ್ ದೊಡ್ಡ ಹೊಡೆತ ಕೊಟ್ಟರು. ನಾಯಕ ಮನೀಷ್ ಪಾಂಡೆ (32; 27ಎಸೆತ, 3ಬೌಂಡರಿ, 1ಸಿಕ್ಸರ್) ಮತ್ತು ಕರುಣ್ ನಾಯರ್ (44; 44ಎ, 5ಬೌಂಡರಿ) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 61 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡ ತುಸು ಚೇತರಿಸಿಕೊಂಡಿತು.

ಆದರೆ, ಹತ್ತನೇ ಓವರ್‌ನಲ್ಲಿ ಮನೀಷ್ ಪಾಂಡೆ ವಿಕೆಟ್ ಗಳಿಸಿದ ಶಹಬಾಜ್ ಅಹಮದ್ ಜೊತೆಯಾಟವನ್ನು ಮುರಿದರು. ಕರುಣ್ ಜೊತೆಗೂಡಿದ ಅನಿರುದ್ಧ ಜೋಶಿ (12 ರನ್) ತಂಡದ ಮೊತ್ತವು 100ರ ಗಡಿ ದಾಟುವಂತೆ ನೋಡಿಕೊಂಡರು. ಆದರೆ 16ನೇ ಓವರ್‌ನ ಎರಡು ಎಸೆತಗಳಲ್ಲಿ ಕರುಣ್ ನಾಯರ್ ಮತ್ತು ಜೋಶಿಯ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡ ಪ್ರದೀಪ್ತ ಪ್ರಾಮಾಣಿಕ್ ಕರ್ನಾಟಕದ ದೊಡ್ಡ ಮೊತ್ತ ಗಳಿಸುವ ಆಸೆಗೆ ಅಡ್ಡಗಾಲು ಹಾಕಿದರು.

ಗುರಿ ಬೆನ್ನಟ್ಟಿದ ಬಂಗಾಳ ತಂಡದ ನಾಯಕ ಅಭಿಮನ್ಯು ಈಶ್ವರನ್ (ಅಜೇಯ 51; 49ಎ, 4ಬೌಂಡರಿ, 1ಸಿಕ್ಸರ್) ಸುಂದರ ಬ್ಯಾಟಿಂಗ್ ಮಾಡಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT