ಕರಾಚಿ: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು, ಅಧಿಕಾರಿಗಳು ಮತ್ತು ವರದಿ ಮಾಡುವ ಪತ್ರಕರ್ತರಿಗೆ ವಿಸಾ ಕೊಡಿಸುವ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾರ್ಚ್ ತಿಂಗಳಲ್ಲಿ ಲಿಖಿತ ಭರವಸೆ ನೀಡಲಿದೆ ಎಂದು ಐಸಿಸಿ ತಿಳಿಸಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಎಹ್ಸಾನ್ ಮಣಿ ಭಾನುವಾರ ತಿಳಿಸಿದರು.
‘ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿಸಾ ಸಿಗುವ ಸಾಧ್ಯತೆ ಇತ್ತು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎರಡು ಬಾರಿ ಆಸ್ಪತ್ರೆ ಸೇರಿದ ಕಾರಣ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಮತ್ತೊಮ್ಮೆ ಐಸಿಸಿಯನ್ನು ಸಂಪರ್ಕಿಸಿದ್ದೆ. ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಈ ನಡುವೆ, ಬಿಸಿಸಿಐನಿಂದ ಲಿಖಿತ ಭರವಸೆ ಪಡೆದುಕೊಳ್ಳುವುದಾಗಿ ಐಸಿಸಿ ತಿಳಿಸಿದೆ. ವಿಶ್ವಕಪ್‌ನಿಂದ ಹೊರಗೆ ಉಳಿಯಲು ಯಾರೂ ಇಷ್ಟಪಡುವುದಿಲ್ಲ. ಆದ್ದರಿಂದ ವಿಸಾಗೆ ಬೇಡಿಕೆ ಒಡ್ಡುವುದು ನಮ್ಮ ಹಕ್ಕು’ ಎಂದು ಮಣಿ ಹೇಳಿದರು.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಭಾರತ ಅರ್ಹತೆ ಗಳಿಸಿದರೆ ಇದೇ ವರ್ಷದ ಜೂನ್ 18ರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಮುಂದೂಡುವುದು ಒಳ್ಳೆಯದು ಎಂದು ಮಣಿ ಅಭಿಪ್ರಾಯಪಟ್ಟರು.
ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಪಯಣಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಿಂದಾಗಿ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.