ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಕರ್ನಾಟಕ–ಗೋವಾ ರಣಜಿ ಪಂದ್ಯ ಇಂದಿನಿಂದ

ಜಯದ ಹಾದಿಗೆ ಮರಳುವ ವಿಶ್ವಾಸ
Published 18 ಜನವರಿ 2024, 21:59 IST
Last Updated 18 ಜನವರಿ 2024, 21:59 IST
ಅಕ್ಷರ ಗಾತ್ರ

ಮೈಸೂರು: ಅಹಮದಾಬಾದಿನಲ್ಲಿ ಈಚೆಗೆ ಗುಜರಾತ್ ತಂಡದ ಎದುರು ಗೆಲುವನ್ನು ಕೈಚೆಲ್ಲಿದ ಆಘಾತದಿಂದ ಹೊರಬರುವ ಪ್ರಯತ್ನದಲ್ಲಿರುವ ಕರ್ನಾಟಕ ತಂಡವು ಶುಕ್ರವಾರದಿಂದ ಇಲ್ಲಿ ಆರಂಭವಾಗಲಿರುವ ರಣಜಿ ಟೂರ್ನಿಯ ಪಂದ್ಯದಲ್ಲಿ ಗೋವಾ ಎದುರು ಕಣಕ್ಕಿಳಿಯಲಿದೆ. 

ಮಯಂಕ್ ಅಗರವಾಲ್ ನಾಯಕತ್ವದ ತಂಡವು ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ  ಜಯದ ಹಾದಿಗೆ ಮರಳುವ ವಿಶ್ವಾಸದಲ್ಲಿದೆ.

ಟೂರ್ನಿಯ ಸಿ ಗುಂಪಿನಲ್ಲಿ ಆಡುತ್ತಿರುವ ರಾಜ್ಯ ತಂಡವು ಹುಬ್ಬಳ್ಳಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಪಂಜಾಬ್ ಎದುರು ಗೆದ್ದಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಗುಜರಾತ್ ಎದುರು 110 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕರ್ನಾಟಕ ತಂಡವು ಸೋತಿತ್ತು.  ಗುರಿ ಸಾಧಿಸುವ ಹಾದಿಯಲ್ಲಿ ಆರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ದೇವದತ್ತ ಪಡಿಕ್ಕಲ್ ಅವರು ಮೊದಲ ವಿಕೆಟ್‌ಗೆ 50 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ, ನಂತರದ 63 ರನ್‌ ಗಳ ಅಂತರದಲ್ಲಿ ಆಲೌಟ್ ಆಗಿತ್ತು.

ಇದೀಗ ಆ ಕಹಿ ನೆನಪು ಮರೆಯಲು ಗೋವಾ ಎದುರು ಜಯಿಸುವ ಛಲದಲ್ಲಿರುವ ಕರ್ನಾಟಕ ತಂಡವು ಗುರುವಾರ ಕಠಿಣ ಅಭ್ಯಾಸ ನಡೆಸಿತು.

ಮಾನಸಗಂಗೋತ್ರಿಯ ಅಂಗಳದಲ್ಲಿ ಮೂರು ವರ್ಷದ ಬಳಿಕ ಮತ್ತೆ ರಣಜಿ ಪಂದ್ಯ ನಡೆಯಲಿದೆ. ಹಸಿರಿನಿಂದ ಕಂಗೊಳಿಸುತ್ತಿದ್ದು, ಆರಂಭದಲ್ಲಿ ಬ್ಯಾಟಿಂಗ್‌ಗೆ ನೆರವಾಗುವ ನಿರೀಕ್ಷೆ ಇದೆ. ಕರ್ನಾಟಕ ತಂಡದಲ್ಲಿ ಅನುಭವಿ ಬ್ಯಾಟರ್‌ಗಳು ಇದ್ದಾರೆ. ನಾಯಕ ಮಯಂಕ್‌ ಪಂಜಾಬ್‌ ಎದುರು ಎರಡೂ ಇನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿದ್ದರು. ಆದರೆ, ಗುಜರಾತ್ ಎದುರು ಶತಕ ಸಿಡಿಸುವ ಮೂಲಕ ಲಯಕ್ಕೆ ಮರಳಿದ್ದಾರೆ. ದೇವದತ್ತ ಪಡಿಕ್ಕಲ್‌ ಹಾಗೂ ಮನೀಷ್ ಪಾಂಡೆ ಉತ್ತಮ ಲಯ ಕಾಯ್ದುಕೊಂಡಿದ್ದಾರೆ. ಆದರೆ, ಮೈಸೂರಿನವರೇ ಆದ ಬ್ಯಾಟರ್‌ ನಿಕಿನ್ ಜೋಸ್‌ ಅವರು ನಿರೀಕ್ಷಿಗೆ ತಕ್ಕಂತೆ ಆಡಿಲ್ಲ. ಸಮರ್ಥ್‌ ಕೂಡ ಲಯಕ್ಕೆ ಮರಳಬೇಕಿದೆ.

ಬೌಲಿಂಗ್ ವಿಭಾಗದಲ್ಲಿ ಮಧ್ಯಮವೇಗಿ ವಿ. ಕೌಶಿಕ್ ನಿರಂತರ ಯಶಸ್ಸು ಸಾಧಿಸುತ್ತಿದ್ದಾರೆ. ವೈಶಾಖ ವಿಜಯಕುಮಾರ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಗುಜರಾತ್ ಎದುರಿನ ಪಂದ್ಯದ ವೇಳೆ ಸ್ನಾಯುಸೆಳೆತದಿಂದ ಬಳಲಿದ್ದ ವೇಗಿ ಪ್ರಸಿದ್ಧ ಕೃಷ್ಣ ಅವರು ಇಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ. ಒಂದೊಮ್ಮೆ ಅವರು ಆಡದಿದ್ದರೆ ಎಂ. ವೆಂಕಟೇಶ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಸ್ಪಿನ್‌ ವಿಭಾಗದಲ್ಲಿ ಅನುಭವಿ ಶುಭಾಂಗ್‌ ಹೆಗಡೆ  ರೋಹಿತ್ ಕುಮಾರ್‌ ಹಾಗೂ ಶಶಿಕುಮಾರ್ ಕಾಂಬ್ಳೆ ಇದ್ದಾರೆ.

ಈ ಪಂದ್ಯದ ತರುವಾಯ ಕರ್ನಾಟಕವು ತ್ರಿಪುರ, ರೈಲ್ವೇಸ್‌, ತಮಿಳುನಾಡು ಹಾಗೂ ಚಂಡೀಗಢ ತಂಡಗಳನ್ನು ಎದುರಿಸಲಿದೆ. ಆ ಸವಾಲುಗಳಿಗಾಗಿ ಸಿದ್ಧರಾಗಲು ಕೂಡ ಗೋವಾ ಎದುರಿನ ಪಂದ್ಯದಲ್ಲಿ ಜಯದ ಮುನ್ನುಡಿ ಬರೆಯುವುದು ಅವಶ್ಯವಾಗಿದೆ.

ಪ್ರವಾಸಿ ಗೋವಾ ತಂಡವು ಈ ಋತುವಿನಲ್ಲಿ ಮಿಶ್ರಫಲ ಕಂಡಿದ್ದು, ಇನ್ನೂ ಗೆಲುವು ಸಾಧ್ಯವಾಗಿಲ್ಲ. ತ್ರಿಪುರ ಎದುರು 237 ರನ್‌ಗಳ ಭಾರಿ ಅಂತರದಿಂದ ಪರಾಭವಗೊಂಡಿದ್ದ ತಂಡವು ಹಿಂದಿನ ಪಂದ್ಯದಲ್ಲಿ ಚಂಡೀಗಡ ಎದುರು ಡ್ರಾ ಮಾಡಿಕೊಂಡಿತ್ತು. ನಾಯಕ ದರ್ಶನ್ ಮಿಸಾಳ್‌, ಸುಯಶ್‌ ಪ್ರಭುದೇಸಾಯಿ ಫಾರ್ಮ್‌ನಲ್ಲಿದ್ದಾರೆ. ರಾಹುಲ್ ತ್ರಿಪಾಠಿಯವರಂತಹ ಅನುಭವಿ ಆಟಗಾರರು ತಂಡದಲ್ಲಿದ್ದು, ಯುವ ಆಲ್‌ರೌಂಡರ್‌ಗಳು ತಂಡಕ್ಕೆ ನೆರವಾಗುವ ನಿರೀಕ್ಷೆ ಇದೆ. ಆಲ್‌ರೌಂಡರ್ ಅರ್ಜುನ್‌ ತೆಂಡೂಲ್ಕರ್ ಸಹ ಬಳಗದಲ್ಲಿದ್ದಾರೆ.

ಪಂದ್ಯ ಆರಂಭ: ಬೆಳಿಗ್ಗೆ 9.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT