ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಕ್ರಿಕೆಟ್‌ ನಿಯಮ ಪ್ರಕಟಿಸಿದ ಮರ್ಲೊಬೋನ್‌ ಕ್ರಿಕೆಟ್‌ ಕ್ಲಬ್‌

ಕನ್ನಡಿಗ ಅಂಪೈರ್ ವಿನಾಯಕ ಕುಲಕರ್ಣಿ ಕಾರ್ಯಕ್ಕೆ ಇಂಗ್ಲೆಂಡ್‌ ಗೌರವ, ವೆಬ್‌ಸೈಟ್‌ನಲ್ಲಿ ಪ್ರಕಟ
Last Updated 3 ಅಕ್ಟೋಬರ್ 2018, 5:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್‌ ನಿಯಮಗಳಲ್ಲಿ ಆದ ಬದಲಾವಣೆಗಳನ್ನು ಒಳಗೊಂಡ ‘ಕ್ರಿಕೆಟ್‌ ನಿಯಮಗಳು–2017’ ಪುಸ್ತಕವನ್ನು ಬೆಂಗಳೂರಿನ ಅಂಪೈರ್‌ ವಿನಾಯಕ ಕುಲಕರ್ಣಿ ಅವರು ಬರೆದಿದ್ದಾರೆ. ಇದನ್ನು ಇಂಗ್ಲೆಂಡ್‌ನ ಪ್ರತಿಷ್ಠಿತ ಮರ್ಲೊಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ತನ್ನ ವೈಬ್‌ಸೈಟ್‌ನಲ್ಲಿ ಪ್ರಕಟಿಸಿ ಗೌರವ ನೀಡಿದೆ.

ಭಾರತದಲ್ಲಿ ಅಂಪೈರ್‌ಗಳ ಗುಣಮಟ್ಟ ಸುಧಾರಿಸುವ ಸಲುವಾಗಿ ಬಿಸಿಸಿಐ ನಾಗಪುರದಲ್ಲಿ ಅಂಪೈರ್‌ಗಳ ಅಕಾಡೆಮಿ ಆರಂಭಿಸಿತ್ತು. ಈ ಅಕಾಡೆಮಿಯ ಮೊದಲ ಕೋಚ್‌ ಕೂಡ ಆಗಿದ್ದ ವಿನಾಯಕ ಅವರು 2013ರಲ್ಲಿ ಪುಸ್ತಕ ಬರೆದಿದ್ದರು. ಹಿಂದಿನ ಪುಸ್ತಕದ ಮಾಹಿತಿ ಒಳಗೊಂಡಂತೆ ಈಗ ಇನ್ನಷ್ಟು ವಿಷಯಗಳನ್ನು ಸಂಗ್ರಹಿಸಿದ್ದಾರೆ. ಎಂಸಿಸಿ ಮೊದಲ ಬಾರಿಗೆ ಕನ್ನಡದಲ್ಲಿ ನಿಯಮಗಳನ್ನು ಪ್ರಕಟಿಸಿದೆ.

124 ‍ಪುಟಗಳ ಪುಸ್ತಕದಲ್ಲಿ ಪಂದ್ಯದ ವೇಳೆ ಅಂಪೈರ್‌ಗಳು ಹೇಗೆ ನಡೆದುಕೊಳ್ಳಬೇಕು, ಆಟಗಾರರ ಜವಾಬ್ದಾರಿಗಳೇನು, ನಿಯಮಕ್ಕೆ ಅನುಗುಣವಾಗಿ ಪಂದ್ಯಗಳನ್ನು ಹೇಗೆ ನಡೆಸಬೇಕು ಎನ್ನುವ ವಿವರವಿದೆ. ಚೆಂಡಿನ ತೂಕ, ಯಾವ ಸಂದರ್ಭದಲ್ಲಿ ಹೊಸ ಚೆಂಡು ನೀಡಬೇಕು, ಪಿಚ್‌ ಸಿದ್ಧತೆ, ಸ್ಕೋರರ್‌ಗೆ ತೋರಿಸಬೇಕಾದ ಸಂಕೇತಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಈಗ ಪದೇ ಪದೇ ನಿಯಮಗಳು ಬದಲಾವಣೆ ಆಗುತ್ತಿರುವುದರಿಂದ ಹೊಸ ಮಾಹಿತಿ ಅಗತ್ಯವಿದೆ ಎಂದು ಎಂಸಿಸಿ ತಿಳಿಸಿತ್ತು. ಆದ್ದರಿಂದ ಬರೆದುಕೊಟ್ಟಿದ್ದೇನೆ. ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಎಂಸಿಸಿ ನನಗೆ ಬಹುದೊಡ್ಡ ಗೌರವ ನೀಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮೂಲಕ ಎಂಸಿಸಿಗೆ ಕಳುಹಿಸಿದ್ದೆ’ ಎಂದು ವಿನಾಯಕ ಅವರು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

ಹೊಸದಾಗಿ ಪ್ರಕಟಿಸಿರುವ ಪುಸ್ತಕದಲ್ಲಿ 42 ನಿಯಮಗಳು ಇವೆ. ಬ್ಯಾಟ್ಸ್‌ಮನ್‌ ಮತ್ತು ಫೀಲ್ಡರ್‌ ನಿಯಮಗಳ ಬಗ್ಗೆ ಮೊದಲು ಒಂದೇ ಅಧ್ಯಾಯದಲ್ಲಿ ಮಾಹಿತಿಯಿತ್ತು. ಈಗ ಇವುಗಳನ್ನು ಪ್ರತ್ಯೇಕ ಅಧ್ಯಾಯ ಮಾಡಲಾಗಿದೆ.

‘ಎಂಸಿಸಿ ಹಿಂದೆ ಗುಜರಾತಿ ಭಾಷೆಯಲ್ಲಿ ನಿಯಮಗಳನ್ನು ಪ್ರಕಟಿ ಸಿತ್ತು. ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿ ಬೇರೆ ಕಡೆ ಅಂಪೈರಿಂಗ್‌ ಕೌಶಲಗಳ ಬಗ್ಗೆ ಪಾಠ ಮಾಡಲು ಹೋದಾಗ ಭಾಷೆಯ ತೊಡಕು ಎದುರಾ ಗುತ್ತಿತ್ತು. ಆದ್ದರಿಂದ ಕನ್ನಡದಲ್ಲಿ ಕ್ರಿಕೆಟ್‌ ನಿಯಮಗಳನ್ನು ತಿಳಿಸಿದ್ದೇನೆ. ಇದಕ್ಕೆ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

ಗುಣಮಟ್ಟದ ಸವಾಲು:ಕ್ರಿಕೆಟ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್‌), ಹಾಕ್‌ ಐ ತಂತ್ರಜ್ಞಾನ ಇರುವುದರಿಂದ ಫೀಲ್ಡ್‌ ಅಂಪೈರ್‌ ಜವಾಬ್ದಾರಿ ಹೆಚ್ಚಿದೆ. ಆದ್ದರಿಂದ ಸರಿಯಾಗಿ ನಿಯಮಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯ ಇದೆ ಎನ್ನುತ್ತಾರೆ ವಿನಾಯಕ.

ವಾಹಿನಿಗಳಲ್ಲಿ ವಿವಿಧ ಕೋನಗಳಲ್ಲಿ ವಿಡಿಯೊಗಳನ್ನು ತೋರಿಸಿ, ಅಂಪೈರ್‌ಗಳ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸವಾಗುತ್ತಿದೆ. ಆದ್ದರಿಂದ ಅಂಪೈರ್‌ಗಳು ಹೆಚ್ಚು ಜಾಗರೂಕರಾಗಿರಬೇಕು. ಇದಕ್ಕೆ ಹೊಸ ಪುಸ್ತಕ ನೆರವಾಗುತ್ತದೆ ಎಂದೂ ಹೇಳುತ್ತಾರೆ. ‘ಕ್ರಿಕೆಟ್‌ ನಿಯಮಗಳು–2017’ ಬಗ್ಗೆ ತಿಳಿಯಲು https://www.lords.org/mcc/laws-of-cricket/laws-in-other-languages/ ಲಿಂಕ್‌ ಕ್ಲಿಕ್‌ ಮಾಡಿ.

ಮತ್ತೆ ಅಕಾಡೆಮಿ ಆರಂಭವಾಗಲಿ:ವಿನಾಯಕ ಕುಲಕರ್ಣಿ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಂಪೈರಿಂಗ್‌ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಆದ್ದರಿಂದ ಹೊಸಬರ ಗುಣಮಟ್ಟ ಪರೀಕ್ಷಿಸಲು ಅಂಪೈರ್‌ ಅಕಾಡೆಮಿ ಮರು ಆರಂಭಿಸುವ ಅಗತ್ಯವಿದೆ ಎಂದು ವಿನಾಯಕ ಕುಲಕರ್ಣಿ ಅವರು ಮನವಿ ಮಾಡಿದ್ದಾರೆ.

‘ಅಂಪೈರ್‌ಗಳು ತಮಗೆ ಅನುಮಾನ ಬಂದ ವಿಷಯಗಳ ಬಗ್ಗೆ ಅಕಾಡೆಮಿಯ ತರಗತಿಗಳಲ್ಲಿ ಪ್ರಶ್ನಿಸುತ್ತಿದ್ದರು. ಆದರೆ, ಈಗ ಅದಕ್ಕೆ ವೇದಿಕೆಯೇ ಇಲ್ಲದಂತಾಗಿದೆ. ಹೀಗಾದರೆ ತಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದಾರೆ.

ವಿನಾಯಕ ಅವರು 60 ರಣಜಿ, ಎರಡು ಅಂತರರಾಷ್ಟ್ರೀಯ ಪಂದ್ಯಗಳಿಗೆ ಫೀಲ್ಡ್‌ ಅಂಪೈರ್ ಆಗಿ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT