ಶನಿವಾರ, ಜನವರಿ 22, 2022
16 °C
ಪಾಕಿಸ್ತಾನದ ಬಾಬರ್ ಆಜಂ ನಾಯಕ; ದಕ್ಷಿಣ ಆಫ್ರಿಕಾ, ಶ್ರೀಲಂಕಾ ಆಟಗಾರರಿಗೂ ಅವಕಾಶ

ಐಸಿಸಿ ’ವಿಶ್ವಕಪ್‘ ತಂಡದಲ್ಲಿ ಭಾರತದ ಆಟಗಾರರಿಲ್ಲ! ಪಾಕಿಸ್ತಾನದ ಬಾಬರ್ ಆಜಂ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಟ್ವೆಂಟಿ–20 ವಿಶ್ವಕಪ್‌ಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಘೋಷಿಸಿರುವ ’ಟೂರ್ನಿಯ ತಂಡ‘ದಲ್ಲಿ ಭಾರತದ ಯಾವ ಆಟಗಾರರೂ ಸ್ಥಾನ ಗಳಿಸಲಿಲ್ಲ.

ಪಾಕಿಸ್ತಾನದ ನಾಯಕ ಬಾಬರ್ ಆಜಂ ನಾಯಕನಾಗಿರುವ ತಂಡದಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಸೇರಿದಂತೆ ಆರು ರಾಷ್ಟ್ರಗಳ ಆಟಗಾರರು ಇದ್ದಾರೆ.

ಸೂಪರ್ 12ರ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನಕ್ಕೆ 10 ವಿಕೆಟ್‌ಗಳಿಂದ ಮಣಿದಿತ್ತು. ನ್ಯೂಜಿಲೆಂಡ್‌ ವಿರುದ್ಧವೂ ಸೋತ ನಂತರ ತಂಡದ ಸೆಮಿಫೈನಲ್ ಆಸೆ ಕಮರಿಹೋಗಿತ್ತು. ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೂ ವಿರಾಟ್ ಕೊಹ್ಲಿ ಬಳಗಕ್ಕೆ ನಾಲ್ಕರ ಘಟ್ಟಕ್ಕೇರಲು ಸಾಧ್ಯವಾಗಲಿಲ್ಲ.  

ಸೋಲಿನ ನಡುವೆಯೂ ಭಾರತದ ಕೆಲವು ಆಟಗಾರರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಆದರೆ ಅವರನ್ನು ಆಯ್ಕೆ ಮಾಡಲು ಸಮಿತಿ ಸದಸ್ಯರು ಮುಂದಾಗಲಿಲ್ಲ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಕೂಡ ಸೆಮಿಫೈನಲ್‌ ಪ್ರವೇಶಿಸಲಿಲ್ಲ. ಆದರೆ ದಕ್ಷಿಣ ಆಫ್ರಿಕಾದ ಏಡನ್ ಮರ್ಕರಮ್‌, ಎನ್ರಿಚ್‌ ನಾರ್ಕಿಯಾ, ಶ್ರೀಲಂಕಾದ ಚರಿತ್ ಅಸಲಂಕ ಮತ್ತು ವಾಣಿಂದು ಹಸರಂಗ ಅವರ ಹೆಸರು ತಂಡದಲ್ಲಿದೆ.

ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್ ಅಪ್‌ ನ್ಯೂಜಿಲೆಂಡ್‌, ಸೆಮಿಫೈನಲ್‌ಗೇರಿದ್ದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ಪಟ್ಟಿಯಲ್ಲಿ ಆದ್ಯತೆ ಪಡೆದುಕೊಂಡಿದ್ದಾರೆ. 

ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿರುವ ಆಸ್ಟ್ರೇಲಿಯಾದ ಅರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌, ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಮತ್ತು ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ತಂಡದಲ್ಲಿದ್ದಾರೆ. ಫೈನಲ್ ಪಂದ್ಯದಲ್ಲಿ ಈ ಮೂವರು ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದ್ದರು.  

’ಯಾವುದೇ ತಂಡದ ಆಯ್ಕೆಯಂತೆ ಈ ತಂಡವನ್ನು ಕೂಡ ಸಾಕಷ್ಟು ಚರ್ಚೆಯ ನಂತರ, ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆರಿಸಲಾಗಿದೆ. ಸೂಪರ್ 12ರ ಮತ್ತು ನಂತರದ ಹಂತದ ಪಂದ್ಯಗಳ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ. ಇದು ಭಾರಿ ಸವಾಲಿನ ಕಾರ್ಯವಾಗಿತ್ತು‘ ಎಂದು ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ವೆಸ್ಟ್‌ ಇಂಡೀಸ್‌ನ ಮಾಜಿ ವೇಗದ ಬೌಲರ್ ಇಯಾನ್ ಬಿಷಪ್‌ ಅಭಿಪ್ರಾಯಪಟ್ಟಿದ್ದಾರೆ.

ತಂಡ: ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಜೋಸ್ ಬಟ್ಲರ್‌ (ವಿಕೆಟ್ ಕೀಪರ್‌; ಇಂಗ್ಲೆಂಡ್‌), ಬಾಬರ್ ಆಜಂ (ನಾಯಕ, ಪಾಕಿಸ್ತಾನ), ಚರಿತ್ ಅಸಲಂಕಾ (ಶ್ರೀಲಂಕಾ), ಏಡನ್‌ ಮರ್ಕರಮ್‌ (ದಕ್ಷಿಣ ಆಫ್ರಿಕಾ), ಮೋಯಿನ್ ಅಲಿ (ಇಂಗ್ಲೆಂಡ್‌), ವಾಣಿಂದು ಹಸರಂಗ (ಶ್ರೀಲಂಕಾ), ಆ್ಯಡಂ ಜಂಪಾ (ಆಸ್ಟ್ರೇಲಿಯಾ), ಜೋಶ್ ಹ್ಯಾಜಲ್‌ವುಡ್‌ (ಆಸ್ಟ್ರೇಲಿಯಾ), ಟ್ರೆಂಟ್ ಬೌಲ್ಟ್‌ (ನ್ಯೂಜಿಲೆಂಡ್‌), ಎನ್ರಿಚ್ ನಾರ್ಕಿಯಾ (ದಕ್ಷಿಣ ಆಫ್ರಿಕಾ). 12ನೇ ಆಟಗಾರ: ಶಹೀನ್ ಶಾ ಅಫ್ರಿದಿ (ಪಾಕಿಸ್ತಾನ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು