ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಸ್ಟ್‌, ಟಿ20ಗೆ ಪ್ರತ್ಯೇಕ ತಂಡ ಅಗತ್ಯ- ಕುಂಬ್ಳೆ ಅಭಿಪ್ರಾಯ

ಇಂಗ್ಲೆಂಡ್‌ ತಂಡದ ಮಾದರಿ ಅನುಸರಿಸಬೇಕು: ಕುಂಬ್ಳೆ ಅಭಿಪ್ರಾಯ
Last Updated 14 ನವೆಂಬರ್ 2022, 14:08 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಬೇಕಾದರೆ ಭಾರತವು ಟೆಸ್ಟ್‌ ಮತ್ತು ನಿಗದಿತ ಓವರ್‌ಗಳ ಮಾದರಿಗೆ (ಏಕದಿನ ಮತ್ತು ಟಿ20) ಪ್ರತ್ಯೇಕ ತಂಡಗಳನ್ನು ಹೊಂದುವುದು ಅಗತ್ಯ ಎಂದು ಕ್ರಿಕೆಟಿಗ ಅನಿಲ್‌ ಕುಂಬ್ಳೆ ಸಲಹೆ ನೀಡಿದ್ದಾರೆ.

‘ಖಂಡಿತವಾಗಿಯೂ ಎರಡು ಪ್ರತ್ಯೇಕ ತಂಡಗಳನ್ನು ಹೊಂದುವುದು ಅಗತ್ಯ. ಚುಟುಕು ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಲು ಟಿ20 ಸ್ಪೆಶಲಿಸ್ಟ್‌ಗಳು ಬೇಕು. ಈಗಿನ ಇಂಗ್ಲೆಂಡ್‌ ತಂಡ ಹಾಗೂ ಕಳೆದ ಟಿ20 ವಿಶ್ವಕಪ್‌ ಚಾಂಪಿಯನ್‌ ಆಸ್ಟ್ರೇಲಿಯಾ ಅದನ್ನು ಈಗಾಗಲೇ ತೋರಿಸಿಕೊಟ್ಟಿದೆ. ನಿಗದಿತ ಓವರ್‌ಗಳ ಮಾದರಿಯಲ್ಲಿ ಹೆಚ್ಚಿನ ಆಲ್‌ರೌಂಡರ್‌ಗಳು ತಂಡದಲ್ಲಿರಬೇಕು’ ಎಂದು ‘ಇಎಸ್‌ಪಿಎನ್‌ ಕ್ರಿಕ್‌ಇನ್ಫೋ’ಗೆ ತಿಳಿಸಿದ್ದಾರೆ.

‘ಇಂಗ್ಲೆಂಡ್‌ ತಂಡದಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಏಳನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವರು. ಏಳನೇ ಕ್ರಮಾಂಕದಲ್ಲಿ ಅಂತಹ ಶ್ರೇಷ್ಠ ಬ್ಯಾಟರ್‌ಅನ್ನು ಹೊಂದಿರುವ ಇನ್ನೊಂದು ತಂಡ ಇಲ್ಲ. ಆಸ್ಟ್ರೇಲಿಯಾ ಪರ ಮಾರ್ಕಸ್‌ ಸ್ಟೊಯಿನಿಸ್‌ ಆರನೇ ಕ್ರಮಾಂಕದಲ್ಲಿ ಆಡಲು ಬರುವರು. ಕೆಳ ಕ್ರಮಾಂಕದವರೆಗೂ ಶ್ರೇಷ್ಠ ಬ್ಯಾಟರ್‌ಗಳು ಇರುವ ತಂಡವನ್ನು ಕಟ್ಟಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಎರಡೂ ತಂಡಗಳಿಗೆ ಪ್ರತ್ಯೇಕ ನಾಯಕ ಅಥವಾ ಕೋಚ್‌ ಬೇಕೇ ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ. ನೀವು ಆಯ್ಕೆ ಮಾಡುವ ತಂಡದ ಮೇಲೆ ಎಲ್ಲವೂ ಅವಲಂಬಿತವಾಗಿದೆ’ ಎಂದು ಹೇಳಿದ್ದಾರೆ.

ಪ್ರತ್ಯೇಕ ಕೋಚ್‌ ಇರಲಿ: ಆಸ್ಟ್ರೇಲಿಯಾ ತಂಡದ ಮಾಜಿ ಆಲ್‌ರೌಂಡರ್‌ ಟಾಮ್‌ ಮೂಡಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲ ಅಂತರರಾಷ್ಟ್ರೀಯ ತಂಡಗಳೂ ‘ವೈಟ್‌ ಬಾಲ್‌’ ಮತ್ತು ’ರೆಡ್‌ ಬಾಲ್‌’ ಮಾದರಿಗೆ ಪ್ರತ್ಯೇಕ ಕೋಚ್‌ಅನ್ನು ನೇಮಿಸುವ ಗಂಭೀರ ಚಿಂತನೆ ಮಾಡಬೇಕಿದೆ ಎಂದು ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT