ಪೊಲಾರ್ಡ್‌ ಭಯದಲ್ಲಿ ರಹಾನೆ ಪಡೆ

ಶನಿವಾರ, ಏಪ್ರಿಲ್ 20, 2019
25 °C
ಇಂದು ಮುಂಬೈ ಇಂಡಿಯನ್ಸ್‌–ರಾಜಸ್ಥಾನ್‌ ರಾಯಲ್ಸ್‌ ಮುಖಾಮುಖಿ

ಪೊಲಾರ್ಡ್‌ ಭಯದಲ್ಲಿ ರಹಾನೆ ಪಡೆ

Published:
Updated:
Prajavani

ಮುಂಬೈ: ಸತತ ಮೂರು ಪಂದ್ಯಗಳಲ್ಲಿ ಗೆದ್ದು ‘ಹ್ಯಾಟ್ರಿಕ್‌’ ಸಾಧನೆ ಮಾಡಿರುವ ಮುಂಬೈ ಇಂಡಿಯನ್ಸ್‌ ತಂಡ ಈಗ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಪೈಪೋಟಿಯಲ್ಲಿ ರೋಹಿತ್ ಶರ್ಮಾ ಬಳಗ, ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ್‌ ರಾಯಲ್ಸ್‌ ಎದುರು ಸೆಣಸಲಿದೆ. ಈ ಪಂದ್ಯದಲ್ಲಿ ಮುಂಬೈ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಕೀರನ್‌ ಪೊಲಾರ್ಡ್‌ ಮತ್ತು  ವೇಗದ ಬೌಲರ್‌ ಅಲ್ಜಾರಿ ಜೋಸೆಫ್‌ ಈ ಪಂದ್ಯದ ಆಕರ್ಷಣೆಯಾಗಿದ್ದಾರೆ.

ಬುಧವಾರ ನಡೆದಿದ್ದ ಕಿಂಗ್ಸ್‌ ಇಲೆವನ್‌ ಪಂಜಾಬ್ ಎದುರಿನ ಹೋರಾಟದಲ್ಲಿ ಈ ಜೋಡಿ ಮುಂಬೈಗೆ ಗೆಲುವಿನ ಸಿಹಿ ಉಣಬಡಿಸಿತ್ತು. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಪೊಲಾರ್ಡ್‌ ಅಬ್ಬರಿಸಿದ್ದರು. 31 ಎಸೆತಗಳಲ್ಲಿ 83 ರನ್‌ ಸಿಡಿಸಿದ್ದರು. ಇದರಲ್ಲಿ ಹತ್ತು ಸಿಕ್ಸರ್‌ಗಳು ಸೇರಿದ್ದವು. ಜೋಸೆಫ್‌, ಅಂತಿಮ ಎಸೆತದಲ್ಲಿ ತಂಡದ ಗೆಲುವಿಗೆ ಅಗತ್ಯವಿದ್ದ ಎರಡು ರನ್‌ ಗಳಿಸಿ ತವರಿನ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.

ಉತ್ತಮ ಲಯದಲ್ಲಿರುವ ಇವರು ಶನಿವಾರ ಮತ್ತೊಮ್ಮೆ ತವರಿನ ಅಂಗಳದಲ್ಲಿ ರನ್ ಮಳೆ ಸುರಿಸಲು ಸಿದ್ಧವಾಗಿದ್ದಾರೆ. ಗಾಯದಿಂದ ಗುಣಮುಖರಾಗಿರುವ ರೋಹಿತ್‌, ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ಅಂಗಳಕ್ಕಿಳಿದರೆ ತಂಡದ ಬ್ಯಾಟಿಂಗ್‌ ಶಕ್ತಿ ಹೆಚ್ಚಲಿದೆ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಬಲವೂ ಮುಂಬೈಗೆ ಇದೆ.

ಕ್ವಿಂಟನ್‌ ಡಿ ಕಾಕ್‌, ಸಿದ್ದೇಶ್‌ ಲಾಡ್‌ ಕೂಡಾ ಮಿಂಚುವ ವಿಶ್ವಾಸದಲ್ಲಿದ್ದಾರೆ. ಇಶಾನ್‌ ಕಿಶನ್‌ ಮತ್ತು ಕೃಣಾಲ್‌ ಪಾಂಡ್ಯ ಸ್ಥಿರ ಸಾಮರ್ಥ್ಯ ತೋರದಿರುವುದು ಆತಿಥೇಯರ ಚಿಂತೆಗೆ ಕಾರಣವಾಗಿದೆ. ಇವರು ಹಿಂದಿನ ಪಂದ್ಯದಲ್ಲಿ ಒಂದಕ್ಕಿ ಮೊತ್ತಕ್ಕೆ ಪೆವಿಲಿಯನ್‌ ಸೇರಿದ್ದರು.

ಬೌಲಿಂಗ್‌ನಲ್ಲಿ ಮುಂಬೈ ಇನ್ನಷ್ಟು ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ. ಈ ತಂಡದ ಬೌಲರ್‌ಗಳು ಕಿಂಗ್ಸ್‌ ಇಲೆವನ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ವಿಫಲರಾಗಿದ್ದರು. ಹಾರ್ದಿಕ್‌ ಪಾಂಡ್ಯ ಬರೋಬ್ಬರಿ 57ರನ್‌ ನೀಡಿದ್ದರು. ಜೇಸನ್‌ ಬೆಹ್ರೆನ್‌ಡೊರ್ಫ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರೂ ದುಬಾರಿಯಾಗಿದ್ದರು. ಅಲ್ಜಾರಿ ಜೋಸೆಫ್‌ ಮತ್ತು ರಾಹುಲ್‌ ಚಾಹರ್‌ ಅವರ ಜಾದೂ ಕೂಡಾ ಹಿಂದಿನ ಪಂದ್ಯದಲ್ಲಿ ನಡೆದಿರಲಿಲ್ಲ.

ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ಈ ಪಂದ್ಯದಲ್ಲಿ ಗೆದ್ದು ಹಿಂದಿನ ನಿರಾಸೆ ಮರೆಯುವ ತವಕದಲ್ಲಿದೆ. ರಹಾನೆ ಪಡೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಏಳನೇ ಸ್ಥಾನ ಹೊಂದಿದೆ. ಈ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ. ಹಾಗಾದಲ್ಲಿ ರಹಾನೆ ಬಳಗ ಬಲಿಷ್ಠ ಮುಂಬೈ ತಂಡವನ್ನು ಕಟ್ಟಿಹಾಕುವ ಕನಸು ಕಾಣಬಹುದು.

ಆರಂಭ: ಸಂಜೆ 4
ಸ್ಥಳ: ಮುಂಬೈ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !