ಭಾನುವಾರ, ಜುಲೈ 25, 2021
22 °C

ಶಶಾಂಕ್ ಅವಧಿಯಲ್ಲಿ ಬಿಸಿಸಿಐಗೆ ಹಾನಿ: ಆತ್ಮಾವಲೋಕನ ಮಾಡಿಕೊಳ್ಳಿ ಎಂದ ನಿರಂಜನ್ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್: ಶಶಾಂಕ್ ಮನೋಹರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಮುಖ್ಯಸ್ಥರಾದ ಅವಧಿಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಪಾರ ಹಾನಿಯಾಗಿದೆ. ಅದರ ಬಗ್ಗೆ ಶಶಾಂಕ್, ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಹೇಳಿದ್ದಾರೆ.

ಶಶಾಂಕ್ ಅವರು  ಎರಡು ಅವಧಿಗೆ ಐಸಿಸಿ ಮುಖ್ಯಸ್ಥರಾಗಿದ್ದರು. ಬುಧವಾರ ಅವರು ತಮ್ಮ ಸ್ಥಾನವನ್ನು ತೊರೆದಿದ್ದರು.  ಐಸಿಸಿ ಸದಸ್ಯ ರಾಷ್ಟ್ರಗಳಿಗೆ ಆದಾಯ ಹಂಚಿಕೆಯಲ್ಲಿ ಮೊದಲಿನಿಂದ ಇದ್ದ ’ಬಿಗ್‌ ತ್ರೀ‘ ವ್ಯವಸ್ಥೆಯನ್ನು ರದ್ದುಗೊಳಿಸುವಲ್ಲಿ ಶಶಾಂಕ್ ಪಾತ್ರ ಮುಖ್ಯವಾಗಿದೆ ಎಂಬುದು ಬಿಸಿಸಿಐ ಹಲವು ವರ್ಷಗಳಿಂದ ಟೀಕಿಸುತ್ತಿದೆ. ಬಿಗ್‌ ತ್ರೀ ಅಂದರೆ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳ ಕ್ರಿಕೆಟ್‌ ಮಂಡಳಿಗೆ ಉಳಿದ ದೇಶಗಳಿಗಿಂತ ಹೆಚ್ಚಿನ ಆದಾಯ ಹಂಚಿಕೆಯಾಗುತ್ತಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರಂಜನ್, ’ಶಶಾಂಕ್ ಅವರಿಗೆ ಮಿಶ್ರ ಭಾವನೆಗಳಿರಬಹುದು. ತಾವು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸಿರುವ ಭಾವನೆ ಇರಬೇಕು. ಆದರೆ ಅವರು ತಮ್ಮ ದೇಶಕ್ಕೆ (ಭಾರತ) ಏನು ಹಾನಿ ಮಾಡಿದ್ದಾರೆಂಬುದನ್ನು ಕೇಳಿಕೊಳ್ಳಬೇಕು‘ ಎಂದಿದ್ದಾರೆ.

’ಈಗ ಅವರು ಅಧಿಕಾರ ಬಿಟ್ಟು ಬಂದಿದ್ದಾರೆ. ನಿರಾಳವಾಗಿ ಕುಳಿತು ಸ್ವಲ್ಪ ಸಮಯ ತಮ್ಮ ಅಧಿಕಾರವಧಿಯನ್ನು ಪ್ರಾಮಾಣಿಕವಾಗಿ ಅವಲೋಕಿಸಿಕೊಳ್ಳಬೇಕು. ಹೋದ ಕೆಲವು ವರ್ಷಗಳಲ್ಲಿ ಬಿಸಿಸಿಐ ಬಹಳ ತೊಂದರೆ ಅನುಭವಿಸಿದೆ. ಅದರ ದುರ್ಲಾಭವನ್ನು ಐಸಿಸಿ ಪಡೆದುಕೊಂಡಿತು‘ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.

’ಸದ್ಯ ಬಿಸಿಸಿಐ ಆಡಳಿತ ಚುಕ್ಕಾಣಿ ಹಿಡಿದಿರುವ ತಂಡವು ಬಲಾಢ್ಯವಾಗಿದೆ. ಉತ್ತಮ ನಾಯಕತ್ವ ಇರುವವರು ಇದ್ದಾರೆ. ಐಸಿಸಿಯಲ್ಲಿ ಮತ್ತೆ ಭಾರತದ ವರ್ಚಸ್ಸನ್ನು ಬೆಳೆಸುವುದು ಖಚಿತ‘ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು