ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್‌ ಟೆಸ್ಟ್‌ ನಾಯಕತ್ವ: ಟೆಸ್ಟ್‌ ನಾಯಕರಾಗಿ ಶಾನ್‌ ಮಸೂದ್‌ ಮುಂದುವರಿಕೆ

Published 11 ಜುಲೈ 2024, 15:26 IST
Last Updated 11 ಜುಲೈ 2024, 15:26 IST
ಅಕ್ಷರ ಗಾತ್ರ

ಲಾಹೋರ್: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಮತ್ತು ತರಬೇತುದಾರ ಜೇಸನ್ ಗಿಲೆಸ್ಪಿ ಅವರು ಶಾನ್‌ ಮಸೂದ್‌ ಮೇಲೆ ವಿಶ್ವಾಸವಿಟ್ಟಿದ್ದು ಅವರು ಪಾಕಿಸ್ತಾನ ಟೆಸ್ಟ್‌ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ಆದರೆ ಸೀಮಿತ ಓವರುಗಳ ತಂಡದ ನಾಯಕತ್ವಕ್ಕೆ ಸಂಬಂಧಿಸಿ ನಿರ್ಧಾರವನ್ನು ತಡೆಹಿಡಿಯಲಾಗಿದೆ.

ಬಾಬರ್ ಆಜಂ ಅವರು ಸದ್ಯ ಏಕದಿನ/ ಟಿ20 ತಂಡದ ನಾಯಕರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಕಳಪೆ ಆಟದ ಕಾರಣ ಅವರ ನಾಯಕತ್ವ ಅಲುಗಾಡುತ್ತಿದೆ.

ಪಾಕಿಸ್ತಾನ ಬಿಡುವಿಲ್ಲದ ವೇಳಾಪಟ್ಟಿ ಹೊಂದಿದೆ. ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ಆತಿಥ್ಯ ವಹಿಸಲಿದೆ. ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ವಿರುದ್ಧವೂ ಸರಣಿ ನಿಗದಿಯಾಗಿದೆ.

ಇತ್ತೀಚಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಕಳಪೆ ನಿರ್ವಹಣೆ ಬಗ್ಗೆ ಚರ್ಚಿಸಲು ಪಿಸಿಬಿ ಬುಧವಾರ ಸಭೆಯನ್ನು ನಡೆಸಿದ್ದು, ಇದರಲ್ಲಿ ಮಂಡಳಿಯ ಅಧಿಕಾರಿಗಳು, ಆಯ್ಕೆಗಾರರು, ಗಿಲೆಸ್ಪಿ, ನಿಗದಿ ಓವರುಗಳ ತಂಡದ ಕೋಚ್ ಗ್ಯಾರಿ ಕರ್ಸ್ಟೆನ್‌, ಸಹಾಯಕ ಕೋಚ್‌ ಅಜರ್‌ ಮಹಮೂದ್ ಭಾಗವಹಿಸಿದ್ದರು.

ಈ ವರ್ಷದ ಆರಂಭದಲ್ಲಿ ಮಸೂದ್‌ ಅವರು ಪಾಕ್‌ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದರು.

ಬಾಬರ್‌ಗೆ ಸಾಕಷ್ಟು ಅವಕಾಶ ಸಿಕ್ಕಿದೆ: ಅಫ್ರಿದಿ

ಕರಾಚಿ (ಪಿಟಿಐ): ಪಾಕ್‌ ಸೀಮಿತ ಓವರುಗಳ ತಂಡದ ನಾಯಕ ಬಾಬರ್‌ ಆಜಂ ಅವರ ವಿರುದ್ಧ ಮಾಜಿ ಆಲ್‌ರೌಂಡರ್ ಶಹೀದ್‌ ಅಫ್ರಿದಿ ಟೀಕಾಪ್ರಹಾರ ನಡೆಸಿದ್ದಾರೆ. ‘ಬಾಬರ್‌ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿಯಾಗಿದೆ. ಈಗ ಸೂಕ್ತ ನಿರ್ಧಾರ ಕೈಗೊಳ್ಳಲು ಪಿಸಿಬಿ ಮುಂದಾಗಬಬೇಕು’ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಹೊಸ ತಂಡ ಅಮೆರಿಕ ಮತ್ತು ಭಾರತಕ್ಕೆ ಸೋತ ನಂತರ ಪಾಕ್‌ ತಂಡ ತೀವ್ರ ಟೀಕೆಗೊಳಗಾಗಿದೆ.

‘ಈ ಹಿಂದೆ ನಾನು ತಂಡವನ್ನು ಮುನ್ನಡೆಸಿದ್ದೆ. ಯೂನಿಸ್‌ ಖಾನ್‌ ಮತ್ತು ಮಿಸ್ಬಾ ಉಲ್‌ ಹಕ್ ಸಹ. ಆದರೆ ತಂಡದ ನಿರ್ವಹಣೆ ಕಳಪೆಯಾದ ವೇಳೆ ಮೊದಲು ನಾಯಕನೇ ತಲೆಕೊಡಬೇಕಾಗಿತ್ತು’ ಎಂದು ಅವರು ಬರ್ಮಿಂಗ್‌ಹ್ಯಾಮ್‌ನಿಂದ ತಿಳಿಸಿದ್ದಾರೆ. ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಅಫ್ರಿದಿ ಇಂಗ್ಲೆಂಡ್‌ಗೆ ಬಂದಿದ್ದಾರೆ.

ಬಾಬರ್‌, ನಾಲ್ಕು ವಿಶ್ವಕಪ್‌ ಮತ್ತು ಎರಡು ಏಷ್ಯಾ ಕಪ್‌ಗಳಲ್ಲಿ ಪಾಕ್ ತಂಡವನ್ನು ಮುನ್ನಡೆಸಿದ್ದಾರೆ.

ಅಫ್ರೀದಿ ಅವರ ಅಳಿಯ ಶಹೀನ್ ಶಾ ಅಫ್ರೀದಿ ಅವರ ಪಾತ್ರವೂ ಚರ್ಚೆಗೊಳಗಾಗಿದೆ. ವಿಶ್ವಕಪ್‌ ವೇಳೆ ಅವರು ನಡವಳಿಕೆ ಸರಿಯಾಗಿರಲಿಲ್ಲ ಎಂದು ಟೆಲಿವಿಷನ್ ಚಾನೆಲ್ ಒಂದು ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT