ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಗೆಲುವಿಗೆ ದಶಕದ ಸಂಭ್ರಮ; 'ಜೀವಮಾನದ ಕ್ಷಣ' ಎಂದ ವೀರು

Last Updated 2 ಏಪ್ರಿಲ್ 2021, 6:32 IST
ಅಕ್ಷರ ಗಾತ್ರ

ಹೊಸದೆಹಲಿ: 10 ವರ್ಷಗಳ ಹಿಂದೆ ಅಂದಿನ ಈ ದಿನದಂದು (2011 ಏಪ್ರಿಲ್ 2) ಭಾರತ ಕ್ರಿಕೆಟ್ ತಂಡವು 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಪ್ರಶಸ್ತಿ ಜಯಿಸಿತ್ತು.

ಈ ಸ್ಮರಣೀಯ ನೆನಪುಗಳಿಗೆ ಮತ್ತೊಮ್ಮೆ ತಾಜಾತನ ತುಂಬಿರುವ ವಿಶ್ವಕಪ್ ವಿಜೇತ ತಂಡದ ಸದಸ್ಯ ಹಾಗೂ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, 'ಜೀವಮಾನದ ಕ್ಷಣ' ಎಂದು ಬಿಂಬಿಸಿದ್ದಾರೆ.

2011ರ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದ್ದ, ಮಹೇಂದ್ರ ಸಿಂಗ್ ಧೋನಿ ಬಳಗವು ವಿಶ್ವಕಪ್ ಕಿರೀಟವನ್ನು ಎತ್ತಿ ಹಿಡಿದಿತ್ತು.

ಟೂರ್ನಿಯಲ್ಲಿ ಎಂಟು ಪಂದ್ಯಗಳನ್ನು ಆಡಿದ್ದ ವೀರು, 47.50ರ ಸರಾಸರಿಯಲ್ಲಿ ಒಟ್ಟು 380 ರನ್ ಗಳಿಸಿದ್ದರು. ಇದರಲ್ಲಿ ಬಾಂಗ್ಲಾದೇಶ ವಿರುದ್ಧ ಟೂರ್ನಿಯಲ್ಲೇ ವೈಯಕ್ತಿಕ ಗರಿಷ್ಠ ಮೊತ್ತ 175 ರನ್ ಸೇರಿತ್ತು.

275 ರನ್ ಗುರಿ ಬೆನ್ನತ್ತಿದ್ದ ಭಾರತ ಒಂದು ಹಂತದಲ್ಲಿ 114 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಗೌತಮ್ ಗಂಭೀರ್ ಹಾಗೂ ನಾಯಕ ಧೋನಿ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗಿ ಭಾರತವನ್ನು ಗೆಲುವಿನ ದಡ ಸೇರಿಸಿದರು.

ಗಂಭೀರ್ 97 ಮತ್ತು ನಾಯಕ ಧೋನಿ ಅಜೇಯ 91 ರನ್ ಗಳಿಸಿದ್ದರು. ನುವಾನ್ ಕುಲಶೇಖರ ದಾಳಿಯಲ್ಲಿ ಧೋನಿ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಅಭಿಮಾನಿಗಳು ಗೆಲುವಿನ ಸಂಭ್ರಮದಲ್ಲಿ ತೇಲಾಡಿದರು.

ಧೋನಿ ನಾಯಕತ್ವದಲ್ಲೇ 2007ರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಅನ್ನು ಭಾರತ ಜಯಿಸಿತ್ತು.

'ಧೋನಿ ಫಿನಿಷೆಸ್ ಆಫ್ ಇನ್ ಸ್ಟೈಲ್, ಎ ಮ್ಯಾಗ್ನಿಫಿಸೆಂಟ್ ಸ್ಟ್ರೈಕ್ ಇನ್‌ಟು ದಿ ಕ್ರೌಡ್...ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್ ಆಫ್ಟರ್ 28 ಇಯರ್ಸ್' ಎಂಬ ರವಿಶಾಸ್ತ್ರಿ ಮಾತುಗಳು ಈಗಲೂ ಕ್ರಿಕೆಟ್ ಅಭಿಮಾನಿಗಳ ಕುವಿಯಲ್ಲಿ ಗುನುಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT