ಬುಧವಾರ, ಸೆಪ್ಟೆಂಬರ್ 22, 2021
29 °C
ಎರಡನೇ ಟಿ–20 ಪಂದ್ಯದಲ್ಲಿ ಪಾಕ್‌ಗೆ 7 ರನ್‌ ಜಯ

ಟಿ-20 2ನೇ ಪಂದ್ಯ: ಪೂರನ್‌ ವೀರೋಚಿತ ಆಟ ವ್ಯರ್ಥ, ಪಾಕ್‌ಗೆ 7 ರನ್‌ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಪ್ರಾವಿಡೆನ್ಸ್‌, ಗಯಾನಾ: ಅಂತಿಮ ಕ್ಷಣಗಳಲ್ಲಿ ನಿಕೋಲಸ್‌ ಪೂರನ್‌ (33 ಎಸೆತಗಳಲ್ಲಿ ಅಜೇಯ 62) ಎದುರಾಳಿಗಳಲ್ಲಿ ನಡುಕ ಹುಟ್ಟಿಸುವ ಆಟವಾಡಿದರೂ, ಅದನ್ನು ತಾಳಿಕೊಂಡ ಪಾಕಿಸ್ತಾನ ಶನಿವಾರ ರಾತ್ರಿ ನಡೆದ ಎರಡನೇ ಟಿ–20 ಪಂದ್ಯದಲ್ಲಿ ಏಳು ರನ್‌ಗಳ ರೋಚಕ ಜಯಪಡೆಯುವಲ್ಲಿ ಯಶಸ್ವಿಯಾಯಿತು.

ವೆಸ್ಟ್‌ ಇಂಡೀಸ್‌ ಎಡಗೈ ಬ್ಯಾಟ್ಸ್‌ಮನ್‌ ಪೂರನ್‌ ಸ್ಫೋಟಕ ಇನಿಂಗ್ಸ್‌ ಆಡಿ ಆರು ಸಿಕ್ಸರ್‌, ನಾಲ್ಕು ಬೌಂಡರಿಗಳನ್ನು ಸಿಡಿಸಿದರು. ಅವರ ‘ಸುನಾಮಿ’ ಆಟದ ಹೊರತಾಗಿಯೂ ವೆಸ್ಟ್‌ ಇಂಡೀಸ್‌ ನಿಗದಿತ ಓವರುಗಳನ್ನು 4 ವಿಕೆಟ್‌ಗೆ 150 ರನ್‌ಗಳೊಡನೆ ಪೂರೈಸಿತು. ಮೊದಲು ಬ್ಯಾಟಿಂಗ್‌ ಮಾಡಲು ಕಳುಹಿಸಲ್ಪಟ್ಟ ಪ್ರವಾಸಿ ಪಾಕ್‌ ತಂಡ 8 ವಿಕೆಟ್‌ಗೆ 157 ರನ್‌ ಗಳಿಸಿತ್ತು.

‌ಪ್ರವಾಸಿ ತಂಡದ ನಾಯಕ ಬಾಬರ್‌ ಆಜಂ (51) ಮತ್ತು ಮೊಹಮ್ಮದ್‌ ರಿಜ್ವಾನ್‌ (46) ಎರಡನೇ ವಿಕೆಟ್‌ಗೆ 67 ರನ್‌ ಸೇರಿಸಿ ಇನಿಂಗ್ಸ್‌ಗೆ ಬಲ ತುಂಬಿದ್ದರು. ಆದರೆ ಉಳಿದವರು ಪ್ರತಿರೋಧ ತೋರಲಿಲ್ಲ. ಜೇಸನ್‌ ಹೋಲ್ಡರ್‌ (26ಕ್ಕೆ4) ಮತ್ತು ಡ್ವೇನ್‌ ಬ್ರಾವೊ (24ಕ್ಕೆ2) ಕಡಿವಾಣ ಹಾಕಿದರು. ಉತ್ತಮ ಆರಂಭದ ನಂತರ ಮುಗ್ಗರಿಸಿದ ಪಾಕಿಸ್ತಾನ  ಕೊನೆಯ ನಾಲ್ಕು ಓವರುಗಳಲ್ಲಿ 23 ರನ್ನಿಗೆ ಆರು ವಿಕೆಟ್‌ ಕಳೆದುಕೊಂಡಿತು.

ಬಾರ್ಬಾಡೋಸ್‌ನಲ್ಲಿ ಬುಧವಾರ ನಡೆದ ಮೊದಲ ಟಿ–20 ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಮಂಗಳವಾರ ಮೂರನೇ ಪಂದ್ಯ ನಡೆಯಲಿದೆ. ಜಮೈಕಾದಲ್ಲಿ ಎರಡು ಟೆಸ್ಟ್‌ಗಳ ಸರಣಿ ನಡೆಯಲಿದೆ.

ಸ್ಕೋರುಗಳು:

ಪಾಕಿಸ್ತಾನ: 20 ಓವರುಗಳಲ್ಲಿ 8 ವಿಕೆಟ್‌ಗೆ 157 (ಶಾರ್ಜಿಲ್‌ ಖಾನ್‌ 20, ಮೊಹಮ್ಮದ್‌ ರಿಜ್ವಾನ್‌ 46, ಬಾಬರ್‌ ಆಜಂ 51; ಜೇಸನ್‌ ಹೋಲ್ಡರ್‌ 26ಕ್ಕೆ4, ಡ್ವೇನ್‌ ಬ್ರಾವೊ 24ಕ್ಕೆ2)

ವೆಸ್ಟ್‌ ಇಂಡೀಸ್‌: 20 ಓವರುಗಳಲ್ಲಿ 4 ವಿಕೆಟ್‌ಗೆ 150 (ಎವಿನ್‌ ಲೂಯಿಸ್ 35, ನಿಕೋಲಸ್‌ ಪೂರನ್‌ ಔಟಾಗದೇ 62)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು