ಮಂಗಳವಾರ, ಆಗಸ್ಟ್ 16, 2022
29 °C
ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌

ನಾಯಕನಾದರೂ ಆಟದ ಶೈಲಿ ಬದಲಾಗೊಲ್ಲ: ಬೆನ್‌ ಸ್ಟೋಕ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಜೋ ರೂಟ್‌ (ಎಡ) ಮತ್ತು ಬೆನ್‌ ಸ್ಟೋಕ್ಸ್‌

ಲಂಡನ್‌: ‘ಜೋ ರೂಟ್‌ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆ ನನ್ನ ಹೆಗಲೇರಿದರೂ, ನನ್ನ ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ’ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಹೇಳಿದ್ದಾರೆ.

ಜುಲೈ 8ರಿಂದ ಸೌತಾಂಪ್ಟನ್‌ನಲ್ಲಿ ಆರಂಭವಾಗುವ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ಗೆ ರೂಟ್‌ ಅಲಭ್ಯರಾಗುವ ಸಾಧ್ಯತೆ ಇದೆ. ಹೀಗಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಸ್ಟೋಕ್ಸ್‌ಗೆ ಸಿಗುವ ನಿರೀಕ್ಷೆ ಇದೆ.

‘ನಾನು ಮೊದಲಿನಿಂದಲೂ ಆಕ್ರಮಣ ಮನೋಭಾವದಿಂದಲೇ ಕ್ರಿಕೆಟ್‌ ಆಡುತ್ತಾ ಬಂದಿದ್ದೇನೆ. ನಾಯಕನಾದ ಮೇಲೆಯೂ ಅದು ಮುಂದುವರಿಯಲಿದೆ. ನಾನು ಯಾವಾಗಲೂ ಧನಾತ್ಮಕವಾಗಿ ಆಲೋಚಿಸುತ್ತೇನೆ. ಎಂತಹುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡುತ್ತೇನೆ’ ಎಂದಿದ್ದಾರೆ.

‘ಇಂಗ್ಲೆಂಡ್‌ ತಂಡದ ನಾಯಕನಾಗುವುದು ಬಹುದೊಡ್ಡ ಗೌರವ. ಅದು ಎಲ್ಲರಿಗೂ ಸಿಗುವುದಿಲ್ಲ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ. ಈ ಹೊಣೆ ಕೇವಲ ಒಂದು ಪಂದ್ಯಕ್ಕಷ್ಟೇ ಸೀಮಿತವಾಗಿರಲಿದೆ ಎಂಬುದನ್ನೂ ಅರಿತಿದ್ದೇನೆ’ ಎಂದು ಹೇಳಿದ್ದಾರೆ.

‘ನಾಯಕ ಎನ್ನುವ ಕಾರಣಕ್ಕೆ ಏಕಪಕ್ಷೀಯವಾಗಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ತಂಡದಲ್ಲಿ ಸಾಕಷ್ಟು ಮಂದಿ ಅನುಭವಿ ಆಟಗಾರರಿದ್ದಾರೆ. ಅವರಿಂದ ಅಗತ್ಯ ಸಲಹೆಗಳನ್ನು ಪಡೆಯುತ್ತೇನೆ. ಎಲ್ಲರಿಗೂ ಮುಕ್ತ ಸ್ವಾತಂತ್ರ್ಯ ನೀಡುತ್ತೇನೆ’ ಎಂದೂ ಅವರು ನುಡಿದಿದ್ದಾರೆ.

29 ವರ್ಷ ವಯಸ್ಸಿನ ಸ್ಟೋಕ್ಸ್‌ ಒಟ್ಟು 63 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಒಂದೊಮ್ಮೆ ಅವರಿಗೆ ನಾಯಕತ್ವ ಸಿಕ್ಕರೆ, ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಲಿರುವ ಎರಡನೇ ಆಲ್‌ರೌಂಡರ್‌ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಆ್ಯಂಡ್ರ್ಯೂ ಫ್ಲಿಂಟಾಫ್‌ ಅವರು ಮೊದಲು ಈ ಸಾಧನೆ ಮಾಡಿದ್ದರು.

ಸ್ಟೋಕ್ಸ್‌ ಅವರು 2017ರಲ್ಲಿ ಇಂಗ್ಲೆಂಡ್‌ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದರು. ಬ್ರಿಸ್ಟಲ್‌ನ ನೈಟ್‌ಕ್ಲಬ್‌ವೊಂದರಲ್ಲಿ ನಡೆದ ಜಗಳದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಕಾರಣ ಉಪನಾಯಕತ್ವದಿಂದ ಕೆಳಗಿಳಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು