ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಲೀಗ್‌ ಇನ್ನಷ್ಟು ನಡೆಯಲಿ: ಹರ್ಮನ್‌ಪ್ರೀತ್‌

Last Updated 12 ಮೇ 2019, 20:00 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ‘ಮಹಿಳೆಯರ ಟ್ವೆಂಟಿ–20 ಲೀಗ್ ಆಯೋಜಿಸಿರುವುದು ಸಂತೋಷದ ವಿಷಯ. ಲೀಗ್ ಯಶಸ್ವಿಯಾಗಿ ನಡೆದಿದೆ ಕೂಡ. ಆದರೆ ಇನ್ನಷ್ಟು ತಂಡಗಳು ಇದ್ದರೆ ಚೆನ್ನಾಗಿತ್ತು...’

ಚೊಚ್ಚಲ ಲೀಗ್‌ನ ಪ್ರಶಸ್ತಿ ಗೆದ್ದ ಸೂಪರ್‌ನೋವಾಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಆಡಿದ ಮಾತುಗಳು ಇವು.

ಶನಿವಾರ ರಾತ್ರಿ ಇಲ್ಲಿನ ಸವಾಯ್‌ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮಿಥಾಲಿ ರಾಜ್ ನಾಯಕತ್ವದ ವೆಲೋಸಿಟಿ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿದ ಸೂಪರ್‌ ನೋವಾಸ್‌ ಪ್ರಶಸ್ತಿ ಗಳಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ವೆಲೋಸಿಟಿ ಆರಂಭದಲ್ಲೇ ಆಘಾತ ಅನುಭವಿಸಿತ್ತು. 37 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ಸುಷ್ಮಾ ವರ್ಮಾ (ಅಜೇಯ 40; 32 ಎಸೆತ, 1 ಸಿಕ್ಸರ್, 3 ಬೌಂಡರಿ) ಮತ್ತು ಅಮೆಲಿ ಕೇರ್ (36; 38 ಎ, 4 ಬೌಂ) 75 ರನ್‌ಗಳನ್ನು ಸೇರಿಸಿ ತಂಡವನ್ನು ಮೂರಂಕಿ ಮೊತ್ತ ದಾಟಿಸಿದ್ದರು.

122 ರನ್‌ಗಳ ಜಯದ ಗುರಿ ಬೆನ್ನತ್ತಿದ ಸೂಪರ್‌ನೋವಾಸ್ ತಂಡ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ರೋಚಕವಾಗಿ ಗೆದ್ದಿತ್ತು. ಆರಂಭಿಕ ಬ್ಯಾಟ್ಸ್‌ವುಮನ್ ಪ್ರಿಯಾ ಪೂನಿಯಾ ಮತ್ತು ನಾಲ್ಕನೇ ಕ್ರಮಾಂಕದ ಹರ್ಮನ್‌ಪ್ರೀತ್ ಕೌರ್‌ (51; 37 ಎ, 3 ಸಿ, 4 ಬೌಂ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ತಂಡ ಒಂದು ಹಂತದಲ್ಲಿ ಸುಲಭ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ ಕೊನೆಯ ಓವರ್‌ಗಳಲ್ಲಿ ವೆಲೋಸಿಟಿ ಬೌಲರ್‌ಗಳು ಪಾರಮ್ಯ ಮೆರೆದರು. ಕೊನೆಯ ಓವರ್‌ನಲ್ಲಿ ಸೂಪರ್‌ನೋವಾಸ್‌ ಏಳು ರನ್‌ ಗಳಿಸಬೇಕಾಗಿತ್ತು. ಲೀ ತಹುಹು ಮತ್ತು ರಾಧಾ ಯಾದವ್ ದಿಟ್ಟ ಆಟವಾಡಿ ಈ ಸವಾಲನ್ನು ಮೆಟ್ಟಿ ನಿಂತರು.

ಅಮೋಘ ಅರ್ಧಶತಕ ಗಳಿಸಿದ್ದ ಹರ್ಮನ್‌ಪ್ರೀತ್ ಕೌರ್ ಜಯದ ರೂವಾರಿ ಎನಿಸಿದ್ದರು. ಪಂದ್ಯದ ನಂತರ ಅವರು ಮಾತನಾಡಿದ ‘ಇದು ಅತ್ಯುತ್ತಮ ಪ್ರಯೋಗ. ವೈಯಕ್ತಿಕವಾಗಿ ನನಗೆ ಇದರಿಂದ ತುಂಬ ಅನುಕೂಲ ಆಗಿದೆ. ತಂಡದ ಆಟಗಾರ್ತಿಯರು ಟೂರ್ನಿಯಲ್ಲಿ ಸಾಕಷ್ಟು ಅನುಭವ ಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಟೂರ್ನಿಗಳು ನಡೆಯಲಿ ಎಂದು ಆಶಿಸುತ್ತೇವೆ’ ಎಂದರು.

‘ಟೂರ್ನಿಯಲ್ಲಿ ರಾಧಾ ಯಾದವ್‌, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ ಮುಂತಾದ ಯುವ ಆಟಗಾರ್ತಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರಿಗೆ ಇನ್ನಷ್ಟು ಲೀಗ್‌ಗಳಲ್ಲಿ ಆಡಲು ಅವಕಾಶ ಲಭಿಸಿದರೆ ಅದರಿಂದ ರಾಷ್ಟ್ರೀಯ ತಂಡಕ್ಕೆ ಪ್ರಯೋಜನ ಆಗಲಿದೆ’ ಎಂದು ಅವರು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT