ಗುರುವಾರ , ಮಾರ್ಚ್ 23, 2023
30 °C

ಐಸಿಸಿ ವರ್ಷದ ಏಕದಿನ ಆಟಗಾರನಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಜಮ್ 2022ರ ಐಸಿಸಿ ಪುರುಷರ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಸತತ ಎರಡನೇ ವರ್ಷ ಈ ಗೌರವ ಪಡೆಯುತ್ತಿದ್ದಾರೆ.  ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಆಡಮ್ ಝಂಪಾ, ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರ ಶಾಯ್ ಹೋಪ್ ಮತ್ತು ಜಿಂಬಾಬ್ವೆಯ ಆಲ್-ರೌಂಡರ್ ಸಿಕಂದರ್ ರಜಾ ಅವರು ಈ ಪ್ರಶಸ್ತಿಗಾಗಿ ಕಣದಲ್ಲಿದ್ದರು.

2022 ರಲ್ಲಿ ಕೇವಲ ಒಂಬತ್ತು ಏಕದಿನ ಪಂದ್ಯಗಳನ್ನು ಆಡಿರುವ ಅಜಮ್‌, ಮೂರು ಶತಕ ದಾಖಲಿಸಿದ್ದಾರೆ. ಐದು ಅರ್ಧ ಶತಕಗಳನ್ನು ಗಳಿಸಿದ್ದಾರೆ ಮತ್ತು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಬ್ಯಾಂಟಿಂಗ್‌ನಲ್ಲಿ ವಿಫಲರಾಗಿದ್ದಾರೆ. 

ಜುಲೈ 2021 ರಿಂದ ಪುರುಷರ ಏಕದಿನ ಆಟಗಾರರ ಶ್ರೇಯಾಂಕದಲ್ಲಿ ಬಾಬರ್‌ ಅಗ್ರಸ್ಥಾನದಲ್ಲಿದ್ದಾರೆ. 2022 ರಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ 84.87 ರ ಅದ್ಭುತ ಸರಾಸರಿಯಲ್ಲಿ 679 ರನ್‌ ಗಳಿಸಿದ್ದಾರೆ.  

ಪಾಕಿಸ್ತಾನ  ಏಕದಿನ ತಂಡದ ನಾಯಕನಾಗಿ ಅಜಮ್ ಸಾಧನೆ ಅತ್ಯುತ್ತಮವಾಗಿದೆ.  ಮೂರು ಸರಣಿಗಳಲ್ಲಿ ಮೂರನ್ನು ಗೆದ್ದಿದ್ದಾರೆ. ಪಾಕಿಸ್ತಾನವು 2022ರಲ್ಲಿ ಆಡಿರುವ ಒಂಬತ್ತು ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು (ಆಸ್ಟ್ರೇಲಿಯಾ ವಿರುದ್ಧ) ಮಾತ್ರ ಸೋತಿದೆ.

ಲಾಹೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 114 ರನ್ ಗಳಿಕೆ ಬಾಬರ್‌ ಅವರ ಈ ವರ್ಷದ ಅತ್ಯುತ್ತಮ ಗಳಿಕೆಯಾಗಿದೆ. ಆಸ್ಟ್ರೇಲಿಯಾದ ವಿರುದ್ಧ 349 ರನ್ನುಗಳ ಗುರಿ ಬೆನ್ನತ್ತಿ ಗೆದ್ದ ಪಂದ್ಯದಲ್ಲಿ ಬಾಬರ್‌ ಆಟ ಆಕರ್ಷಕವಾಗಿತ್ತು. ತಂಡಕ್ಕೆ 187 ಎಸೆತಗಳಲ್ಲಿ 231 ರನ್‌ಗಳ ಅಗತ್ಯವಿದ್ದಾಗ ಕ್ರೀಸ್‌ಗಿಳಿದ ಅಜಮ್‌, ತಂಡಕ್ಕೆ 6 ವಿಕೆಟ್‌ಗಳ ಜಯ ತಂದುಕೊಟ್ಟರು. ಕೇವಲ 73 ಎಸೆತಗಳಲ್ಲಿ ಶತಕ  ದಾಖಲಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು