ಶನಿವಾರ, ಫೆಬ್ರವರಿ 29, 2020
19 °C

IND vs NZ | ರಾಹುಲ್, ಅಯ್ಯರ್ ಭರ್ಜರಿ ಬ್ಯಾಟಿಂಗ್: ಭಾರತಕ್ಕೆ 6 ವಿಕೆಟ್ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ಲೆಂಡ್‌: ಇಲ್ಲಿನ ಈಡನ್‌ ಪಾರ್ಕ್‌ ಅಂಗಳದಲ್ಲಿ ಶುಕ್ರವಾರ ಹರಿದ ರನ್‌ ಹೊಳೆಯಲ್ಲಿ ಛಲದಿಂದ ಈಜಿದ ಭಾರತ ತಂಡ ಸುಲಭವಾಗಿ ಗೆಲುವಿನ ದಡ ಸೇರಿತು. ಆತಿಥೇಯ ನ್ಯೂಜಿಲೆಂಡ್‌ ಸೋಲಿನ ಸುಳಿಯಲ್ಲಿ ಸಿಲುಕಿತು.

ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಕೇನ್‌ ವಿಲಿಯಮ್ಸನ್‌ ಬಳಗ 5 ವಿಕೆಟ್‌ಗೆ 203ರನ್‌ಗಳನ್ನು ದಾಖಲಿಸಿತು. ಬೆಟ್ಟದಂತಹ ಈ ಸವಾಲು ವಿರಾಟ್‌ ಕೊಹ್ಲಿ ಪಡೆಗೆ ಕಷ್ಟವೆನಿಸಲೇ ಇಲ್ಲ. ಪ್ರವಾಸಿ ಪಡೆಯು ಇನ್ನು ಆರು ಎಸೆತಗಳು ಬಾಕಿ ಇರುವಂತೆ, ಕೇವಲ 4 ವಿಕೆಟ್‌ ಕಳೆದುಕೊಂಡು ಜಯದ ತೋರಣ ಕಟ್ಟಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆಯನ್ನೂ ಪಡೆಯಿತು.

ನ್ಯೂಜಿಲೆಂಡ್‌ ತಂಡದ ಮೊತ್ತ 200ರ ಗಡಿ ದಾಟಿದಾಗಲೇ ಹಲವರು ಭಾರತದ ಸೋಲು ಖಚಿತ ಎಂದು ಷರಾ ಬರೆದುಬಿಟ್ಟಿದ್ದರು. ಮಿಷೆಲ್‌ ಸ್ಯಾಂಟನರ್‌ ಹಾಕಿದ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರೋಹಿತ್‌ ಶರ್ಮಾ (7) ಔಟಾದಾಗ ಕ್ರಿಕೆಟ್‌ ಪಂಡಿತರ ಈ ‘ಭವಿಷ್ಯ’ ನಿಜವಾಗುವ ಲಕ್ಷಣ ಗೋಚರಿಸಿತ್ತು.

ಈ ಹಂತದಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ (56; 27ಎಸೆತ, 4ಬೌಂಡರಿ, 3ಸಿಕ್ಸರ್‌), ನಾಯಕ ವಿರಾಟ್‌ (45; 32ಎ, 3ಬೌಂ, 1ಸಿ) ಮತ್ತು ಶ್ರೇಯಸ್‌ ಅಯ್ಯರ್‌ (ಔಟಾಗದೆ 58, 29ಎ, 5ಬೌಂ, 3ಸಿ) ಅಬ್ಬರದ ಬ್ಯಾಟಿಂಗ್‌ ಮಾಡಿ ಗೆಲುವು ಭಾರತದ ಪರ ವಾಲುವಂತೆ ಮಾಡಿದರು. ಇದರೊಂದಿಗೆ ಆರು ತಿಂಗಳ ಹಿಂದೆ ನಡೆದಿದ್ದ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಎದುರಾಗಿದ್ದ ಸೋಲಿಗೆ ಕೊಹ್ಲಿ ಪಡೆ ಮುಯ್ಯಿ ತೀರಿಸಿಕೊಂಡಿತು.

ತವರಿನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಅಮೋಘ ಆಟ ಆಡಿದ್ದ ರಾಹುಲ್‌ ಮತ್ತು ಕೊಹ್ಲಿ ಕಿವೀಸ್‌ ನೆಲದಲ್ಲೂ ಮೆರೆದರು.

ಆರಂಭದಿಂದಲೇ ಅಬ್ಬರದ ಆಟಕ್ಕೆ ಅಣಿಯಾದ ಈ ಜೋಡಿ ಒಂಬತ್ತು ಓವರ್‌ಗಳಲ್ಲೇ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿ ಜಯದ ಕನಸಿಗೆ ಬಲ ತುಂಬಿತು.

ತಾವೆದುರಿಸಿದ 23ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಅರ್ಧಶತಕ ಪೂರೈಸಿದ ರಾಹುಲ್‌, 10ನೇ ಓವರ್‌ನಲ್ಲಿ ಈಶ್‌ ಸೋಧಿಗೆ ವಿಕೆಟ್‌ ನೀಡಿದರು. ಇದರ ಬೆನ್ನಲ್ಲೇ ವಿರಾಟ್‌ ಔಟಾದರು. ಬ್ಲೇರ್‌ ಟಿಕ್ನರ್‌ ಅವರ ‘ಲೆಗ್‌ ಕಟರ್‌’ ಎಸೆತವನ್ನು (12ನೇ ಓವರ್‌) ಕೊಹ್ಲಿ, ಡೀಪ್‌ ಮಿಡ್‌ವಿಕೆಟ್‌ನತ್ತ ಬಾರಿಸಲು ಮುಂದಾದರು. ಗಾಳಿಯಲ್ಲಿ ತೇಲಿಬಂದ ಚೆಂಡನ್ನು ಮಾರ್ಟಿನ್‌ ಗಪ್ಟಿಲ್‌ ಮುಂದಕ್ಕೆ ಜಿಗಿದು ಹಿಡಿದ ರೀತಿ ಆಕರ್ಷಕವಾಗಿತ್ತು. ಶಿವಂ ದುಬೆ (13; 9ಎ, 1ಬೌಂ, 1ಸಿ) ಬಂದಷ್ಟೆ ವೇಗವಾಗಿ ಪೆವಿಲಿಯನ್‌ಗೆ ಹಿಂತಿರುಗಿದರು.

ಶ್ರೇಯಸ್‌ ಅಬ್ಬರ: ಒಂದು ಹಂತದಲ್ಲಿ ಆರು ಓವರ್‌ಗಳಲ್ಲಿ 60ರನ್‌ ಗಳಿಸುವ ಕಠಿಣ ಸವಾಲು ಭಾರತದ ಎದುರಿಗಿತ್ತು. ಕ್ರೀಸ್‌ನಲ್ಲಿದ್ದ ಮನೀಷ್‌ ಪಾಂಡೆ (ಔಟಾಗದೆ 14; 12ಎ, 1ಸಿ) ಮತ್ತು ಶ್ರೇಯಸ್‌, ಆತಿಥೇಯರ ದಾಳಿಯನ್ನು ಧ್ವಂಸ ಗೊಳಿಸಿದರು. ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ಅಭಿಮಾನಿಗಳನ್ನು ರಂಜಿಸಿದರು.

ಟಿಮ್‌ ಸೌಥಿ ಹಾಕಿದ 19ನೇ ಓವರ್‌ನ ಕೊನೆಯ ಎಸೆತವನ್ನು ಶ್ರೇಯಸ್‌, ಡೀಪ್ ಮಿಡ್‌ವಿಕೆಟ್‌ನತ್ತ ಸಿಕ್ಸರ್‌ಗೆ ಅಟ್ಟುತ್ತಿದ್ದಂತೆ ಮೈದಾನದಲ್ಲಿ ಸಂಭ್ರಮ ಮೇಳೈಸಿತು. ಗ್ಯಾಲರಿಯಲ್ಲಿ ಕುಳಿತಿದ್ದ ಭಾರತದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ರನ್‌ ಗೋಪುರ ಕಟ್ಟಿದ ಕಿವೀಸ್‌: ಮೊದಲು ಬ್ಯಾಟ್‌ ಮಾಡಿದ ವಿಲಿಯಮ್ಸನ್‌ ಪಡೆ ಮೈದಾನದಲ್ಲಿ ರನ್‌ ಗೋಪುರ ಕಟ್ಟಿತು.

ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಮಾರ್ಟಿನ್‌ ಗಪ್ಟಿಲ್‌ (30; 19ಎ, 4ಬೌಂ, 1ಸಿ) ಮತ್ತು ಕಾಲಿನ್‌ ಮನ್ರೊ (59; 42ಎ, 6ಬೌಂ, 2ಸಿ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 47 ಎಸೆತಗಳಲ್ಲಿ 80ರನ್‌ ಸೇರಿಸಿದರು.

ಈ ಜೋಡಿ ಔಟಾದ ಬಳಿಕ ನಾಯಕ ವಿಲಿಯಮ್ಸನ್‌ ಮತ್ತು (51; 26ಎ, 4ಬೌಂ, 4ಸಿ) ಮತ್ತು ರಾಸ್‌ ಟೇಲರ್‌ (ಔಟಾಗದೆ 54; 27ಎ, 3ಬೌಂ, 3ಸಿ) ಅವರ ಆಟ ರಂಗೇರಿತು. ಇವರು ಕ್ರೀಸ್‌ನಲ್ಲಿದ್ದಷ್ಟು ಕಾಲ ಪ್ರೇಕ್ಷಕರೇ ಕ್ಷೇತ್ರರಕ್ಷಕರಾಗಿದ್ದರು!

ಇವರು ನಾಲ್ಕನೇ ವಿಕೆಟ್‌ಗೆ 61ರನ್‌ ಕಲೆಹಾಕಿ ಆತಿಥೇಯರು ದೊಡ್ಡ ಮೊತ್ತ ಪೇರಿಸಲು ನೆರವಾದರು.

ಸ್ಕೋರ್‌ ವಿವರ
ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 203

ಕಾಲಿನ್‌ ಮನ್ರೋ 59, ಕೇನ್‌ ವಿಲಿಯಮ್ಸನ್‌ 51, ರಾಸ್ ಟೇಲರ್‌ ಔಟಾಗದೆ 54
ಜಸ್‌ಪ್ರೀಸ್‌ ಬೂಮ್ರಾ 31ಕ್ಕೆ 1 ವಿಕೆಟ್‌
ಯಜುವೇಂದ್ರ ಚಾಹಲ್‌ 32ಕ್ಕೆ 1 ವಿಕೆಟ್‌
ಶಿವಂ ದುಬೆ 32ಕ್ಕೆ 1 ವಿಕೆಟ್‌
ರವೀಂದ್ರ ಜಡೇಜಾ 18ಕ್ಕೆ 1 ವಿಕೆಟ್‌
ಶಾರ್ದೂಲ್‌ ಠಾಕೂರ್‌ 44ಕ್ಕೆ 1 ವಿಕೆಟ್‌

ಭಾರತ: 19 ಓವರ್‌ಗಳಲ್ಲಿ 4 ವಿಕೆಟ್‌ಗೆ 204
ಶ್ರೇಯಸ್‌ ಅಯ್ಯರ್‌ ಔಟಾಗದೆ 58, ಕೆ.ಎಲ್‌ ರಾಹುಲ್‌ 56, ವಿರಾಟ್‌ ಕೊಹ್ಲಿ 45
ಈಶ್‌ ಸೋದಿ 36ಕ್ಕೆ 2 ವಿಕೆಟ್‌
ಬ್ಲೇರ್ ಟಿಕ್ನರ್ 34ಕ್ಕೆ 1 ವಿಕೆಟ್‌
ಮಿಚೆಲ್ ಸ್ಯಾಂಟನರ್ 50ಕ್ಕೆ 1 ವಿಕೆಟ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು