ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಐದನೇ ಸ್ಥಾನಕ್ಕೆ ಜಾರಿದ ವಿರಾಟ್‌

ಜೋ ರೂಟ್‌ಗೆ ಬಡ್ತಿ
Last Updated 10 ಫೆಬ್ರುವರಿ 2021, 10:34 IST
ಅಕ್ಷರ ಗಾತ್ರ

ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ. ಸದ್ಯ ಅವರು ಐದನೇ ಸ್ಥಾನಕ್ಕೆ ಜಾರಿದ್ದಾರೆ. ಇಂಗ್ಲೆಂಡ್‌ ನಾಯಕ ಜೋ ರೂಟ್ ಎರಡು ಸ್ಥಾನ ಏರಿಕೆ ಕಂಡಿದ್ದು, ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಬೌಲರ್‌ಗಳ ವಿಭಾಗದಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಆರ್‌.ಅಶ್ವಿನ್‌ ಬಡ್ತಿ ಪಡೆದಿದ್ದಾರೆ.

ಇಂಗ್ಲೆಂಡ್‌ ತಂಡದ ಎದುರಿನ ಮೊದಲ ಟೆಸ್ಟ್‌ನ ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 11 ಹಾಗೂ 72 ರನ್‌ ಗಳಿಸಿದ್ದ ಕೊಹ್ಲಿ ಅವರ ಬಳಿ 852 ಪಾಯಿಂಟ್‌ಗಳಿವೆ. ಒಂದು ಸ್ಥಾನ ಅವರು ಕೆಳಕ್ಕೆ ಜಾರಿದ್ದಾರೆ.

ಅನುಭವಿ ಆರ್‌.ಅಶ್ವಿನ್‌ ಹಾಗೂ ಬೂಮ್ರಾ ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ.

ಚೆನ್ನೈ ಟೆಸ್ಟ್‌ನಲ್ಲಿ ತಮ್ಮ ತಂಡಕ್ಕೆ 227 ರನ್‌ಗಳ ಭರ್ಜರಿ ಜಯ ತಂದುಕೊಡಲು ಕಾರಣರಾದ ರೂಟ್‌, 883 ಪಾಯಿಂಟ್ಸ್ ಕಲೆಹಾಕಿದ್ದಾರೆ. 2017ರ ಬಳಿಕ ಅವರು ಈ ಗರಿಷ್ಠ ಸ್ಥಾನಕ್ಕೆ ತಲುಪಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ (919) ಅಗ್ರಸ್ಥಾನ ಕಾಯ್ದುಕೊಂಡಿದ್ದು, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ (891) ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್‌ (878) ಅವರಿಗೆ ನಾಲ್ಕನೇ ಸ್ಥಾನ ಲಭಿಸಿದೆ.

ಚೆನ್ನೈ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 91 ರನ್‌ ಸಿಡಿಸಿದ ರಿಷಭ್ ಪಂತ್‌, 700 ರೇಟಿಂಗ್ ಪಾಯಿಂಟ್ಸ್ ಕಲೆಹಾಕಿದ ಭಾರತದ ಮೊದಲ ಪೂರ್ಣ ಪ್ರಮಾಣದ ವಿಕೆಟ್‌ಕೀಪರ್ ಎನಿಸಿಕೊಂಡಿದ್ದು, ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಏಳು ಸ್ಥಾನ ಏರಿಕೆ ಕಂಡಿದ್ದು, 40ನೇ ಸ್ಥಾನ ತಲುಪಿದ್ದಾರೆ. ವಾಷಿಂಗ್ಟನ್ ಸುಂದರ್ ಅವರ ಸ್ಥಾನ 81.

ಬೌಲರ್‌ಗಳ ವಿಭಾಗದಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್‌ (826) ಆರನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಅವರದೇ ದೇಶದ ಸ್ಟುವರ್ಟ್‌ ಬ್ರಾಡ್‌(830) ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (908) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT