ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019 ಹಿನ್ನೋಟ | ಭಾರತೀಯ ಕ್ರಿಕೆಟಿಗರು ಮುಟ್ಟಿದ ಮೂರು ಮೈಲುಗಲ್ಲುಗಳು

ಅಂತರರಾಷ್ಟ್ರೀಯ ಕ್ರಿಕೆಟ್
Last Updated 26 ಡಿಸೆಂಬರ್ 2019, 15:19 IST
ಅಕ್ಷರ ಗಾತ್ರ

ಭಾರತ ತಂಡವು 2019ರಲ್ಲಿ ಏಕದಿನ ವಿಶ್ವಕಪ್‌ ಗೆಲ್ಲದಿದ್ದರೂ, ಕ್ರಿಕೆಟ್‌ ಜಗತ್ತಿನಲ್ಲಿ ತನ್ನ ಪ್ರಭುತ್ವವನ್ನಂತು ಮುಂದುವರಿಸಿದೆ. ಐಸಿಸಿ ರ‌್ಯಾಂಕಿಂಗ್‌ನಲ್ಲಿಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಕ್ರಮವಾಗಿ 1 ಮತ್ತು 2ನೇರ‌್ಯಾಂಕ್‌ನಲ್ಲಿ ಉಳಿದುಕೊಂಡಿರುವುದೇ ಅದಕ್ಕೆ ಸಾಕ್ಷಿ.

ಟೆಸ್ಟ್‌ರ‌್ಯಾಂಕಿಂಗ್‌ನಲ್ಲಿ ನಾಯಕ ವಿರಾಟ್‌ ಕೊಹ್ಲಿ ಅಗ್ರಸ್ಥಾನದಲ್ಲಿ ಇರುವುದಷ್ಟೇ ಅಲ್ಲದೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಮೊದಲಹತ್ತು ಜನರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿಯೂ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಟಿ20 ಕ್ರಿಕೆಟ್‌ ಹಾಗೂ 2019ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಖ್ಯಾತಿಯೂ ಟೀಂ ಇಂಡಿಯಾ ನಾಯಕ ಮತ್ತು ಉಪನಾಯಕರ ಹೆಸರಿನಲ್ಲಿಯೇ ಇದೆ. ಈ ಎಲ್ಲ ಸಾಧನೆಗಳ ನಡುವೆ, ಈ ವರ್ಷ ಕ್ರಿಕೆಟ್‌ ಪ್ರಿಯರ ಕಣ್ಣರಳಿಸಿದ ಮೂರು ದಾಖಲೆಗಳು ಯಾವುವು ಗೊತ್ತೇ?

ಬ್ರಾಡ್ಮನ್‌ ದಾಖಲೆ ಮತ್ತು ಮಯಾಂಕ್–ರೋಹಿತ್
ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಮಯಂಕ್‌ ಅಗರವಾಲ್‌,ಸ್ವದೇಶದಲ್ಲಿ ಆಡಿದ ಮೊದಲ ಟೆಸ್ಟ್‌ನಲ್ಲಿಯೇ ದ್ವಿಶತಕ ಗಳಿಸಿದ್ದರು. ಇದರೊಂದಿಗೆ ವೃತ್ತಿಬದುಕಿನ ಮೊದಲ ಶತಕವವನ್ನು ದ್ವಿಶಕತವಾಗಿ ಪರಿವರ್ತಿಸಿದ ನಾಲ್ಕನೇ ಭಾರತೀಯ ಎನಿಸಿದ್ದರು.

ಮಯಂಕ್‌ ಅಗರವಾಲ್‌
ಮಯಂಕ್‌ ಅಗರವಾಲ್‌

ಇದಾಗಿ ಮೂರು ಇನಿಂಗ್ಸ್‌ ಕಳೆಯುವುದರೊಳಗೆ ಬಾಂಗ್ಲಾದೇಶ ಎದರು ಮತ್ತೊಂದು ದ್ವಿಶತಕ ಬಾರಿಸಿದ ಮಯಂಕ್, ಅತ್ಯಂತ ವೇಗವಾಗಿ ಎರಡು ದ್ವಿಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿದರು.ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ 13 ಇನಿಂಗ್ಸ್‌ಗಳಲ್ಲಿ ಎರಡು ದ್ವಿಶತಕ ಹೊಡೆದಿದ್ದರು. ಈ ಸಾಧನೆ ಮಾಡಲು ಮಯಂಕ್ ಕೇವಲ 12 ಇನಿಂಗ್ಸ್‌ ತೆಗೆದುಕೊಂಡರು.

ವೇಗವಾಗಿ ಎರಡು ದ್ವಿಶತಕ ಗಳಿಸಿದ ದಾಖಲೆ ಇರುವುದು ವಿನೋದ್ ಕಾಂಬ್ಳಿ ಹೆಸರಲ್ಲಿ. ಅವರು ಕೇವಲ 5 ಇನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿದ್ದರು.

ಬ್ರಾಡ್ಮನ್ 71 ವರ್ಷಗಳ ಹಿಂದೆ ನಿರ್ಮಿಸಿದ್ದ ಮತ್ತೊಂದು ದಾಖಲೆಯನ್ನು ಹಿಟ್‌ಮ್ಯಾನ್‌ ರೋಹಿತ್ ಶರ್ಮಾ ಮುರಿದರು.ಡಾನ್ ತಮ್ಮ ತವರಿನಲ್ಲಿ ಆಡಿದ್ದ ಸತತ ಹತ್ತು ಟೆಸ್ಟ್‌ಗಳಿಂದ 98.22ರ ಸರಾಸರಿಯಲ್ಲಿ ರನ್‌ ಗಳಿಸಿದ್ದರು. ರೋಹಿತ್‌, ಭಾರತದಲ್ಲಿ ಆಡಿದ ಹತ್ತು ಪಂದ್ಯಗಳಲ್ಲಿ 99.84 ಸರಾಸರಿಯಲ್ಲಿ ರನ್‌ ಸೇರಿಸಿದ್ದರು.

ರೋಹಿತ್‌ ಬ್ಯಾಟ್‌ನಿಂದ ಈ ಸಾಧನೆಯು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆಅಕ್ಟೋಬರ್‌ನಲ್ಲಿ ಮೂಡಿಬಂದಿತ್ತು. ಆದರೆತವರಿನಂಗಳದಲ್ಲಿ ಮುಂದೆಯೂ ಆದೇ ಸರಾಸರಿ ಕಾಯ್ದುಕೊಳ್ಳಲು ಸಾಧ್ಯವಾಗದ್ದರಿಂದ ರೋಹಿತ್‌ ಬ್ಯಾಟಿಂಗ್ ಸರಾಸರಿ 88.33ಕ್ಕೆ ಇಳಿದಿದೆ.

ಒಂದೇ ವಿಶ್ವಕಪ್‌ನಲ್ಲಿ 5 ಶತಕ
2019ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್‌ 81ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ, 648 ರನ್‌ ಕಲೆಹಾಕಿದ್ದರು. 2015ರ ವಿಶ್ವಕಪ್‌ನಲ್ಲಿ ಕೇವಲ ಒಂದು ಶತಕ ಸಿಡಿಸಿದ್ದ ರೋಹಿತ್‌ ಈ ಬಾರಿ ಬರೋಬ್ಬರಿ ಐದು ಶತಕಗಳನ್ನು ಚಚ್ಚಿದ್ದರು. ಆ ಮೂಲಕ ಒಂದೇ ವಿಶ್ವಕಪ್‌ನಲ್ಲಿ ಐದು ಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಅವರದ್ದಾಯಿತು.

ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ

ಮಾತ್ರವಲ್ಲ ವಿಶ್ವಕಪ್‌ನಲ್ಲಿ ಹೆಚ್ಚು ಶತಕ ಗಳಿಸಿರುವ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನೂ ಸರಿಗಟ್ಟಿದರು. ವಿಶ್ವಕಪ್‌ನಲ್ಲಿ ಸಚಿನ್‌ ಒಟ್ಟು44 ಪಂದ್ಯಗಳನ್ನು ಆಡಿದ್ದಾರೆ. ರೋಹಿತ್‌ ಆಡಿರುವುದು 17 ಇನಿಂಗ್ಸ್‌ಗಳು ಮಾತ್ರ.

ದಿಗ್ಗಜರನ್ನು ಹಿಂದಿಕ್ಕಿದ ಕೊಹ್ಲಿ
ಭಾರತ ತಂಡದ ನಾಯಕ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 20 ಸಾವಿರ ರನ್ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದರು. ಈ ಸಾಧನೆ ಮಾಡಲು ಕೊಹ್ಲಿ ತೆಗೆದುಕೊಂಡಿರುವುದು ಕೇವಲ 417 ಇನಿಂಗ್ಸ್‌.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ

ಸಚಿನ್ ಮತ್ತು ವೆಸ್ಟ್‌ ಇಂಡೀಸ್‌ನ ಬ್ರಯಾನ್‌ ಲಾರಾ ಇಬ್ಬರೂ 20 ಸಾವಿರ ರನ್‌ ಗಡಿ ದಾಟಲು453 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT