ಶುಕ್ರವಾರ, ಸೆಪ್ಟೆಂಬರ್ 17, 2021
30 °C

ವಿಶ್ವಕಪ್ ಜಯದ ಅವಕಾಶ ಭಾರತ ತಂಡಕ್ಕೆ ಹೆಚ್ಚು: ಮೊಹಿಂದರ್ ಅಮರನಾಥ್ ಅಭಿಪ್ರಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಇದೆ. ಸಮಯಕ್ಕೆ ತಕ್ಕ ಹಾಗೆ ಆಡುವ ಚತುರತೆ ಬಳಸಬೇಕಷ್ಟೇ ಎಂದು ಹಿರಿಯ ಕ್ರಿಕೆಟಿಗ ಮೊಹಿಂದರ್ ಅಮರನಾಥ್ ಹೇಳಿದ್ದಾರೆ.

ಸೋಮವಾರ ಸಿಯೆಟ್ ಕ್ರಿಕೆಟ್ ಪ್ರಶಸ್ತಿ ಸಮಾರಂಭದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನುಭವಿ ಆಟಗಾರರು ತಂಡದಲ್ಲಿದ್ದಾರೆ. ಅವರು ಅಗತ್ಯಕ್ಕೆ ತಕ್ಕ ಹಾಗೆ ತಮ್ಮ ಆನುಭವ ಧಾರೆಯೆರೆಬೇಕು. ಸಾಮರ್ಥ್ಯ ಸಾಬೀತುಪಡಿಸಬೇಕು. ಆಗ ತಂಡವು ಕಪ್ ಗೆಲ್ಲವುದರಿಂದ ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದರು.

‘ಹಿಂದಿನ ಪಂದ್ಯಗಳಲ್ಲಿ ಆಡಿರುವುದನ್ನು ಬಿಟ್ಟುಬಿಡಬೇಕು. ಹೊಸ ಪಂದ್ಯ, ಹೊಸ ಆಟ ಮತ್ತು ಹೊಸ ಮನೋಭಾವ ಇರಬೇಕು. ಅದಕ್ಕಾಗಿ ಸಿದ್ಧತೆ ನಡೆಸಬೇಕು’ ಎಂದರು.

‘ಐಪಿಎಲ್ ಆಟವನ್ನು ವಿಶ್ವಕಪ್ ಸಿದ್ಧತೆಗೆ ಹೋಲಿಸಬಾರದು. ಎರಡೂ ವಿಭಿನ್ನ ಮಾದರಿಯ ಆಟ. ಹಾರ್ದಿಕ್ ಪಾಂಡ್ಯ ಇನ್ನೂ ಸಣ್ಣವಯಸ್ಸಿನ ಆಟಗಾರ. ಆದರೆ, ದಿನಗಳೆದಂತೆ ಪಕ್ವಗೊಳ್ಳುತ್ತಾರೆ. ಅನುಭವ ಲಭಿಸಿದಂತೆ ಉತ್ತಮವಾಗಿ ಆಡುತ್ತಾರೆ. 50–50 ಮಾದರಿಯ ಕ್ರಿಕೆಟ್‌ನಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕು. ತಾವು ನಿಜವಾದ ಆಲ್‌ರೌಂಡರ್ ಎಂದು ಸಾಬೀತುಪಡಿಸಬೇಕು’ ಎಂದು ಅಮರನಾಥ್ ಹೇಳಿದರು.

1983ರಲ್ಲಿ ಭಾರತ ತಂಡವು ವಿಶ್ವಕಪ್ ಜಯಿಸುವಲ್ಲಿ ಅಮರನಾಥ್ ಅವರ ಆಲ್‌ರೌಂಡ್ ಆಟವು ಪ್ರಮುಖ ಪಾತ್ರ ವಹಿಸಿತ್ತು.

‘ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಉತ್ತಮ ಬೌಲರ್‌ ಆಗಿದ್ದಾರೆ. ಅವರ ಎಸೆತಗಳಲ್ಲಿ ವೈವಿಧ್ಯತೆ ಇದೆ.  ಭಾರತ ತಂಡದ ಮಟ್ಟಿಗೆ ಅವರ ಆಟವೇ ಪ್ರಮುಖವಾಗಲಿದೆ. ಆದ್ದರಿಂದ ಅವರು ತಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕು. ಲೈನ್ ಮತ್ತು ಲೆಂಗ್ತ್‌ ನಿರ್ವಹಣೆಯಲ್ಲಿ ಅವರು ಸ್ಥಿರವಾದ ಪ್ರದರ್ಶನ ನೀಡುತ್ತಿದ್ದಾರೆ’ ಎಂದರು.

 ಮೇ 30ರಿಂದ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಜೂನ್ 5ರಂದು ಭಾರತ ತಂಡವು ಸೌಥಾಂಪ್ಟನ್ ನಲ್ಲಿ ತನ್ನ ಮೊದಲ ಪಂದ್ಯ ಆಡಲಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು