ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಕಲಿ ಅಕ್ಕಮಹಾದೇವಿ ಬಬಲಾದಿ, ರಣಜಿ ತಂಡದಲ್ಲಿ ಸ್ಥಾನ ಪಡೆಯುವ ಹಂಬಲ

ಕಠಿಣ ಅಭ್ಯಾಸ
Last Updated 26 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ವಿಜಯಪುರ:ರಾಜೇಶ್ವರಿ ಗಾಯಕ್ವಾಡ್‌ ವಿಜಯಪುರದ ಕ್ರಿಕೆಟ್‌ ತಾರೆ. ದೇಶ–ವಿದೇಶದಲ್ಲೂ ಬಸವ ಜನ್ಮಭೂಮಿ, ಬಿಸಿಲ ನಾಡಿನ ಕೀರ್ತಿ ಹಬ್ಬಿಸಿದಾಕೆ. ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರ್ತಿಯಲ್ಲೊಬ್ಬರು.

ಈಕೆಯ ತಂಗಿ ರಾಮೇಶ್ವರಿ ಗಾಯಕ್ವಾಡ್ ಸಹ ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವರು. ಸಹೋದರಿಯರ ಕ್ರಿಕೆಟ್‌ ಪ್ರೀತಿ, ಆಟದ ವೈಖರಿ ಮಹಿಳಾ ಕ್ರಿಕೆಟ್‌ ಲೋಕ ಭವಿಷ್ಯದಲ್ಲೂ ಇತ್ತ ಪ್ರತಿಭೆಗಳಿಗಾಗಿ ಶೋಧಿಸಲು ಮುಂದಾಗಬೇಕು ಎಂಬ ವಾತಾವರಣ ಸೃಷ್ಟಿಸಿದೆ.

ಈಚೆಗಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್‌ ಲೋಕಕ್ಕೆ ಪಾದಾರ್ಪಣೆ ಮಾಡುವ ಯುವ ಆಟಗಾರ್ತಿಯರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಬಾಲ್ಯದಲ್ಲಿ ಸೂಕ್ತ ಅವಕಾಶ ಸಿಗದಿದ್ದರೂ; ಕಾಲೇಜು ಹಂತದಲ್ಲಿ ದೊರೆತ ಸಹಕಾರದಿಂದ ಕ್ರಿಕೆಟ್‌ ಅಂಗಳದಲ್ಲಿ ಪ್ರತಿಭೆಯಾಗಿ ಮಿಂಚುತ್ತಿರುವವರಲ್ಲಿ ವಿಜಯಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಅಕ್ಕಮಹಾದೇವಿ ಬಬಲಾದಿ ಪ್ರಮುಖರು.

ಬಾಲ್ಯದಲ್ಲಿ ಟಿ.ವಿ.ಯಲ್ಲಿ ನೇರ ಪ್ರಸಾರಗೊಳ್ಳುತ್ತಿದ್ದ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸುತ್ತಲೇ ಆಸಕ್ತಿ ಬೆಳೆಸಿಕೊಂಡ ಅಕ್ಕಮಹಾದೇವಿಗೆ, ಎಲ್ಲಿಯೂ ಆಡಲು ಚಿಕ್ಕ ಅವಕಾಶ ಸಿಗಲಿಲ್ಲ. ಪ್ರಾಥಮಿಕ, ಪ್ರೌಢ, ಪಿಯು ಶಿಕ್ಷಣ ಮುಗಿಸಿದರೂ ಒಮ್ಮೆಯೂ ಮೈದಾನಕ್ಕಿಳಿದು ಕ್ರಿಕೆಟ್‌ ಆಡಲು ಅವಕಾಶವೇ ದೊರೆತಿರಲಿಲ್ಲ.

ಆದರೂ ಕ್ರಿಕೆಟ್‌ನ ಪ್ರೀತಿ, ಆಡಲೇಬೇಕೆಂಬ ಛಲ ಕಿಂಚಿತ್‌ ಕಡಿಮೆಯಾಗಿರಲಿಲ್ಲ. ಇದರ ಪರಿಣಾಮ ಇದೀಗ ಮಹಾದೇವಿ ಅತ್ಯುತ್ತಮ ಬ್ಯಾಟ್ಸ್‌ವುಮೆನ್‌. ಆಲ್‌ರೌಂಡರ್‌ ಆಗಬೇಕೆಂಬ ಬಯಕೆ ಹೊಂದಿ ನಿತ್ಯವೂ ಬೆವರು ಹರಿಸುತ್ತಿದ್ದಾರೆ.

ವಿಜಯಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶ ಪಡೆದ ಬಳಿಕ ಬಬಲಾದಿಯ ಕ್ರಿಕೆಟ್‌ ಪ್ರೀತಿಗೆ ಸೂಕ್ತ ಸಹಕಾರ ದೊರಕಿತು. ಕ್ರಿಕೆಟ್ ತರಬೇತಿಯನ್ನು ಹೇಗೆ, ಎಲ್ಲಿ ಪಡೆಯಬೇಕೆಂಬುದು ಗೊತ್ತಿಲ್ಲದ ಅಕ್ಕಮಹಾದೇವಿ ಒಮ್ಮೆ ಓಟದ ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ಹೋಗಿದ್ದಾಗ, ತರಬೇತುದಾರ ಬಸವರಾಜ ಇಜೇರಿ ಪರಿಚಯವಾಯ್ತು.

ಇಜೇರಿ ಬಳಿಯೇ ತರಬೇತಿ ಶುರುವಾಯ್ತು. ದಿಲೀಪ ಕಲಾಲ, ಎ.ಜಿ.ಪಾಟೀಲ ಹಾಗೂ ಕಾಲೇಜಿನ ಹಿರಿಯ ಶ್ರೇಣಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜಶೇಖರ ಬೆನಕನಹಳ್ಳಿ ಮಾರ್ಗದರ್ಶನವೂ ಸಿಕ್ಕಿತು. ನಿತ್ಯ ಬೆಳಿಗ್ಗೆ 6-.30ರಿಂದ 8-.30ರವರೆಗೆ, ಸಂಜೆ 4ರಿಂದ 6ರವರೆಗೆ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿಕೊಂಡರು.

ಪ್ರಾಚಾರ್ಯ ಡಾ.ಆರ್.ಎಸ್.ಕಲ್ಲೂರಮಠ ಹಾಗೂ ಉಪನ್ಯಾಸಕರ ಪ್ರೋತ್ಸಾಹವೂ ದೊರೆಯಿತು. ನಿರಂತರ ಕಠಿಣ ಅಭ್ಯಾಸದ ಫಲವಾಗಿ ಎರಡು ಬಾರಿ ಅಂತರ ವಿಶ್ವವಿದ್ಯಾಲಯ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ಬಬಲಾದಿ ಕಾಲೇಜನ್ನು ಪ್ರತಿನಿಧಿಸಿದ್ದಾರೆ. ಬೆಂಗಳೂರು, ಆಂಧ್ರಪ್ರದೇಶದಲ್ಲಿ ನಡೆದ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬ್ಯಾಟಿಂಗ್‌ ಬಬಲಾದಿಗೆ ಬಲು ಇಷ್ಟ. ಆಲ್‌ರೌಂಡರ್‌ ಆಗಬೇಕೆಂಬ ಹಂಬಲದಿಂದ ಬೆವರು ಹರಿಸುತ್ತಿದ್ದಾರೆ. ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗಬೇಕು ಎಂಬ ನಿಟ್ಟಿನಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದು, ಅವಕಾಶಕ್ಕಾಗಿ ಚಾತಕ ಹಕ್ಕಿಯಂತೆ ಕಾದಿದ್ದಾರೆ. ಆರಂಭದಲ್ಲಿ ಕುಟುಂಬದ ಪ್ರೋತ್ಸಾಹ ಅಷ್ಟಕ್ಕಷ್ಟೇ ಇತ್ತು. ಇದೀಗ ಉತ್ಸಾಹದಿಂದಲೇ ಬೆಂಬಲ ನೀಡುತ್ತಿದ್ದಾರೆ ಎನ್ನುತ್ತಾರೆ ಅಕ್ಕಮಹಾದೇವಿ ಬಬಲಾದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT