ಶುಕ್ರವಾರ, ಫೆಬ್ರವರಿ 28, 2020
19 °C

ಮಿಸ್ಟರ್ ಕ್ರಿಕೆಟ್ ಎನಿಸಿಕೊಳ್ಳುವ ಮೈಕ್ ಹಸ್ಸಿ ಆಡಿದ್ದು ಕೇವಲ 7 ವರ್ಷ: ರೋಹಿತ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ಯಾವುದು ಸರಿಯಾದ ವಯಸ್ಸು ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್‌ ಶರ್ಮಾ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಯಾವುದೇ ನಿರ್ದಿಷ್ಟವಾದ ವಯಸ್ಸು ಎಂಬುದು ಇಲ್ಲ ಎಂದಿದ್ದಾರೆ.

ಸದ್ಯ ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಿಂದ ಹಿಂದೆ ಸರಿದಿರುವ ರೋಹಿತ್‌, ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ರೋಹಿತ್‌, ‘ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಮಾಜಿ ಕ್ರಿಕೆಟಿಗ ಮೈಕ್‌ ಹಸ್ಸಿ ಅವರಿಗೆ 30 ವರ್ಷ. ಅವರು 6–7 ವರ್ಷ ಆಡಿದ್ದಾರೆ ಅಷ್ಟೇ. ಆದರೆ, ಅವರನ್ನು ಮಿಸ್ಟರ್‌ ಕ್ರಿಕೆಟ್‌ ಎನ್ನಲಾಗುತ್ತದೆ. ನಮಗೆಲ್ಲ ಇದೊಂದು ಪಾಠ. ಯಾವುದೇ ಆಟವನ್ನು ನಿರ್ದಿಷ್ಟವಾದ ವಯಸ್ಸಿನಲ್ಲಿ ಆರಂಭಿಸಬೇಕು ಎಂದೇನು ಇಲ್ಲ’ ಎಂದಿದ್ದಾರೆ.

ತಮ್ಮ 28ನೇ ವಯಸ್ಸಿನಲ್ಲಿ ಏಕದಿನ ಕ್ರಕೆಟ್‌ಗೆ ಪದಾರ್ಪಣೆ ಮಾಡಿದ್ದ ಹಸ್ಸಿ, 30ನೇ ವಯಸ್ಸಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 7 ವರ್ಷ ಬ್ಯಾಟ್‌ ಬೀಸಿರುವ ಅವರು ಆಡಿರುವ 79 ಪಂದ್ಯಗಳ 137 ಇನಿಂಗ್ಸ್‌ಗಳಿಂದ 51.53ರ ಸರಾಸರಿಯಲ್ಲಿ 6,235 ರನ್‌ ಗಳಿಸಿದ್ದಾರೆ.

8 ವರ್ಷಕಾಲ ಏಕದಿನ ತಂಡದಲ್ಲಿ ಆಡಿರುವ ಅವರು 185 ಪಂದ್ಯಗಳ 157 ಇನಿಂಗ್ಸ್‌ಗಳಿಂದ 5,442 ರನ್ ಪೇರಿಸಿದ್ದಾರೆ. ಈ ಮಾದರಿಯಲ್ಲಿ ಅವರು ಬ್ಯಾಟಿಂಗ್‌ ಸರಾಸರಿ 48.16. ಟಿ20ಯಲ್ಲಿ 30 ಇನಿಂಗ್ಸ್‌ಗಳಿಂದ 721 ರನ್ ಕಲೆಹಾಕಿದ್ದಾರೆ.

ಕನಸುಗಳನ್ನು ಬೆನ್ನಟ್ಟಲು ನಂಬಿಕೆ ಮತ್ತು ಇಚ್ಛಾಶಕ್ತಿ ಮುಖ್ಯವೆಂದಿರುವ ರೋಹಿತ್‌, ಫುಟ್‌ಬಾಲ್‌ ತಾರೆ ರೊನಾಲ್ಡೊ ಅವರ ಜೀವನಕಥೆಯನ್ನು ಹೇಳಿದ್ದಾರೆ. ‘ರೊನಾಲ್ಡೊ ಅವರ ಒಂದು ದೊಡ್ಡ ಉದಾಹರಣೆ. ಅವರು ತುಂಬಾ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆರೈಕೆಯಲ್ಲಿ ಬೆಳೆದರು. ಇದು ಸುಲಭದ ಸಂಗತಿಯಲ್ಲ. ಆದರೆ, ಒಮ್ಮೆ ನೋಡಿ ರೊನಾಲ್ಡೊ ಈಗ ಎಲ್ಲಿದ್ದಾರೆ ಎಂದು. ಅದನ್ನು ನೀವು ಊಹಿಸಲೂ ಸಾಧ್ಯವಿಲ್ಲ’ ಎಂದು ಸ್ಫೂರ್ತಿಯ ಮಾತುಗಳನ್ನು ಆಡಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಮುಂಬೈ ಇಂಡಿಯನ್ಸ್‌ ತಂಡದ ನಾಯಕನೂ ಆಗಿರುವ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಹೆಚ್ಚು ಸಿಕ್ಸರ್‌ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿರುವ ರೋಹಿತ್‌, ಸಿಕ್ಸರ್ ಗಳಿಸುವ ಕಲೆಯ ಬಗ್ಗೆಯೂ ಮಾತನಾಡಿದ್ದಾರೆ.

ಸಿಕ್ಸರ್‌ ಬಾರಿಸಲು ಕ್ರಿಸ್‌ ಗೇಲ್‌ ರೀತಿ ದೊಡ್ಡ ದೇಹ, ಮಾಂಸಖಂಡಗಳು ಇರಬೇಕು ಎಂದೇನು ಇಲ್ಲ. ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಹೊಡೆಯುಚ ಟೈಮಿಂಗ್‌ ತುಂಬ ಮುಖ್ಯ. ಸಿಕ್ಸರ್‌ಅನ್ನು ಹೆಚ್ಚು ದೂರ ಬಾರಿಸಿದ ಮಾತ್ರಕ್ಕೆ ಯಾವ ಬ್ಯಾಟ್ಸ್‌ಮನ್‌ಗೂ ‘8 ರನ್‌’ ಕೊಡಲು ಸಾಧ್ಯವಿಲ್ಲ ಎಂದು ಚಟಾಕಿ ಹಾರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು