ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ರಾಹುಲ್‌ಗೆ ಕೀಪಿಂಗ್‌ ಹೊಣೆ ಇಲ್ಲ: ದ್ರಾವಿಡ್‌

Published 23 ಜನವರಿ 2024, 12:47 IST
Last Updated 23 ಜನವರಿ 2024, 12:47 IST
ಅಕ್ಷರ ಗಾತ್ರ

ಹೈದರಾಬಾದ್‌: ಕೆ.ಎಲ್‌.ರಾಹುಲ್ ಅವರು ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವಿಕೆಟ್‌ ಕೀಪಿಂಗ್ ಮಾಡುವುದಿಲ್ಲ ಎಂದು ಭಾರತ ತಂಡದ ಚೀಫ್‌ ಕೋಚ್ ರಾಹುಲ್ ದ್ರಾವಿಡ್‌ ಮಂಗಳವಾರ ಸ್ಪಷ್ಟಮಾತುಗಳಲ್ಲಿ ಹೇಳಿದ್ದಾರೆ. ಹೀಗಾಗಿ ಕೆ.ಎಸ್‌.ಭರತ್ ಮತ್ತು ಧ್ರುವ್ ಜುರೇಲ್ ನಡುವೆ ಒಬ್ಬರು ವಿಕೆಟ್‌ ಕೀಪರ್‌– ಬ್ಯಾಟರ್‌ ಪಾತ್ರ ವಹಿಸಬೇಕಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ತಿಂಗಳು ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 31 ವರ್ಷದ ರಾಹುಲ್ ಕೀಪರ್ ಆಗಿದ್ದರು. ಅವರು ಚುರುಕಾಗಿ ಆ ಪಾತ್ರ ನಿರ್ವಹಿಸಿದ್ದರು. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿ ಗುರುವಾರ ಇಲ್ಲಿ ಆರಂಭವಾಗಲಿದೆ.

‘ರಾಹುಲ್ ಅವರು ಈ ಸರಣಿಗೆ ವಿಕೆಟ್‌ ಕೀಪರ್ ಆಗಿ ಆಡುವುದಿಲ್ಲ. ಆಯ್ಕೆಯಲ್ಲೇ ಈ ಬಗ್ಗೆ ಸ್ಪಷ್ಟತೆ ಹೊಂದಿದ್ದೇವೆ. ನಾವು ಇನ್ನಿಬ್ಬರು ಕೀಪರ್‌ಗಳನ್ನು ಆಯ್ಕೆ ಮಾಡಿದ್ದೇವೆ. ರಾಹುಲ್‌, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆಂಬುದರಲ್ಲಿ ಎರಡು ಮಾತಿಲ್ಲ. ಸರಣಿಯಲ್ಲಿ ಸಮಬಲಗೊಳಿಸುವಲ್ಲಿ ಅವರು ಪಾತ್ರ ಮಹತ್ವದ್ದಾಗಿತ್ತು’ ಎಂದು ದ್ರಾವಿಡ್‌ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆದರೆ ಐದು ಟೆಸ್ಟ್‌ ಪಂದ್ಯಗಳನ್ನು ಪರಿಗಣಿಸಿ ಮತ್ತು ಇಲ್ಲಿನ ಪರಿಸ್ಥಿತಿಗನುಗುಣವಾಗಿ (ಇಂಗ್ಲೆಂಡ್‌ ವಿರುದ್ಧ) ಕೀಪರ್‌ ಸ್ಥಾನಕ್ಕೆ ಇತರ ಇಬ್ಬರು ವಿಕೆಟ್‌ ಕೀಪರ್‌ಗಳ ನಡುವೆ ಆಯ್ಕೆ ನಡೆಯಲಿದೆ’ ಎಂದು ಅವರು ವಿವರಿಸಿದರು.

ರಿಷಭ್ ಪಂತ್ ಸ್ಥಾನದಲ್ಲಿ ತಂಡದಲ್ಲಿ ಅವಕಾಶ ಪಡೆದ ಕೆ.ಎಸ್‌.ಭರತ್‌, ಕೀಪರ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 91 ಪ್ರಥಮ ದರ್ಜೆ ಪಂದ್ಯಗಳಲ್ಲಿ (ಇದರಲ್ಲಿ 82 ಭಾರತದಲ್ಲಿ) ಅವರು 287 ಕ್ಯಾಚ್‌ ಪಡೆದಿದ್ದಾರೆ. 33 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಧ್ರುವ್ ಜುರೇಲ್ ಹೊಸಬರಾಗಿರುವ ಕಾರಣ ಭರತ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಭರತ್‌ ಗಳಿಸಿದ ಅಜೇಯ 116 ರನ್‌ಳಿಂದಾಗಿ ಭಾರತ ಮೊದಲ ‘ಟೆಸ್ಟ್‌’ ಪಂದ್ಯದಲ್ಲಿ ಲಯನ್ಸ್ ವಿರುದ್ಧ ‘ಡ್ರಾ’ ಮಾಡಿಕೊಳ್ಳಲು ನೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT