ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಿಡ್‌ವಿಕೆಟ್ ಸ್ಟೋರೀಸ್ ಸಂವಾದ | ಸನ್ನಿ ಮೊದಲ ಪಾಠ, ಜೆಫ್ರಿ ಮೆಚ್ಚಿದ ಆಲ್‌ರೌಂಡರ್

Published 7 ಏಪ್ರಿಲ್ 2024, 4:57 IST
Last Updated 7 ಏಪ್ರಿಲ್ 2024, 4:57 IST
ಅಕ್ಷರ ಗಾತ್ರ

ಬೆಂಗಳೂರು: ಸುನಿಲ್ ಗಾವಸ್ಕರ್ ತಮ್ಮ ಜೀವನದಲ್ಲಿ ಕಲಿತ ಮೊದಲ ಕ್ರಿಕೆಟ್ ಪಾಠ ಯಾವುದು? ಜೆಫ್ರಿ ಬಾಯ್ಕಾಟ್ ಅವರ ನೆಚ್ಚಿನ ಆಲ್‌ರೌಂಡರ್ ಯಾರು? ಆಧುನಿಕ ಯುಗದ ಕ್ರಿಕೆಟ್ ಬಗ್ಗೆ ಗಾವಸ್ಕರ್ ಅಭಿಪ್ರಾಯವೇನು? ಇಂಗ್ಲೆಂಡ್‌ನ ಬಾಝ್‌ಬಾಲ್‌ ಬಗ್ಗೆ ಬಾಯ್ಕಾಟ್‌ ಅಭಿಮತವೇನು? ಸಚಿನ್ ತೆಂಡೂಲ್ಕರ್ ಯಾರ್ಕ್‌ಶೈರ್ ತಂಡದ ಪ್ರಥಮ ವಿದೇಶಿ ಆಟಗಾರನಾಗಿ ಆಡಿದ್ದು ಹೇಗೆ?

ಶನಿವಾರ ಮಧ್ಯಾಹ್ನ ‘ಮಿಡ್‌ವಿಕೆಟ್ ಸ್ಟೋರಿ’ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದ ವಿಶ್ವ ಶ್ರೇಷ್ಠ ಆರಂಭಿಕ ಬ್ಯಾಟರ್‌ಗಳಾದ ಗಾವಸ್ಕರ್ ಮತ್ತು  ಬಾಯ್ಕಾಟ್ ಇಂತಹ ಹತ್ತಾರು ದಂತಕಥೆಗಳನ್ನು ಹೇಳಿದರು. ಕೇಳುಗರ ಮನದಾಳಕ್ಕೆ ಇಳಿದರು. ನ್ಯೂಜಿಲೆಂಡ್ ತಂಡದ ಮಾಜಿ ವೇಗಿ ಸೈಮನ್ ಡೂಲ್ ಕಾರ್ಯಕ್ರಮ ನಿರ್ವಹಿಸಿದರು.

‘ಕ್ರಿಕೆಟ್‌ಗೆ ಸಂಬಂಧಿಸಿದಂತೆ ನಾನು ಮೊದಲ ಪಾಠ ಕಲಿತದ್ದು ನನ್ನ ಸೋದರಮಾವ ಮಾಧವ ಮಂತ್ರಿ (ಭಾರತದ ಮಾಜಿ ಕ್ರಿಕೆಟಿಗ) ಅವರಿಂದ.  ಚಿಕ್ಕವನಿದ್ದಾಗ ಅಮ್ಮನೊಂದಿಗೆ ಅವರ (ಮಾವ) ಮನೆಗೆ ಹೋಗಿದ್ದೆ. ಅಲ್ಲಿ ಅವರ ಕ್ರಿಕೆಟ್ ಕ್ಯಾಪ್‌ಗಳು, ಜೆರ್ಸಿಗಳು, ಬ್ಲೇಜರ್‌ಗಳು ಮತ್ತು ಕ್ರಿಕೆಟ್ ಸಲಕರಣೆಗಳು ಇದ್ದವು.  ಅದರಲ್ಲಿ ಒಂದು ಕ್ಯಾಪ್‌ ಹಾಕಿಕೊಳ್ಳಲು ಮುಂದಾದೆ. ಆಗ ಅದನ್ನು ಮುಟ್ಟದಂತೆ ಅವರು ತಾಕೀತು ಮಾಡಿದರು. ಅದಕ್ಕೆ ನಾನು ‘ನಿಮ್ಮ ಬಳಿ ಇಷ್ಟೊಂದು ಇವೆಯಲ್ಲ..‘ ಎಂದೆ. ಅದಕ್ಕವರು, ಅವೆಲ್ಲವನ್ನೂ ತಾವು ಗಳಿಸಿದ್ದು. ಅಂತಹದೊಂದು ಬೇಕೆಂದರೆ ನೀನೇ ಗಳಿಸಿಕೊಳ್ಳಬೇಕು ಎಂದಿದ್ದರು.  ಆ ಮಾತು ನನ್ನ ಮನದಲ್ಲಿ ಅಚ್ಚೊತ್ತಿತ್ತು’ ಎಂದು ಗಾವಸ್ಕರ್ ನೆನಪಿಸಿಕೊಂಡರು. 

1992ರಲ್ಲಿ ತೆಂಡೂಲ್ಕರ್ ಅವರು ಕೌಂಟಿ ಕ್ರಿಕೆಟ್‌ನಲ್ಲಿ ಯಾರ್ಕ್‌ಶೈರ್ ಕ್ಲಬ್‌ ಪ್ರತಿನಿಧಿಸಿದ ಕುರಿತು ಮಾತನಾಡಿದ ಜೆಫ್ರಿ ಬಾಯ್ಕಾಟ್, ‘1990ರ ಕಾಲ ಅದು. ಬೇರೆ ಕೌಂಟಿ ತಂಡಗಳಲ್ಲಿ ವಿದೇಶಿ ಆಟಗಾರರು ಆಡುತ್ತಿದ್ದರು. ಆದರೆ ಯಾರ್ಕ್‌ಶೈರ್‌ನಲ್ಲಿ ವಿದೇಶಿ ಆಟಗಾರರನ್ನು ಆಡಿಸುವ ನಿಯಮ ಇರಲಿಲ್ಲ. ಇದರಿಂದಾಗಿ ಬೇರೆ ತಂಡಗಳ ಜೊತೆ ಸ್ಪರ್ಧಿಸುವುದು ತುಸು ಕಠಿಣವಾಯಿತು. ಅದಕ್ಕಾಗಿ ನಿಯಮ (ಯಾರ್ಕ್‌ಶೈರ್‌ನ ಜನಿಸಿದವರಿಗಷ್ಟೇ ಸ್ಥಾನ) ಬದಲಾವಣೆಗೆ ಸಲಹೆ ನೀಡಿದೆ. ನಿರೀಕ್ಷೆಯಂತೆ ನನ್ನ ಮಾತಿಗೆ ಬಹಳ ವಿರೋಧ ವ್ಯಕ್ತವಾಯಿತು. ಆದರೆ ಅವರ ಮನವೊಲಿಸಿದೆ. ನಿಯಮ ಸಡಿಲವಾಯಿತು. ಆಗ ತೆಂಡೂಲ್ಕರ್ ಅವರನ್ನು ಸೇರ್ಪಡೆ ಮಾಡಿ ಕೊಳ್ಳಲಾಯಿತು’ ಎಂದರು. 

‘ಆ ವೇಳೆ ಸಚಿನ್ ಇನ್ನೂ ತಾರೆ ಆಗಿರಲಿಲ್ಲ. ಆದರೆ ಸಭ್ಯ ಕ್ರಿಕೆಟಿಗನಾಗಿದ್ದರು. ಕ್ಲಬ್‌ ಸದಸ್ಯರು, ಪ್ರಾಯೋಜಕರು, ಅಭಿಮಾನಿಗಳೆಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಎಲ್ಲ ಆಯಾಮಗಳಿಂದಲೂ ಅವರು ಉತ್ತಮವಾಗಿದ್ದರು’ ಎಂದು ಶ್ಲಾಘಿಸಿದರು. 

ತಮ್ಮ ಕಾಲದ ಪ್ರಮುಖ ಆಲ್‌ರೌಂಡರ್‌ಗಳಾದ ಕಪಿಲ್ ದೇವ್, ಇಮ್ರಾನ್ ಖಾನ್, ಇಯಾನ್ ಬಾಥಮ್ ಮತ್ತು ರಿಚರ್ಡ್ ಹ್ಯಾಡ್ಲಿ ಕುರಿತು ಬಾಯ್ಕಾಟ್ ಮಾತನಾಡಿದರು. 

‘ಕಪಿಲ್ ದೇವ್ ಅದ್ಭುತ ಬೌಲರ್‌ ಆಗಿದ್ದರು. ಅವರು ಬ್ಯಾಟಿಂಗ್ ಕೂಡ ಮಾಡಿದರು. ರಿಚರ್ಡ್ ಹ್ಯಾಡ್ಲಿ  ವಿಸ್ಮಯಕಾರಿ ಬೌಲರ್. ಇಯಾನ್ ಬಾಥಮ್ ಕೂಡ ಸೊಗಸಾದ ಬೌಲರ್ ಅಗಿದ್ದರು. ಇವರೆಲ್ಲರಲ್ಲಿ ನನಗೆ ಇಮ್ರಾನ್ ಖಾನ್ ಹೆಚ್ಚು ಇಷ್ಟ. ಅವರು ಅದ್ಭುತ ಬೌಲರ್. ಬ್ಯಾಟಿಂಗ್ ಮಾಡುತ್ತಿದ್ದರು. ಶ್ರೇಷ್ಠ ನಾಯಕರಾಗಿದ್ದರು‘ ಎಂದರು.   

ಇಂದಿನ ಕ್ರಿಕಟ್ ಬಗ್ಗೆ ಮಾತನಾಡಿದ ಗಾವಸ್ಕರ್, ‘ಇವತ್ತು ಕ್ರಿಕೆಟ್‌ ಕಠಿಣವೂ ಹೌದು, ಭರಪೂರ ಮನರಂಜನೆಯ ಕಣಜವೂ ಹೌದು. ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಸರ್‌, ಬೌಂಡರಿಗಳು ದಾಖಲಾಗುತ್ತಿವೆ. ಹೊಸ ಬಗೆಯ ಹೊಡೆತಗಳಾದ ಸ್ಕೂಪ್, ರಿವರ್ಸ್ ಸ್ವೀಪ್, ಸ್ವಿಚ್ ಹಿಟ್ ಇತ್ಯಾದಿಗಳು ಗಮನ ಸೆಳೆಯುತ್ತಿವೆ. ಹಿಂದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂತಹ ಶೈಲಿಯ ಹೊಡೆತಗಳು ಕಾಣುತ್ತಿರಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT