ಫೈನಲ್‌ನಲ್ಲಿ ಭಾರತ– ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮೈದಾನಕ್ಕಿಳಿದ ಅನುಭವ ಹೇಳಿ
ಇದನ್ನು ಪದಗಳಲ್ಲಿ ಹೇಳಲು ಸ್ವಲ್ಪ ಕಷ್ಟವಾಗುತ್ತದೆ. ನೆದರ್ಲೆಂಡ್ಸ್ ಪೌರತ್ವ ಇದ್ದ ಕಾರಣ ನನಗೆ ಈ ಅವಕಾಶ ದೊರೆಯಿತು. ಈ ಟೂರ್ನಿಯಲ್ಲಿ ಮೊದಲ ಬಾರಿ ನಾನು ಭಾರತ ತಂಡ ಆಡುತ್ತಿರುವ ಪಂದ್ಯಕ್ಕೆ ಅಂಪೈರ್ ಆಗಿದ್ದೆ. ಆದರೆ ತಟಸ್ಥ ದೇಶದ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಕರ್ತವ್ಯಪ್ರಜ್ಞೆ ಮನಸ್ಸಿನಲ್ಲಿ ಇದ್ದೇ ಇತ್ತು.
ಯುವ ವಿಶ್ವಕಪ್ ಕಾರ್ಯನಿರ್ವಹಿಸಿದ ಅನುಭವ ಹೇಗಿತ್ತು?
ಮಲೇಷ್ಯಾದಲ್ಲಿ ನಡೆದ ಮಹಿಳಾ ಯುವ ವಿಶ್ವಕಪ್‌ನ 9 ಪಂದ್ಯಗಳಿಗೆ ಅಂಪೈರ್ ಆಗಿದ್ದೆ. ಆದರೆ 2022ರ 19 ವರ್ಷದೊಳಗಿನ ಪುರುಷರ ವಿಶ್ವಕಪ್‌ನಲ್ಲೂ ಅಂಪೈರ್ ಆಗಿದ್ದ ಕಾರಣ ನನಗೆ ಇದು ಹೊಸದಾಗಿರಲಿಲ್ಲ. ಜೊತೆಗೆ 2023ರ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿ (ಸೂಪರ್ ಲೀಗ್)ಯಲ್ಲೂ ಅಂಪೈರ್ ಆಗಿದ್ದೆ. ನೆದರ್ಲೆಂಡ್ಸ್ ಜೊತೆ, ಪಾಕಿಸ್ತಾನ, ಇಂಗ್ಲೆಂಡ್, ಐರ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಅಲ್ಲಿ ಆಡಿದ್ದವು. ಆಗ ಅಂಪೈರ್‌ಗಳಾದ ರಿಚರ್ಡ್ ಇಲಿಂಗ್‌ವರ್ತ್ (ಇಂಗ್ಲೆಂಡ್), ಪಾಲ್ ರೈಫಲ್ (ಆಸ್ಟ್ರೇಲಿಯಾ) ಅವರ ಜೊತೆ ಕಾರ್ಯನಿರ್ವಹಿಸುವ ಅವಕಾಶ ದೊರಕಿತ್ತು. ಇದು ನನಗೆ ಅನುಭವ ಹೆಚ್ಚಿಸಿತು.
ವಿಶೇಷ ಎನಿಸಿದ ಸಂದರ್ಭ ಇದೆಯೇ?
ಮಲೇಷ್ಯಾದ ಕುಚಿಂಗ್ ನಗರದಲ್ಲಿ ನಾನು ಎರಡು ಪಂದ್ಯಗಳಿಗೆ ಅಂಪೈರ್ ಆಗಿದ್ದೆ. ಅಲ್ಲಿ ಮಳೆಯಿಂದಾಗಿ ಪಂದ್ಯಗಳನ್ನು ಆಡಿಸುವುದು ಪಂದ್ಯದ ಅಧಿಕಾರಿಗಳಿಗೆ ಸವಾಲಾಗಿತ್ತು. ಕೆಲವು ಪಂದ್ಯಗಳನ್ನು 13 ಓವರುಗಳಿಗೆ ಮೊಟಕುಗೊಳಿಸಲಾಯಿತು. ಇಂಥ ಒಂದು ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡವನ್ನು, ನೈಜೀರಿಯಾ ಎರಡು ರನ್‌ಗಳಿಂದ ಸೋಲಿಸಿತು. ಅಚ್ಚರಿಯ ಫಲಿತಾಂಶ ಕಂಡ ಪಂದ್ಯದಲ್ಲಿ ನಾನು ಆನ್‌ಫೀಲ್ಡ್ ಅಂಪೈರ್ ಆಗಿದ್ದೆ. ಐಸಿಸಿ ವಿಶ್ವಕಪ್ ಸೂಪರ್ ಲೀಗ್ (ಅರ್ಹತಾ ಸುತ್ತು) ಪಂದ್ಯದಲ್ಲಿ ಇಂಗ್ಲೆಂಡ್‌ನ ಇಯಾನ್ ಮಾರ್ಗನ್ ಅವರು ಆಡಿದ್ದ ಕೊನೆಯ ಪಂದ್ಯಕ್ಕೂ ನಾನು ಅಂಪೈರ್ ಆಗಿದ್ದೆ. ಅದೂ ನನಗೆ ನೆನಪಿನಲ್ಲುಳಿಯುವ ಪಂದ್ಯ.
ನೆದರ್ಲೆಂಡ್ಸ್‌ನಲ್ಲಿ ಅಂಪೈರಿಂಗ್ ಅವಕಾಶಗಳು ಹೇಗೆ?
ಅಲ್ಲಿ ದೇಶಿ ಕ್ರಿಕೆಟ್ ನಮ್ಮ ರೀತಿಯಲ್ಲಿಲ್ಲ. ಏಕದಿನ ಮತ್ತ ಟಿ20 ಲೀಗ್ ಪಂದ್ಯಗಳು ನಡೆಯುತ್ತವೆ. ಇವುಗಳಿಗೆ ಅಂಪೈರಿಂಗ್ ಮಾಡುತ್ತಿದ್ದೆ. ಆದರೆ ನೆದರ್ಲೆಂಡ್ಸ್ ಐಸಿಸಿಯ ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರವಲ್ಲದ ಕಾರಣ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಕಡಿಮೆ. ಆದರೆ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳ ವೇಳೆ (2022–23) ನನ್ನ ನಿರ್ವಹಣೆಯ ಮೇಲಿನ ವರದಿ ಬಹುಶಃ ನನಗೆ ಹೆಚ್ಚು ಅವಕಾಶಗಳು ಸಿಗಲು ಕಾರಣವಾಗಿರಬಹುದು.
ನಿಮ್ಮ ಆಟದ ಹಿನ್ನೆಲೆ ಬಗ್ಗೆ?
ನಾನು ದಾವಣಗೆರೆಯಲ್ಲಿ ಕ್ಲಬ್ ಕ್ರಿಕೆಟ್ ಆಡುವಾಗ ವಿಕೆಟ್ ಕೀಪಿಂಗ್ ಮಾಡುತ್ತಿದ್ದೆ. ಆದರೆ ಅದಕ್ಕಿಂತ ಮೇಲಿನ ಮಟ್ಟದಲ್ಲಿ ಆಡಲಾಗಲಿಲ್ಲ. 2006ರಲ್ಲಿ ಆಡುವುದನ್ನು ಬಿಟ್ಟು ಅಂಪೈರಿಂಗ್‌ಗೆ ಇಳಿದೆ. ಕೆೆೆಎಸ್‌ಸಿಎ ಲೀಗ್ ಪಂದ್ಯಗಳಿಗೆ ಅಂಪೈರಿಂಗ್ ಮಾಡತೊಡಗಿದ್ದೆ. ನನ್ನ ಕೋಚ್ ಪ್ರಕಾಶ್ ಪವಾರ್ ಅವರ ಸಲಹೆ ಮೇರೆಗೆ ನಾನು ಅಂಪೈರಿಂಗ್‌ಗೆ ಇಳಿದಿದ್ದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.