ಭಾನುವಾರ, ನವೆಂಬರ್ 1, 2020
20 °C

ಧೋನಿ ಈ ಹಿಂದೆ ಕೇವಲ ಐವರು ಬೌಲರ್‌ಗಳೊಂದಿಗೆ ಆಡಿದ್ದು ನೆನಪಿಲ್ಲ: ಆಕಾಶ್ ಚೋಪ್ರಾ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್‌ ಚೋಪ್ರಾ ಅವರು ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಪ್ರದರ್ಶನ ಹಾಗೂ ನಾಯಕ ಎಂ.ಎಸ್. ಧೋನಿ ಅವರ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಚೆನ್ನೈನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ ಗಳಿಸದೇ ಇರುವುದು ಮತ್ತು ತಂಡದ ಸಂಯೋಜನೆ ಸರಿಯಾಗಿ ಇಲ್ಲದಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಪ್ಟೆಂಬರ್‌ 19ರಂದು ನಡೆದ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ 5 ವಿಕೆಟ್‌ ಜಯ ಸಾಧಿಸಿದ್ದ ಚೆನ್ನೈ, ನಂತರದ ಎರಡು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ 16 ರನ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 44 ರನ್‌ಗಳಿಂದ ಸೋಲು ಅನುಭವಿಸಿದೆ.

ಈ ಬಗ್ಗೆ ಮಾತನಾಡಿರುವ ಚೋಪ್ರಾ, ‘ನನಗೆ ನೆನಪಿರುವಂತೆ ನಾಯಕ ಧೋನಿ ಇದೇ ಮೊದಲ ಬಾರಿಗೆ ಕೇವಲ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿದ್ದಾರೆ. ಧೋನಿ ಕೇವಲ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವುದನ್ನು ಇಷ್ಟಪಡುವುದಿಲ್ಲ. ಆದರೆ, ಈ ಬಾರಿ ಅದನ್ನೇ ಮಾಡಿದ್ದಾರೆ’ ಎಂದು ಯುಟ್ಯೂಬ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

‘ಅಂಬಟಿ ರಾಯುಡು ಅವರ ಅನುಪಸ್ಥಿತಿ ಹಾಗೂ ತಮ್ಮ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಧೋನಿ ಕಳವಳಗೊಂಡಿದ್ದಾರೆ. ಅವರು ಶೇ.100 ರಷ್ಟು ಆತ್ಮವಿಶ್ವಾಸ ಹೊಂದಿಲ್ಲ. ತಂಡದಲ್ಲಿ ಸ್ಥಾನ ಪಡೆದಿರುವ ರುತುರಾಜ್‌ ಗಾಯಕ್ವಾಡ್‌, ಮುರುಳಿ ವಿಜಯ್‌ ಹೆಚ್ಚು ರನ್‌ ಗಳಿಸುತ್ತಿಲ್ಲ. ಧೋನಿ ಆರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ವಿಶ್ವಾಸ ಹೊಂದಿಲ್ಲ’ ಎಂದು ಹೇಳಿದ್ದಾರೆ.

‘ನೀವು ಈ ಆವೃತ್ತಿಯಲ್ಲಿ ಜಡೇಜಾ ಅವರ ಪ್ರದರ್ಶನವನ್ನು ಗಮನಿಸಿದರೆ, ಅವರು ಮೂರು ಪಂದ್ಯಗಳಲ್ಲಿಯೂ ನಾಲ್ಕು ಓವರ್‌ ಬೌಲಿಂಗ್‌ ಮಾಡಿದ್ದಾರೆ. ಪ್ರತಿ ಸಲ 40ಕ್ಕಿಂತ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದಾರೆ. ನೀವು ಹೀಗೆ ರನ್‌ ಬಿಟ್ಟುಕೊಟ್ಟರೆ, ಹೆಚ್ಚು ರನ್‌ ಸೋರಿಕೆಯಾಗಲು ಬೇರೆಲ್ಲಿಯೂ ಹೋಗಬೇಕಿಲ್ಲ. ತಂಡದಲ್ಲಿನ ಉಳಿದವರ್ಯಾರೂ ಬೌಲಿಂಗ್‌ ಮಾಡುತ್ತಿಲ್ಲ. ಕೇವಲ 5 ಬೌಲರ್‌ಗಳು ತಂಡದಲ್ಲಿದ್ದಾರೆ. ಅದು ಧೋನಿಯ ತಂತ್ರವಲ್ಲ. ಆದರೂ ಇದು ಆಗುತ್ತಿದೆ’ ಎಂದಿದ್ದಾರೆ.

ಧೋನಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಿಲ್ಲವೇಕೆ?
ಧೋನಿ ಅವರು ಕೆಳ (ಆರು ಅಥವಾ ಏಳನೇ) ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಯುತ್ತಿರುವ ಬಗ್ಗೆ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ. ಆದರೆ, ಚೋಪ್ರಾ ಅದನ್ನು ಸಮರ್ಥಿಸಿಕೊಂಡಿದ್ದಾರೆ.

ಡೆಲ್ಲಿ ವಿರುದ್ಧ 176ರನ್‌ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ಕಿಂಗ್ಸ್‌ ಪರ ಆರಂಭಿಕ ಜೋಡಿ (ಮುರುಳಿ ವಿಜಯ್‌ ಮತ್ತು ಶೇನ್‌ ವ್ಯಾಟ್ಸನ್‌) ಔಟಾದ ಬಳಿಕ ರನ್‌ ಗಳಿಕೆ ವೇಗ ಪಡೆದಿರಲಿಲ್ಲ. ಆ ತಂಡ ಮೊದಲ 10 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 47 ರನ್‌ ಗಳಿಸಿತ್ತು. ಅಲ್ಲಿಂದಾಚೆಗೆ ಬೇಕಾದ ದರದಲ್ಲಿ ರನ್ ‌ಗಳಿಸಲು ಸಾಧ್ಯವಾಗಿರಲಿಲ್ಲ. ಈ ಪಂದ್ಯದಲ್ಲಿ ಧೋನಿ ಆರನೇ ಕ್ರಮಾಂಕದಲ್ಲಿ ಆಡಿದ್ದರು.

‘ನೀವು ಧೋನಿ ಬ್ಯಾಟಿಂಗ್‌ ಬಗ್ಗೆ ಮಾತನಾಡುವಾಗ, ಋತುರಾಜ್‌ ಗಾಯಕವಾಡ್‌ ಮತ್ತು ಮುರುಳಿ ವಿಜಯ್‌ ಯಾವ ಸ್ಥಾನದಲ್ಲಿ ಬ್ಯಾಟಿಂಗ್‌ ಮಾಡಬಲ್ಲರು ಎಂಬುದನ್ನು ನೋಡಬೇಕು. ಕೇದಾರ್ ಜಾಧವ್‌ ಅವರನ್ನು ಕೊನೆಯಲ್ಲಿ ಬ್ಯಾಟಿಂಗ್‌ಗೆ ಕಳುಹಿಸುವುದರಿಂದ ಪ್ರಯೋಜನವೇನು? ಧೋನಿ ಏಕೆ ಆ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದರು ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ’ ಎಂದು ಚೋಪ್ರಾ ಹೇಳಿದ್ದಾರೆ.

‘ಫಾಫ್‌ ಡು ಪ್ಲೆಸಿ ಅವರನ್ನು ಹೊರತುಪಡಿಸಿ ಅವರ (ಚೆನ್ನೈನ) ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದಾರೆ. ಶೇನ್‌ ವ್ಯಾಟ್ಸನ್‌ ಖಂಡಿತಾ ರನ್‌ ಗಳಿಸಬಲ್ಲರು, ಆ ಬಗ್ಗೆ ನನಗೆ ಚಿಂತೆಯಿಲ್ಲ. ನನಗೆ ಚಿಂತೆ ಇರುವುದು ವಿಜಯ್‌ ಮತ್ತು ಗಾಯಕ್ವಾಡ್ ಪ್ರದರ್ಶನದ ಬಗ್ಗೆ’ ಎಂದಿದ್ದಾರೆ.

‘ಚೆನ್ನೈ ತಂಡ ರೈನಾ ಅವರ ಅನುಪಸ್ಥಿತಿಯಲ್ಲಿ ಆಡುತ್ತಿದೆ. ರೈನಾ ಅವರ ಜಾಗದಲ್ಲಿ ಆಡಬಲ್ಲ ಆಟಗರ ಅವರಿಗೆ ಇನ್ನೂ ಸಿಕ್ಕಿಲ್ಲ. ಇದು ಆ ತಂಡವನ್ನು ಅಲ್ಪಮಟ್ಟಿಗೆ ಬಾಧಿಸುತ್ತಿದೆ. ಹರ್ಭಜನ್‌ ಸಿಂಗ್‌ ಅವರೂ ಚೆನ್ನೈಗೆ ಸ್ವಲ್ಪ ಶಕ್ತಿ ತುಂಬುತ್ತಿದ್ದರು. ಸದ್ಯ ಚೆನ್ನೈ ಆಟಗಾರರು ಒಂದು ತಂಡವಾಗಿ ಕಣಕ್ಕಿಳಿಯಲು ಪರದಾಡುತ್ತಿದ್ದಾರೆ. 180 ರನ್‌ಗಳ ಟಾರ್ಗೆಟ್ ಅವರಿಗೆ ಕಷ್ಟಕರವಾಗಿದೆ. 150–160 ರನ್‌ ಗಳಿಕೆಯೇ ಅವರ ಸಾಮರ್ಥ್ಯವಾಗಿದೆ. ಹೀಗಾಗಿ ಧೋನಿ 6 ಬೌಲರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ನನಗನಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು