ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 | ನೊಂದವರ ನೋವಿಗೆ ಮಿಡಿದ ‘ಸ್ನೇಹಿತರು’

ದೇಣಿಗೆ ಸಂಗ್ರಹಿಸಲು ಕ್ರಿಕೆಟ್‌ ಪರಿಕರಗಳನ್ನು ಹರಾಜಿಗಿಟ್ಟ ಕೊಹ್ಲಿ– ಎಬಿಡಿ
Last Updated 27 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್‌ ಅವರು ಕೋವಿಡ್‌–19 ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಕೆಲ ಕ್ರಿಕೆಟ್‌ ಪರಿಕರಗಳನ್ನು ಹರಾಜಿಗಿಟ್ಟಿದ್ದಾರೆ.

ಈ ವಿಷಯವನ್ನು ಡಿವಿಲಿಯರ್ಸ್‌ ಅವರು ಸೋಮವಾರ, ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಪರ ಆಡುವ ವಿರಾಟ್‌ ಮತ್ತು ಎಬಿಡಿ, 2016ನೇ ಆವೃತ್ತಿಯ ಲೀಗ್‌ನ ಗುಜರಾತ್‌ ಲಯನ್ಸ್‌ ಎದುರಿನ ಪಂದ್ಯದಲ್ಲಿ 96 ಎಸೆತಗಳಲ್ಲಿ ದ್ವಿಶತಕದ (229) ಜೊತೆಯಾಟವಾಡಿ ದಾಖಲೆ ಬರೆದಿದ್ದರು.

ಆ ಹೋರಾಟದಲ್ಲಿ ಡಿವಿಲಿಯರ್ಸ್‌ (ಔಟಾಗದೆ 129) ಹಾಗೂ ಕೊಹ್ಲಿ (109) ಶತಕಗಳನ್ನು ಸಿಡಿಸಿ ಮಿಂಚಿದ್ದರು.

‘2016ರಲ್ಲಿ ಗುಜರಾತ್‌ ಲಯನ್ಸ್‌ ವಿರುದ್ಧ ನಾನು ಹಾಗೂ ಕೊಹ್ಲಿ ದ್ವಿಶತಕದ ಜೊತೆಯಾಟವಾಡಿದ್ದೆವು. ಅದು ನನ್ನ ಕ್ರಿಕೆಟ್‌ ಬದುಕಿನ ಸ್ಮರಣೀಯ ಕ್ಷಣಗಳಲ್ಲೊಂದು. ಅಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕಿಕ್ಕಿರಿದ್ದು ಸೇರಿದ್ದರು. ಆ ದೃಶ್ಯ ಈಗಲೂ ನನ್ನ ಕಣ್ಣೆದುರಿಗೆ ಹಾದು ಹೋಗುತ್ತದೆ. ಆ ಪಂದ್ಯದಲ್ಲಿ ನಾವಿಬ್ಬರೂ ಶತಕ ಬಾರಿಸಿದ್ದೆವು. ಎಲ್ಲದಕ್ಕಿಂತಲೂ ಮುಖ್ಯವಾಗಿ ಆರ್‌ಸಿಬಿ 144 ರನ್‌ಗಳ ಅಂತರದಿಂದ ಜಯಿಸಿತ್ತು. ಅದು ಕೂಡ ಮರೆಯಲಾರದಂತಹುದು’ ಎಂದು ಡಿವಿಲಿಯರ್ಸ್‌ ಅವರು ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

‘ಕೋವಿಡ್‌–19 ಪಿಡುಗಿನಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವು ನೀಡಲು ನಾವಿಬ್ಬರೂ ನಿರ್ಧರಿಸಿದ್ದೇವೆ. ಗುಜರಾತ್‌ ಎದುರು ಕೊಹ್ಲಿ ಬಳಸಿದ್ದ ಬ್ಯಾಟ್‌ ಹಾಗೂ ಕೈಗವಸು, ನಾನು ಧರಿಸಿದ್ದ ಜೆರ್ಸಿ ಹಾಗೂ ಬಳಸಿದ್ದ ಬ್ಯಾಟ್‌ ಅನ್ನು ಹರಾಜಿಗಿಡುತ್ತಿದ್ದೇವೆ’ ಎಂದು ನುಡಿದಿದ್ದಾರೆ.

‘ಆಸಕ್ತರು ಆನ್‌ಲೈನ್‌ ಮೂಲಕ ಈ ಪರಿಕರಗಳನ್ನು ಖರೀದಿಸಬಹುದು. ಜೊತೆಗೆ ಬಿಡ್‌ ಕೂಡ ಮಾಡಬಹುದು. ಇವುಗಳಿಂದ ಸಂಗ್ರಹವಾಗುವ ಒಟ್ಟು ಮೊತ್ತದ ಶೇಕಡ 50ರಷ್ಟನ್ನು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹಾಗೂ ಉಳಿದರ್ಧ ಭಾಗವನ್ನು ಭಾರತದಲ್ಲಿ ಕೋವಿಡ್‌ 19 ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುತ್ತೇವೆ’ ಎಂದೂ ವಿವರಿಸಿದ್ದಾರೆ.

‘ಮೇ 10ಕ್ಕೆ ಹರಾಜು ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ವಿಜೇತರನ್ನು ಖುದ್ದಾಗಿ ನಾನೇ ಸಂಪರ್ಕಿಸಿ, ಪರಿಕರಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇನೆ. ಇದು ಸಂಕಷ್ಟದ ಸಮಯ. ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ’ ಎಂದು ತಿಳಿಸಿದ್ದಾರೆ.

ಇದನ್ನು ಕೊಹ್ಲಿ ಅವರು ರೀ ಪೋಸ್ಟ್‌ ಮಾಡಿದ್ದು ‘ನನ್ನ ಆತ್ಮೀಯ ಗೆಳೆಯ ಡಿವಿಲಿಯರ್ಸ್‌, ಉತ್ತಮ ಕೆಲಸ ಮಾಡುತ್ತಿದ್ದು ಅವರ ಕಾರ್ಯಕ್ಕೆ ನಾನೂ ಕೈಜೋಡಿಸಿದ್ದೇನೆ’ ಎಂದು ಬರೆದಿದ್ದಾರೆ.

ಬ್ಯಾಟ್‌ ಹಾಗೂ ಕೈಗವಸುಗಳೊಂದಿಗೆ ವಿರಾಟ್‌ ಕೊಹ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT