ಶನಿವಾರ, ಜುಲೈ 31, 2021
25 °C

ಪೂರ್ಣಪ್ರಮಾಣದ ಐಪಿಎಲ್ ಬೇಕು: ಕೆಕೆಆರ್‌ ಸಿಇಒ ವೆಂಕಿ ಮೈಸೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಕೊರೊನಾ ಹಾವಳಿ ಮುಂದುವರಿಯುತ್ತಿರುವಾಗಲೇ ಇಂಡಿಯ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯನ್ನು ಈ ವರ್ಷವೇ ಆಯೋಜಿಸುವ ಕುರಿತು ಆಲೋಚನೆ ನಡೆಸುತ್ತಿರುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಗುರುವಾರ ಹೊರಬಿದ್ದ ಈ ಹೇಳಿಕೆ ಕ್ರಿಕೆಟ್ ಪ್ರಿಯರಲ್ಲಿ ಹುರುಪು ತುಂಬಿದೆ. ಆದರೆ ‘ಅರ್ಧಂಬರ್ಧ’ ಐಪಿಎಲ್ ನಡೆಸುವುದಕ್ಕೆ ಸಹಮತ ಇಲ್ಲ ಎಂಬ ಮಾತು ಫ್ರಾಂಚೈಸ್‌ಗಳಿಂದ ಕೇಳಿ ಬಂದಿರುವುದು ಬಿಸಿಸಿಐನ ಉತ್ಸಾಹಕ್ಕೆ ತಣ್ಣೀರು ಸುರಿಸಿದೆ.

‘ಕೊರೊನಾ ವೈರಾಣು ಈ ಬಾರಿಯ ಕ್ರಿಕೆಟ್ ಋತುವನ್ನು ಹೈರಾಣು ಮಾಡಿದೆ. ಇಂಥ ಸಂದರ್ಭದಲ್ಲಿ ಕಾಟಾಚಾರಕ್ಕೆ ಎಂಬಂತೆ ಐಪಿಎಲ್ ಟೂರ್ನಿ ನಡೆಸುವುದು ಸರಿಯಲ್ಲ ಎಂಬುದು ಎಲ್ಲ ಫ್ರಾಂಚೈಸ್‌ಗಳ ಅಭಿಪ್ರಾಯ’ ಎಂದು ಕೋಲ್ಕತ್ತ ನೈಟ್‌ರೈ‌ಡರ್ಸ್ (ಕೆಕೆಆರ್)‌ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಿ ಮೈಸೂರು ಹೇಳಿದ್ದಾರೆ. 

ಮಾರ್ಚ್‌ ತಿಂಗಳಲ್ಲಿ ಭಾರತಕ್ಕೆ ಕಾಲಿಟ್ಟ ಕೊರೊನಾ ವೈರಾಣುವಿನ ಕಾಟ ಹೆಚ್ಚುತ್ತಿದ್ದಂತೆ ಐಪಿಎಲ್ ಟೂರ್ನಿಯನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಲಾಗಿತ್ತು. ಟೂರ್ನಿ ನಡೆಯುವ ಕುರಿತು ಇನ್ನು ಕೂಡ ಅನಿಶ್ಚಿತ ಸ್ಥಿತಿ ಮುಂದುವರಿದಿದೆ. ಟಿ–20 ವಿಶ್ವಕಪ್ ಟೂರ್ನಿಯ ಭವಿಷ್ಯದೊಂದಿಗೆ ಐಪಿಎಲ್ ಭವಿಷ್ಯವೂ ತಾಳೆ ಹಾಕಿಕೊಂಡಿದೆ.

ಏನೇ ಆದರೂ ‘ಟೂರ್ನಿಯ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳಲು ಯಾರೂ ಸಿದ್ಧರಿಲ್ಲ. ಟೂರ್ನಿಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಬೇಕು ಎಂಬುದೇ ಎಲ್ಲರ ಅನಿಸಿಕೆ’ ಎಂದು ಕೊರೊನಾ ಮತ್ತು ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ ತೊಂದರೆಗೆ ಒಳಗಾದವರಿಗೆ ನೆರವಾಗಲು ಆಯೋಜಿಸಿರುವ ‘ಕೆಕೆಆರ್ ಸಹಾಯತಾ ವಾಹನ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಕಡಿಮೆ ಪಂದ್ಯಗಳೊಂದಿಗೆ ಮತ್ತು ವಿದೇಶಿ ಆಟಗಾರರಿಗೆ ಅವಕಾಶ ನೀಡದೇ ಟೂರ್ನಿ ಆಯೋಜಿಸುವಂತೆ ಸಲಹೆಗಳು ಬಂದಿದ್ದು ಮಾರ್ಚ್ ತಿಂಗಳಲ್ಲಿ ಬಿಸಿಸಿಐ ಮತ್ತು ವಿವಿಧ ಫ್ರಾಂಚೈಸ್‌ಗಳ ನಡುವಿನ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದೆ.

ಆದರೆ ವಿದೇಶಿ ಆಟಗಾರರಿಲ್ಲದ ಐಪಿಎಲ್ ಸಪ್ಪೆ ಎಂದು ವೆಂಕಿ ಹೇಳಿದ್ದಾರೆ. ಭಾರತದ ಆಟಗಾರರು ಐಪಿಎಲ್‌ನ ಬೆನ್ನೆಲುಬು ನಿಜ. ಆದರೆ ವಿದೇಶಿ ಆಟಗಾರರು ಟೂರ್ನಿಯಲ್ಲಿ ಬೇಕೇಬೇಕು. ನಮ್ಮ ತಂಡವನ್ನೇ ತೆಗೆದುಕೊಳ್ಳಿ. ಸುನಿಲ್ ನಾರಾಯಣ್, ಆ್ಯಂಡ್ರೆ ರಸೆಲ್, ಇಯಾನ್ ಮಾರ್ಗನ್, ಪ್ಯಾಟ್ ಕಮಿನ್ಸ್ ಮುಂತಾದವರು ಇಲ್ಲದಿದ್ದರೆ ಹೇಗೆ’ ಎಂದು ವೆಂಕಿ ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು