ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಮೂಲಕ ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟಿದೆ. ಇದರೊಂದಿಗೆ ನ್ಯೂಜಿಲೆಂಡ್ ವಿಶ್ವಕಪ್ ಕನಸು ಮಗದೊಮ್ಮೆ ಭಗ್ನಗೊಂಡಿದೆ. ಅಲ್ಲದೆ ನಾಯಕ ಕೇನ್ ವಿಲಿಯಮ್ಸನ್ (85) ಹೋರಾಟವು ವ್ಯರ್ಥವೆನಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ನಾಯಕ ಕೇನ್ ವಿಲಿಯಮ್ಸನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 172 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಮಿಚೆಲ್ ಮಾರ್ಷ್ (77*) ಹಾಗೂ ಡೇವಿಡ್ ವಾರ್ನರ್ (53) ಅಮೋಘ ಆಟದ ನೆರವಿನಿಂದ ಇನ್ನು 7 ಎಸೆತಗಳು ಬಾಕಿ ಉಳಿದಿರುವಂತೆಯೇ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ನ್ಯೂಜಿಲೆಂಡ್ ಮೊದಲ ಸಲ ಮತ್ತು ಆಸ್ಟ್ರೇಲಿಯಾ ಎರಡನೇ ಸಲ ಫೈನಲ್ ಹಂತಕ್ಕೆ ತಲುಪಿತ್ತು. ಈ ಹಿಂದೆ 2010ರಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಆಸೀಸ್ ಸೋಲಿಗೆ ಶರಣಾಗಿತ್ತು. ಆದರೆ ಈ ಬಾರಿ ಕಿವೀಸ್ ವಿರುದ್ಧ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಂಡಿದೆ. 2015ರಲ್ಲಿ ಕಿವೀಸ್ ವಿರುದ್ಧವೇ ಗೆಲುವು ದಾಖಲಿಸಿರುವ ಆಸೀಸ್ ಏಕದಿನ ವಿಶ್ವಕಪ್ ಜಯಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ತಂಡಗಳ ಪಟ್ಟಿ:
2021: ಆಸ್ಟ್ರೇಲಿಯಾ
2016: ವೆಸ್ಟ್‌ಇಂಡೀಸ್
2014: ಶ್ರೀಲಂಕಾ
2012: ವೆಸ್ಟ್‌ಇಂಡೀಸ್
2010: ಇಂಗ್ಲೆಂಡ್
2009: ಪಾಕಿಸ್ತಾನ
2007: ಭಾರತ
ಕಳೆದ 4 ಪ್ರಮುಖ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಸಾಧನೆಗಳು:
2015 ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಸೋಲು, ರನ್ನರ್-ಅಪ್
2019 ಏಕದಿನ ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಸೋಲು, ರನ್ನರ್-ಅಪ್
2021 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಭಾರತ ವಿರುದ್ಧ ಗೆಲುವು, ಚಾಂಪಿಯನ್
2021 ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಸೋಲು, ರನ್ನರ್-ಅಪ್
ಮಾರ್ಷ್-ವಾರ್ನರ್ ಸ್ಫೋಟಕ ಅರ್ಧಶತಕ, ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್...
ಸವಾಲಿನ ಗುರಿ ಬೆನ್ನತ್ತಿದ ಆಸೀಸ್ ಆರಂಭ ಉತ್ತಮವಾಗಿರಲಿಲ್ಲ. 5 ರನ್ ಗಳಿಸಿದ ನಾಯಕ ಆ್ಯರನ್ ಫಿಂಚ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಸಮರ್ಥವಾಗಿ ಕಿವೀಸ್ ಬೌಲರ್‌ಗಳನ್ನು ಎದುರಿಸಿದರು. ವಾರ್ನರ್ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರೆ ಮಾರ್ಷ್ ಆಕ್ರಮಣಕಾರಿಯಾಗಿ ಆಡುವ ಮೂಲಕ ಗಮನ ಸೆಳೆದರು.
ಅಲ್ಲದೆ ಆಕರ್ಷಕ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. 10 ಓವರ್ ಅಂತ್ಯಕ್ಕೆ ಆಸೀಸ್ ಒಂದು ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 91 ರನ್ ಅಗತ್ಯವಿತ್ತು.
ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ 34 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ ಮಾರ್ಷ್ ಜೊತೆಗೂಡಿ ಎರಡನೇ ವಿಕೆಟ್‌ಗೆ 92 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದರು.
ಅತ್ತ ಆಸೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಮಾರ್ಷ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅವರಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಇದರಿಂದಾಗಿ ನಾಯಕ ಕೇನ್ ವಿಲಿಯಮ್ಸನ್ ಮಾಡಿದ ಯಾವ ರಣನೀತಿಯೂ ಫಲಿಸಲಿಲ್ಲ.
ಮಾರ್ಷ್ ಹಾಗೂ ಮ್ಯಾಕ್ಸ್‌ವೆಲ್ ಮುರಿಯದ ಮೂರನೇ ವಿಕೆಟ್‌ಗೆ 66 ರನ್‌ಗಳ ಜೊತೆಯಾಟದ ನೆರವಿನಿಂದ ಆಸೀಸ್, 18.5 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಜಯಭೇರಿ ಮೊಳಗಿಸಿತು. 50 ಎಸೆತಗಳನ್ನು ಎದುರಿಸಿದ ಮಾರ್ಷ್ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 77 ರನ್ ಗಳಿಸಿ ಔಟಾಗದೆ ಉಳಿದರು. ಅವರಿಗೆ ತಕ್ಕ ಸಾಥ್ ನೀಡಿದ ಮ್ಯಾಕ್ಸ್‌ವೆಲ್ 28 ರನ್ (18 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.
ಕಿವೀಸ್ ಪರ ಟ್ರೆಂಟ್ ಬೌಲ್ಟ್ (18ಕ್ಕೆ 2 ವಿಕೆಟ್) ಹೊರತುಪಡಿಸಿ ಇತರೆ ಯಾವ ಬೌಲರ್‌ಗಳು ಮಿಂಚಲಿಲ್ಲ. ಈ ಮೂಲಕ ವಿಶ್ವಕಪ್ ಕನಸು ಭಗ್ನಗೊಂಡಿದೆ.
ವಿಲಿಯಮ್ಸನ್ ಅಬ್ಬರ; ಕಿವೀಸ್ 172/4
ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಜಿಲೆಂಡ್ 28 ರನ್ ಪೇರಿಸುವಷ್ಟರಲ್ಲಿ ಮೊದಲ ವಿಕೆಟ್ ಪತನವಾಯಿತು. ಕಳೆದ ಪಂದ್ಯದ ಹೀರೊ ಡೆರಿಲ್ ಮಿಚೆಲ್‌ಗೆ (11) ಮಗದೊಮ್ಮೆ ಮಿಂಚಲು ಸಾಧ್ಯವಾಗಲಿಲ್ಲ. ಜೋಶ್ ಹ್ಯಾಜಲ್‌ವುಡ್ ದಾಳಿಯಲ್ಲಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಮಾರ್ಟಿನ್ ಗಪ್ಟಿಲ್ ಹಾಗೂ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದರು. 10 ಓವರ್ ಅಂತ್ಯಕ್ಕೆ ಕಿವೀಸ್ ಒಂದು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತ್ತು.
ಉತ್ತಮವಾಗಿ ಆಡುತ್ತಿದ್ದ ಗಪ್ಟಿಲ್ (28) ಅವರನ್ನು ಆ್ಯಡಂ ಜಂಪಾ ಹೊರದಬ್ಬಿದರು. ಆಗಲೇ ದ್ವಿತೀಯ ವಿಕೆಟ್‌ಗೆ ವಿಲಿಯಮ್ಸನ್ ಜೊತೆ 48 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಅತ್ತ ಜೀವದಾನದ ಸ್ಪಷ್ಟ ಲಾಭ ಪಡೆದ ವಿಲಿಯಮ್ಸನ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅಲ್ಲಿಂದ ಬಳಿಕ ಬಿರುಸಿನ ಆಟದ ಮೂಲಕ ಗಮನ ಸೆಳೆದರು. ನಾಯಕನ ಆಟವಾಡಿದ ವಿಲಿಯಮ್ಸನ್, ಕಾಂಗರೂ ಬೌಲರ್‌ಗಳನ್ನು ಚೆಂಡಾಡಿದರು.
ಈ ನಡುವೆ ಮಿಚೆಲ್ ಸ್ಟಾರ್ಕ್ ಓವರ್‌ವೊಂದರಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 22 ರನ್ ಚಚ್ಚಿದರು. ಬಳಿಕ ಇನ್ನಿಂಗ್ಸ್‌ನ ಕೊನೆಯಲ್ಲಿ ಔಟ್ ಆಗುವ ವೇಳೆಗೆ 48 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 85 ರನ್ ಗಳಿಸಿದರು.
ಅಂತಿಮ ಹಂತದಲ್ಲಿ ಜೇಮ್ಸ್ ನಿಶಾಮ್ (13*) ಹಾಗೂ ಟಿಮ್ ಸೀಫರ್ಟ್ (8*) ಸವಾಲಿನ ಮೊತ್ತ ಪೇರಿಸಲು ನೆರವಾದರು.
ಆಸೀಸ್ ಪರ ನಿಖರ ದಾಳಿ ಸಂಘಟಿಸಿದ ಜೋಶ್ ಹ್ಯಾಜಲ್‌ವುಡ್ 16 ರನ್ ತೆತ್ತು ಮೂರು ವಿಕೆಟ್ ಕಬಳಿಸಿದರು. ಆ್ಯಡಂ ಜಂಪಾ ಕೂಡ ಒಂದು ವಿಕೆಟ್ ಪಡೆದರು. ಆದರೆ ಮಿಚೆಲ್ ಸ್ಟಾರ್ಕ್ 60 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.