ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ರಿಂದ ಬೆಂಗಳೂರಿನಲ್ಲಿ ಹಾಕಿ ‘ಹಬ್ಬ’

ಅಖಿಲ ಭಾರತ ಆಹ್ವಾನಿತ ಪುರುಷರ ಟೂರ್ನಿ: ದಿಗ್ಗಜ ಆಟಗಾರರು ಕಣಕ್ಕೆ
Last Updated 7 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಾಕಿ ಕರ್ನಾಟಕ ಆಶ್ರಯದ ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಪುರುಷರ ಟೂರ್ನಿಗೆ ಇದೇ 10ರಂದು ಶಾಂತಿನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಚಾಲನೆ ಸಿಗಲಿದೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹಾಕಿ ಕರ್ನಾಟಕ ಉಪಾಧ್ಯಕ್ಷ ವಿ.ಆರ್‌.ರಘುನಾಥ್‌ ಈ ವಿಷಯ ತಿಳಿಸಿದರು.

‘ಒಟ್ಟು ಒಂಬತ್ತು ದಿನಗಳ ಕಾಲ ಟೂರ್ನಿ ನಡೆಯಲಿದೆ. ಆಗಸ್ಟ್‌ 18ರಂದು ಫೈನಲ್‌ ಆಯೋಜನೆಯಾಗಿದೆ. ಎಸ್‌.ಕೆ.ಉತ್ತಪ್ಪ, ನಿಕಿನ್‌ ತಿಮ್ಮಯ್ಯ, ಆಡ್ರಿಯನ್‌ ಡಿಸೋಜಾ, ದೇವೇಂದ್ರ ವಾಲ್ಮೀಕಿ, ಹರ್ಜೀತ್‌ ಸಿಂಗ್‌ ಸೇರಿದಂತೆ ಪ್ರಮುಖ ಆಟಗಾರರು ವಿವಿಧ ತಂಡಗಳ ಪರ ಕಣಕ್ಕಿಳಿಯಲಿದ್ದಾರೆ. ಡೊಲೊ–650 ಮತ್ತು ಮೈಕ್ರೊ ಲ್ಯಾಬ್ಸ್‌ ಲಿಮಿಟೆಡ್‌, ಟೂರ್ನಿಯ ಪ್ರಾಯೋಜಕತ್ವ ಪಡೆದಿವೆ’ ಎಂದು ರಘುನಾಥ್‌ ಮಾಹಿತಿ ನೀಡಿದರು.

‘ಟೂರ್ನಿಯಲ್ಲಿ ದೇಶದ ಪ್ರಮುಖ ಎಂಟು ತಂಡಗಳು ಪಾಲ್ಗೊಳ್ಳಲಿವೆ. ಸಾಮರ್ಥ್ಯ ಸಾಬೀತು‍ಪಡಿಸಲುಯುವ ಆಟಗಾರರಿಗೆ ಈ ಟೂರ್ನಿ ಉತ್ತಮ ವೇದಿಕೆಯಾಗಿದೆ. ಇಲ್ಲಿ ಚೆನ್ನಾಗಿ ಆಡಿದರೆ ರಾಷ್ಟ್ರೀಯ ಶಿಬಿರಕ್ಕೂ ಆಯ್ಕೆಯಾಗ ಬಹುದು. ವಿಜೇತರು ಮತ್ತು ರನ್ನರ್ಸ್‌ ಅಪ್‌ ಆದವರಿಗೆ ಕ್ರಮವಾಗಿ ₹4 ಮತ್ತು ₹2 ಲಕ್ಷ ನಗದು ಮತ್ತು ಟ್ರೋಫಿ ನೀಡುತ್ತಿದ್ದೇವೆ’ ಎಂದೂ ತಿಳಿಸಿದರು.

‘ನಾಲ್ಕನೇ ಆವೃತ್ತಿಯ ಈ ಟೂರ್ನಿಯು ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ. ಮುಂಬೈಯ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌), ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌), ಆಲ್‌ ಇಂಡಿಯಾ ಕಸ್ಟಮ್ಸ್‌ ಮತ್ತು ನವದೆಹಲಿಯ ಇಂಡಿಯನ್‌ ನೇವಿ ತಂಡಗಳು ‘ಎ’ ಗುಂಪಿನಲ್ಲಿ ಆಡಲಿವೆ. ಆರ್ಮಿ ಇಲೆವನ್‌, ಮುಂಬೈಯ ಏರ್‌ ಇಂಡಿಯಾ, ನವದೆಹಲಿಯ ಇಂಡಿಯನ್‌ ಏರ್‌ಫೋರ್ಸ್‌ ಮತ್ತು ಆತಿಥೇಯ ಹಾಕಿ ಕರ್ನಾಟಕ ತಂಡಗಳು ‘ಬಿ’ ಗುಂಪಿನಲ್ಲಿ ಹೋರಾಡಲಿವೆ’ ಎಂದು ಸಂಘಟನಾ ಕಾರ್ಯದರ್ಶಿ ಪವಿನ್‌ ಪೊನ್ನಣ್ಣ ಹೇಳಿದರು.

ನಿಕಿನ್‌ ತಿಮ್ಮಯ್ಯ ಅವರು ಹಾಕಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೇ 10ರಂದು ಸಂಜೆ 4 ಗಂಟೆಗೆ ನಡೆಯುವ ಪಂದ್ಯದಲ್ಲಿ ಆತಿಥೇಯರು ಏರ್‌ ಇಂಡಿಯಾ ವಿರುದ್ಧ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT