ಚೇಸಿಂಗ್ ಮೂಲಕವೇ ಶತಕದ ಭೇಟೆ ಆರಂಭ: ವಿರಾಟ್ ಮೊದಲ ಏಕದಿನ ಸೆಂಚುರಿಗೆ 10 ವರ್ಷ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಸಿಡಿಸಿದ ಮೊದಲ ಶತಕಕ್ಕೆ ಇಂದಿಗೆ 10 ವರ್ಷ ಪೂರ್ಣಗೊಂಡಿತು. ಶ್ರೀಲಂಕಾ ವಿರುದ್ಧ ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ 2009ರ ಡಿಸೆಂಬರ್ 24ರಂದು ನಡೆದ ಪಂದ್ಯದಲ್ಲಿ 107 ರನ್ ಬಾರಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ ಪಡೆ 315 ರನ್ ಗಳಿಸಿತ್ತು. ಪ್ರವಾಸಿ ಪಡೆಯ ಉಪುಲ್ ತರಂಗಾ 118 ರನ್ ಗಳಿಸಿದ್ದರು. ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಕೇವಲ 23 ರನ್ ಆಗುವುದರೊಳಗೆ ಪೆವಿಲಿಯನ್ ಸೇರಿಕೊಂಡಿದ್ದರು.
ಬಳಿಕ ಗೌತಮ್ ಗಂಭೀರ್ ಜೊತೆ ಸೇರಿ ಉತ್ತಮ ಇನಿಂಗ್ಸ್ ಕಟ್ಟಿದ ಕೊಹ್ಲಿ 224 ರನ್ಗಳ ಜೊತೆಯಾಟ ನೀಡಿದರು. ಕೊಹ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರೆ, ಗಂಭೀರ್ ಔಟಾಗದೇ 150 ರನ್ ಕಲೆಹಾಕಿದರು. ಈ ಇಬ್ಬರ ಬ್ಯಾಟಿಂಗ್ ಬಲದಿಂದ ಭಾರತ ಏಳು ವಿಕೆಟ್ಗಳ ಗೆಲುವು ಸಾಧಿಸಿತ್ತು.
It was on December 24, 2009, when India skipper Virat Kohli registered his first century in the 50-over format of the game.
Read @ANI story | https://t.co/LwjJt1d0VT pic.twitter.com/E7gudGIdZk
— ANI Digital (@ani_digital) December 24, 2019
ಸದ್ಯ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 242 ಪಂದ್ಯಗಳ 233 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ ಖಾತೆಯಲ್ಲಿ 43 ಶತಕಗಳು ಇವೆ. ಇದುವರೆಗೆ ಒಟ್ಟು 401 ಪಂದ್ಯಗಳನ್ನು ಆಡಿರುವ ಕೊಹ್ಲಿ 444 ಇನಿಂಗ್ಸ್ಗಳಿಂದ 70 ಶತಕಗಳನ್ನು ಗಳಿಸಿದ್ದಾರೆ. ಆ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ (100) ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (71) ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.