ಭಾನುವಾರ, ಆಗಸ್ಟ್ 14, 2022
25 °C

ವಿಂಡೀಸ್ ವಿರುದ್ದ ಸರಣಿ ಗೆದ್ದರೂ ಕಿವೀಸ್‌ಗೆ ಟೆಸ್ಟ್ ಅಗ್ರಪಟ್ಟ ಜಸ್ಟ್ ಮಿಸ್!

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ನ್ಯೂಜಿಲೆಂಡ್ ಇನ್ನಿಂಗ್ಸ್ ಹಾಗೂ 12 ರನ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿದೆ.

ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ ಕಿವೀಸ್ ಇನ್ನಿಂಗ್ಸ್ ಹಾಗೂ 134 ರನ್ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲೂ ಟಾಮ್ ಲೇಥಮ್ ತಂಡವು ತವರಿನಲ್ಲಿ ಅಮೋಘ ಗೆಲುವು ದಾಖಲಿಸಿದೆ.

ಈ ಗೆಲುವಿನ ಹೊರತಾಗಿಯೂ ಕಿವೀಸ್, ದಶಾಂಶ ಅಂಕಪಟ್ಟಿಯಂತೆ ಸ್ವಲ್ಪದರಲ್ಲೇ ಟೆಸ್ಟ್ ಅಗ್ರಪಟ್ಟದಿಂದ ವಂಚಿತವಾಗಿದೆ. ಆಸ್ಟ್ರೇಲಿಯಾ ಜೊತೆ ಸಮಾನ ರೇಟಿಂಗ್ ಪಾಯಿಂಟ್ ಹಂಚಿಕೊಂಡರೂ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಂಕಪಟ್ಟಿಯನ್ನು ಇನ್ನು ನಿಕಟವಾಗಿ ಗಮನಿಸಿದಾಗ ಆಸೀಸ್ 116.461 ಹಾಗೂ ನ್ಯೂಜಿಲೆಂಡ್ 116.375 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ.

ಇದನ್ನೂ ಓದಿ: 

ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ತಂಡ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶದಿಂದ ಕಿವೀಸ್ ವಂಚಿತವಾಯಿತು. ಇನ್ನೊಂದೆಡೆ ಟೀಮ್ ಇಂಡಿಯಾ 114 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಐಸಿಸಿ ಶ್ರೇಯಾಂಕ ಪಟ್ಟಿ ಬಿಡುಗಡೆಗೂ ಮುನ್ನವೇ ಹಲವು ಮಾಧ್ಯಮಗಳು ನ್ಯೂಜಿಲೆಂಡ್ ನಂ.1 ಎಂದು ಬಿಂಬಿಸಿರುವುದು ಹಲವು ಗೊಂದಲಗಳಿಗೆ ಕಾರಣವಾಯಿತು.

 

 

 

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲೂ ಇಂಗ್ಲೆಂಡ್ ಹಿಂದಿಕ್ಕಿರುವ ನ್ಯೂಜಿಲೆಂಡ್ ಮೂರನೇ ಸ್ಥಾನಕ್ಕೆ ನೆಗೆತ ಕಂಡಿದೆ. ವಿಂಡೀಸ್ ವಿರುದ್ಧ 120 ಅಂಕಗಳನ್ನು ಬಾಚಿರುವ ನ್ಯೂಜಿಲೆಂಡ್ ಇದುವರೆಗೆ ಒಟ್ಟು 300 ಅಂಕಗಳನ್ನು ಪಡೆದಿದ್ದು, ಎರಡನೇ ಸ್ಥಾನದಲ್ಲಿರುವ ಭಾರತಕ್ಕೆ ಸಡ್ಡು ಹೊಡೆದಿದೆ.

 

244/6 ಎಂಬಲ್ಲಿದ್ದ ನಾಲ್ಕನೇ ದಿನದಾಟ ಮುಂದುವರಿಸಿದ ವೆಸ್ಟ್‌ಇಂಡೀಸ್, ನಾಯಕ ಜೇಸನ್ ಹೋಲ್ಡರ್ (61) ಹಾಗೂ ಜೋಶುವಾ ಡಿಸಿಲ್ವ (57) ಹೋರಾಟದ ಹೊರತಾಗಿಯೂ 79.1 ಓವರ್‌ಗಳಲ್ಲಿ 317 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರೊಂದಿಗೆ 68 ರನ್ ಗಳಿಸಿದ ಆರಂಭಿಕ ಜಾನ್ ಕ್ಯಾಂಪ್‌ಬೆಲ್ ಹೋರಾಟವು ವ್ಯರ್ಥವಾಯಿತು.

ಇದನ್ನೂ ಓದಿ: 

ಇನ್ನುಳಿದಂತೆ ಅಲ್ಜರಿ ಜೋಸೆಫ್ (24), ಚೆಮರ್ ಹೋಲ್ಡರ್ (13*) ಹಾಗೂ ಶಾನಾನ್ ಗೆಬ್ರಿಯಲ್ (0) ರನ್ ಗಳಿಸಿದರು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ನೀಲ್ ವ್ಯಾಗ್ನರ್ ತಲಾ ಮೂರು ಮತ್ತು ಟಿಮ್ ಸೌಥಿ ಹಾಗೂ ಕೈಲ್ ಜೆಮಿಸನ್ ತಲಾ ಎರಡು ವಿಕೆಟುಗಳನ್ನು ಕಬಳಿಸಿದರು.

 

 

 

ಈ ಮುನ್ನ ಹೆನ್ರಿ ನಿಕೋಲ್ಸ್ ಭರ್ಜರಿ ಶತಕದ (174) ನೆರವಿನಿಂದ ನ್ಯೂಜಿಲೆಂಡ್ 460 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಟಿಮ್ ಸೌಥಿ (32ಕ್ಕೆ 5) ಹಾಗೂ ಕೈಲ್ ಜೆಮಿಸನ್ (34ಕ್ಕೆ 5) ಮಾರಕ ದಾಳಿಗೆ ತತ್ತರಿಸಿದ ವಿಂಡೀಸ್ ಪ್ರಥಮ ಇನ್ನಿಂಗ್ಸ್‌ನಲ್ಲಿ 131 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು