ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕ್ರಿಕೆಟ್ ಚಹರೆ ಬದಲಿಸಿದ ಧೋನಿ: ಐಸಿಸಿ

Last Updated 6 ಜುಲೈ 2019, 19:45 IST
ಅಕ್ಷರ ಗಾತ್ರ

ಲೀಡ್ಸ್‌: ‘ಮಹೇಂದ್ರಸಿಂಗ್ ಧೋನಿ ಅವರು ಭಾರತದ ಕ್ರಿಕೆಟ್ ಕ್ಷೇತ್ರದ ಚಹರೆಯನ್ನೇ ಬದಲಿಸಿದ್ದಾರೆ. ವಿಶ್ವದಲ್ಲಿ ಲಕ್ಷಾಂತರ ಜನರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ. ಕ್ರೀಡೆಯ ಭವ್ಯ ಪರಂಪರೆಯನ್ನು ಅವರು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ’–

ದಿಗ್ಗಜ ಆಟಗಾರ ಧೋನಿ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ತನ್ನ ಟ್ವಿಟರ್‌ನಲ್ಲಿ ಹಾಕಿರುವ ಸಂದೇಶ ಇದು. ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಧೋನಿಯವರ ಕ್ರಿಕೆಟ್ ಸಾಧನೆಗಳ ವಿಡಿಯೊ ಅನ್ನು ಐಸಿಸಿಯು ಈ ಸಂದೇಶದೊಂದಿಗೆ ಬಿಡುಗಡೆ ಮಾಡಿದೆ. ವಿಡಿಯೊದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಬೌಲರ್ ಜಸ್‌ಪ್ರೀತ್ ಬೂಮ್ರಾ, ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ ಅವರು ಧೋನಿಯ ಬಗ್ಗೆ ಮಾತನಾಡಿದ್ದಾರೆ.

‘ಒಬ್ಬ ವ್ಯಕ್ತಿಯನ್ನು ಹೊರಗಿನಿಂದ ನೋಡುವುದಕ್ಕೂ ಮತ್ತು ಆತನ ಅಂತರಂಗಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಧೋನಿ ಅವರು ಯಾವಾಗಲೂ ಶಾಂತಚಿತ್ತದಿಂದ ಇರುತ್ತಾರೆ. ಆದರೆ ಆವರ ಮನದಲ್ಲಿ ಯೋಜನೆಗಳು, ಆಟದ ಬದ್ಧತೆಗಳು ಒಡಮೂಡುತ್ತವೆ. ಅವರಿಂದ ಕಲಿಯುವುದು ಬಹಳಷ್ಟಿದೆ.ಅವರ ಮಾತುಗಳನ್ನು ಆಲಿಸುವುದೇ ಒಂದು ಅಮೋಘವಾದ ಅನುಭವ. ಅವರು ಹಿಂದೆಯೂ ನನಗೆ ನಾಯಕನಾಗಿದ್ದರು. ಈಗಲೂ ಅವರೇ ಮತ್ತು ಮುಂದೆಂದಿಗೂ ಅವರೇ ನನ್ನ ನಾಯಕ’ ಎಂದು ವಿರಾಟ್ ಹೇಳಿದ್ದಾರೆ.

‘2016ರಲ್ಲಿ ನಾನು ತಂಡಕ್ಕೆ ಸೇರ್ಪಡೆಯಾದಾಗ ಧೋನಿ ನಾಯಕರಾಗಿದ್ದರು. ತಂಡದ ಮೇಲೆ ಅವರ ಪ್ರಭಾವ ದೊಡ್ಡದು. ಎಲ್ಲರಿಗೂ ಯಾವುದೇ ಸಂದರ್ಭದಲ್ಲಿಯೂ ಸಹಾಯಕ್ಕೆ ನಿಲ್ಲುತ್ತಾರೆ’ ಎಂದು ಬೂಮ್ರಾ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ ಟೂರ್ನಿಯಲ್ಲಿ ಪುಣೆ ಸೂಪರ್ ಜೈಂಟ್ಸ್‌ ತಂಡದಲ್ಲಿ ಧೋನಿಯೊಂದಿಗೆ ಆಡುತ್ತಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್‌ ಕೂಡ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ‘ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಧೋನಿ ಪ್ರಮುಖರು. ಅಪ್ರತಿಮ ವಿಕೆಟ್‌ಕೀಪರ್. ಅವರನ್ನು ಮೀರಿಸುವವರು ಇನ್ನೊಬ್ಬರು ಇಲ್ಲ’ ಎಂದಿದ್ದಾರೆ.

‘ಧೋನಿ ಮಿಸ್ಟರ್‌ ಕೂಲ್. ನಾನು ವಿಕೆಟ್‌ಕೀಪಿಂಗ್ ಮಾಡಲು ಅವರೇ ಪ್ರೇರಣೆ. ಆಟದಂಗದಲ್ಲಿ ಅವರ ವ್ಯಕ್ತಿತ್ವವನ್ನು ನಾನು ಪ್ರೀತಿಸುತ್ತೇನೆ. ಮಿಂಚಿನ ವೇಗದ ಅವರ ಕೈಚಲನೆಯ ಸ್ಟಂಪಿಂಗ್, ಬ್ಯಾಟಿಂಗ್ ಮಾಡುವಾಗ ಅವರ ತನ್ಮಯತೆ ಮತ್ತು ಶಾಂತಚಿತ್ತತೆ ಅದ್ಬುತ. ಕ್ರಿಕೆಟ್ ಅಟದ ಅತಿ ಶ್ರೇಷ್ಠ ರಾಯಭಾರಿಯಾಗಿದ್ದಾರೆ’ ಎಂದು ಇಂಗ್ಲೆಂಡ್ ತಂಡದ ವಿಕೆಟ್‌ಕೀಪರ್ ಜೋಸ್ ಬಟ್ಲರ್ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT