ಮಂಗಳವಾರ, ಮಾರ್ಚ್ 28, 2023
33 °C
ಏಕದಿನ ಕ್ರಿಕೆಟ್‌: ಕಿವೀಸ್ ದಿಟ್ಟ ಹೋರಾಟ; ಬ್ರೇಸ್‌ವೆಲ್ ಶತಕ ವ್ಯರ್ಥ

IND vs NZ | ಬ್ರೇಸ್‌ವೆಲ್ ಹೋರಾಟ ವ್ಯರ್ಥ: ಭಾರತಕ್ಕೆ ರೋಚಕ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಶುಭಮನ್ ಗಿಲ್ ದ್ವಿಶತಕದ ಭರಾಟೆ ಮತ್ತು ಪ್ರವಾಸಿ ನ್ಯೂಜಿಲೆಂಡ್ ತಂಡದ ದಿಟ್ಟ ಹೋರಾಟಕ್ಕೆ ಮುತ್ತಿನನಗರಿಯ ಕ್ರಿಕೆಟ್‌ ಅಭಿಮಾನಿಗಳು ಸಾಕ್ಷಿಯಾದರು. ಒಟ್ಟು 686 ರನ್‌ಗಳ ಹೊಳೆಯಲ್ಲಿ ಮಿಂದೆದ್ದರು. 

ಇಲ್ಲಿಯ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 12 ರನ್‌ಗಳಿಂದ ಜಯ ಸಾಧಿಸಿತು. 

ಆರಂಭಿಕ ಬ್ಯಾಟರ್ ಶುಭಮನ್ ಗಿಲ್ (208; 149ಎಸೆತ) ಅಬ್ಬರದ ದ್ವಿಶತಕದ ಬಲದಿಂದ ಭಾರತ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 349 ರನ್‌ ಗಳಿಸಿತು. ಇದಕ್ಕುತ್ತರವಾಗಿ ಕಿವೀಸ್ ಬಳಗವೂ ದಿಟ್ಟ ಆಟವಾಡಿತು. ಮಿಚೆಲ್ ಬ್ರೇಸ್‌ವೆಲ್ (140; 78ಎ) ಅವರ ಅಬ್ಬರದ ಶತಕದಿಂದಾಗಿ ಗೆಲುವಿನ ಸನಿಹ ಸಾಗಿತ್ತು. ಆದರೆ, ಆತಿಥೇಯ ಬೌಲರ್‌ಗಳ ಆಟ ಮೇಲುಗೈ ಸಾಧಿಸಿತು. ಕಿವೀಸ್ ಬಳಗವು 49.2 ಓವರ್‌ಗಳಲ್ಲಿ 337 ರನ್‌ ಗಳಿಸಿ ಆಲೌಟ್ ಆಯಿತು. ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ
ಗಳಿಸಿತು.

ಇದನ್ನೂ ಓದಿ: 

ಎರಡು ಜೀವದಾನಕ್ಕೆ ದ್ವಿಶತಕದ ಲಾಭ: ಶುಭಮನ್ ಗಿಲ್ ಅವರಿಗೆ ನ್ಯೂಜಿಲೆಂಡ್ ಫೀಲ್ಡರ್‌ಗಳು ಎರಡು ಜೀವದಾನ ನೀಡಿದರು. ಇದರ ಲಾಭ ಪಡೆದ ಪಂಜಾಬಿ ಹುಡುಗ ಗಿಲ್ ದ್ವಿಶತಕದ ದಾಖಲೆ ಬರೆದರು. 

ಹೋದ ತಿಂಗಳಷ್ಟೇ ಬಾಂಗ್ಲಾದೇಶದ ಎದುರು ಚತ್ತೋಗ್ರಾಮ್‌ನಲ್ಲಿ ಇಶಾನ್ ಕಿಶನ್ ಅಬ್ಬರದ ದ್ವಿಶತಕ ಸಿಡಿಸಿದ್ದರು. ಈಗ ಅವರಿಗಿಂತ ಒಂದು ವರ್ಷ ಕಿರಿಯ ವಯಸ್ಸಿನ ಆಟಗಾರ ಶುಭಮನ್ ಗಿಲ್ ದ್ವಿಶತಕ ಗಳಿಸಿದರು. ಗಿಲ್  ಅವರು ಹೋದ ವಾರವಷ್ಟೇ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ನಾಯಕ ರೋಹಿತ್ ಮತ್ತು ಗಿಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 60 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. 

ಆದರೆ 13ನೇ ಓವರ್‌ನಲ್ಲಿ ರೋಹಿತ್ ಔಟಾದ ನಂತರ ವಿರಾಟ್ ಕೊಹ್ಲಿ, ಇಶಾನ್ ಕಿಶನ್ ಒಂದಂಕಿ ಗಳಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ (31), ಹಾರ್ದಿಕ್ ಪಾಂಡ್ಯ (28) ಮತ್ತು ವಾಷಿಂಗ್ಟನ್ ಸುಂದರ್ (12) ಮಾತ್ರ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿದ್ದರು. ಆದರೆ, ಗಿಲ್ ಮಾತ್ರ ತಮ್ಮ ಲಯದಲ್ಲಿದ್ದರು. 

184 ರನ್‌ ಗಳಿಸಿದ ಸಂದರ್ಭದಲ್ಲಿ ಸತತ ಮೂರು ಸಿಕ್ಸರ್‌ ಬಾರಿಸಿದ ಗಿಲ್ ದ್ವಿಶತಕದ ಗಡಿ ದಾಟಿ ಸಂಭ್ರಮಿಸಿದರು. ಈ ಸಾಧನೆ ಮಾಡಿದ ಅತಿ ಕಿರಿಯ ವಯಸ್ಸಿನ ಆಟಗಾರನಾದರು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಇಶಾನ್ ನಂತರದ ದ್ವಿಶತಕ ಬಾರಿಸಿದ ಭಾರತೀಯ ಆಟಗಾರನಾದರು. 

19 ಇನಿಂಗ್ಸ್‌ಗಳಲ್ಲಿ ಒಂದು ಸಾವಿರ ರನ್‌ ದಾಟಿದ ವಿಶ್ವದ ಎರಡನೇ ಆಟಗಾರನಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು